ಮಂಗಳವಾರ, ನವೆಂಬರ್ 24, 2020
26 °C
ವಸತಿ ಸಚಿವ ಸೋಮಣ್ಣ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ

ಮನೆಕಟ್ಟಲು ಅನುದಾನ, ಹಕ್ಕುಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಬಾಕಿ ಇರುವ ಸರ್ಕಾರಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿ ಅಧಿಕೃತ ಫಲಾನುಭವಿಗಳ ಪಟ್ಟಿ ನೀಡಿದ ತಕ್ಷಣವೇ ಅನುದಾನ ಜಮಾ ಮಾಡಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 14,868 ವಸತಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಿ ತಡೆಹಿಡಿಯಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಸಂಸದರು ಹಾಗೂ ಶಾಸಕರೆಲ್ಲ ಮುತೂವರ್ಜಿಯಿಂದ ಮರು ಪರಿಶೀಲಿಸಿ ಎರಡು ದಿನಗಳಲ್ಲಿ ಪಟ್ಟಿ ನೀಡಬೇಕು. ನಿಜವಾದ ಬಡವರು ಹೊರಗುಳಿಯಬಾರದು. ಆಶ್ರಯ ಮನೆಗಳಿಗೆ ಹಕ್ಕುಪತ್ರ ವಿತರಿಸಲು ಕೂಡಲೇ ಗ್ರಾಮಸಭೆಗಳನ್ನು ಮಾಡಿಸಬೇಕು. ಸದ್ಯಕ್ಕೆ ರಾಯಚೂರು ಜಿಲ್ಲೆಯಯಲ್ಲಿ ವಸತಿಗೆ ಸಂಬಂಧಿಸಿದ ಸಮಸ್ಯೆಗಳನ್ನೆಲ್ಲ ಪರಿಹಾರ ಮಾಡಲಾಗುವುದು ಎಂದರು.

'ರಾಮನ ಲೆಕ್ಕ, ಕೃಷ್ಣನ ಲೆಕ್ಕ ಪತ್ತೆಹಚ್ಚಬೇಕು. ಸಮಗ್ರ ವಿವರ ಒದಗಿಸಿದರೆ, ತಕ್ಷಣವೇ ಆರ್‌ಟಿಜಿಎಸ್ ಮಾಡಿಸುತ್ತೇವೆ. ವಸತಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್‌ ಅವರು ಕೂಡಲೇ ಪ್ರತ್ಯೇಕ ಸಭೆ ನಡೆಸಿ, ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಬಡವರಿಗೆ ಅನ್ಯಾಯ ಆಗದಂತೆ, ಅಧಿಕಾರಿಗಳು ಕೆಲಸ ಮಾಡಬೇಕು. ಜನರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಹೃದಯವಂತಿಕೆಯಿಂದ ಬಳಸಿಕೊಳ್ಳಬೇಕು. ಬಿಡಿಗಾಸಿಗಾಗಿ ಕಾಮಗಾರಿ ಸ್ಥಗಿತಗೊಳಿಸಬಾರದು’ ಎಂದು ಸೂಚಿಸಿದರು.

ರಾಜ್ಯದ ವಿವಿಧೆಡೆ ಆಶ್ರಯ ಕಾಲನಿಯಲ್ಲಿ ಮೂಲ ಸೌಕರ್ಯ ಮಾಡಿಕೊಡಲು ₹800 ಕೋಟಿ ಕೇಳಲಾಗಿದೆ. ಸದ್ಯ ₹200 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ರಾಯಚೂರಿನಲ್ಲಿ ಕೆಎಚ್‌ಬಿ ಹೊಸ ಬಡಾವಣೆ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟರೆ ಕೂಡಲೇ ಮನೆಗಳನ್ನು ಕಟ್ಟಿ ಕೊಡುತ್ತೇವೆ. ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸಭೆ ನಡೆಸಿ ಜಾಗ ನಿಗದಿ ಮಾಡಬೇಕು. ಪ್ರವಾಹದಿಂದ ಹಾನಿಯಾದ 1,516 ಮನೆಗಳನ್ನು ಕಟ್ಟಿ ಕೊಡಲು ವಸತಿ ಇಲಾಖೆಯಿಂದ ಅನುದಾನ ನೀಡಲಾಗುವುದು. ಅಧಿಕಾರಿಗಳು ಹೃದಯ ಶ್ರೀಮಂತಿಕೆ ತೋರಿಸಿ, ಬಡವರಿಗೆ ಅನುಕೂಲ ಕಲ್ಪಿಸಿ ಎಂದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಮನೆಗಳಾಗಿಲ್ಲ. 2015-16 ರಿಂದ ಸರ್ಕಾರದಿಂದ ₹13 ಕೋಟಿ ಬಾಕಿ ಇದೆ. 1476 ವಸತಿಗಳ ಅನುದಾನ ತಡೆಹಿಡಿಯಲಾಗಿದೆ. ಮಾನ್ವಿ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳು ಗ್ರಾಮೀಣ ವ್ಯಾಪ್ತಿಗೆ ಬರುತ್ತವೆ. ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮೀಣ ಭಾಗಕ್ಕೆ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನೀಡುವಷ್ಟೇ ಮಹತ್ವ ನೀಡಬೇಕು ಎಂದು ಹೇಳಿದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ಆರಂಭದಲ್ಲಿ ಜಿಪಿಎಸ್‌ ಮಾಡುವುದಕ್ಕೆ ವಸತಿ ಹಂಚಿಕೆಯಾದ ಫಲಾನುಭವಿಗಳಿಗೆ ಹೇಳಿದ್ದರಿಂದ ತಾಂತ್ರಿಕವಾಗಿ ದೋಷಗಳು ಪತ್ತೆಯಾಗಿವೆ. ಕೂಡಲೇ ಈ ಸಮಸ್ಯೆ ಪರಿಹರಿಸಿ, ಅನುದಾನ ಒದಗಿಸಬೇಕು. ಆಶ್ರಯ ಮನೆಗಳಿಗೆ ಹಕ್ಕುಪತ್ರ ನೀಡಬೇಕು. ಇದಕ್ಕಾಗಿ ಗ್ರಾಮಸಭೆ ನಡೆಸಲು ಸೂಚನೆ ನೀಡಬೇಕು ಎಂದು ತಿಳಿಸಿದರು. 

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ರಾಯಚೂರು ನಗರಕ್ಕೆ ರಾಜೀವ್‌ಗಾಂಧಿ ಆವಾಸ್‌ ಯೋಜನೆಯಡಿ 2,700 ಮನೆಗಳು ಮಂಜೂರಿಯಾಗಿವೆ. ಇದಕ್ಕಾಗಿ 41 ಎಕರೆ ಜಾಗ ಗುರುತಿಸಲಾಗಿದೆ. ರಾಜ್ಯದಲ್ಲಿ ಮೂರನೇ ಅತಿದೊಡ್ಡ ಸ್ಲಂ ರಾಯಚೂರು. ಈಗಾಗಲೇ 40 ಸ್ಲಂ ಗುರುತಿಸಲಾಗಿದೆ. ಇನ್ನೂ 12 ಸ್ಲಂ ಗುರುತಿಸಬೇಕಿದ್ದು, ಕೂಡಲೇ ಈ ಬಗ್ಗೆ ಸೂಚನೆ ನೀಡಬೇಕು. ಕೆಎಚ್‌ಬಿಯಿಂದ ನೂತನ ಬಡಾವಣೆ ನಿರ್ಮಾಣ ಮಾಡಬೇಕು ಎಂದು ಕೋರಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ವಸತಿ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸಬೇಕು. ಪ್ರತಿ ತಾಲ್ಲೂಕಿನಲ್ಲೂ ಬೇರೆಬೇರೆ ಸಮಸ್ಯೆಗಳಿವೆ ಎಂದರು.

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಸ್ಲಂ ಬೋರ್ಡ್‌ನಿಂದ ನಿರ್ಮಾಣ ಮಾಡುತ್ತಿರುವ ಮನೆಗಳು ಅರ್ಧ ಹಂತದಲ್ಲಿವೆ. ಕೂಡಲೇ ಅವುಗಳಿಗೆ ಬಾಕಿ ಅನುದಾನ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಕಿ ಉಳಿದಿರುವ ವಸತಿ ಸಮಸ್ಯೆಗಳನ್ನು ಆದ್ಯತೆಯಿಂದ ಪರಿಹರಿಸಬೇಕು. ಇನ್ನುಮುಂದೆ ಯಾವುದೇ ಲೋಪಗಳಾಗದಂತೆ ವಸತಿಗಳನ್ನು ಹಂಚಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.