ಸೋಮವಾರ, ಜೂನ್ 14, 2021
21 °C
ನಿಯಮಾನುಸಾರ ಕರ್ತವ್ಯ ನಿರ್ವಹಿಸದಿದ್ದರೆ ರಾಜೀನಾಮೆ ನೀಡಿ; ಎಚ್ಚರಿಕೆ

ಮುಖ್ಯಾಧಿಕಾರಿ ಕಾರ್ಯವೈಖರಿ; ಅಸಮಾಧಾನ-ಶಾಸಕ ಡಿ.ಎಸ್‍ ಹೂಲಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ಮುಖ್ಯಾಧಿಕಾರಿಗಳು ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್‍ ನಿಯಂತ್ರಣ, ಯೋಜನೆಗಳ ಅನುಷ್ಠಾನ, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ, ಆಡಳಿತ ಮಂಡಳಿ ಸದಸ್ಯರಿಗೆ ಅಗೌರವ ತೋರಿದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು ನಡತೆಯಲ್ಲಿ ಸುಧಾರಣೆ ತಂದುಕೊಳ್ಳಿ’ ಎಂದು ಶಾಸಕ ಡಿ.ಎಸ್‍ ಹೂಲಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಪುರಸಭೆಗೆ ದಿಢೀರ್‌ ಭೇಟಿ ನೀಡಿ ಆಡಳಿತ ವೈಖರಿ ಬಗ್ಗೆ ಪರಿಶೀಲನೆ ನಡೆಸಿದಾಗ ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ, ಉಪಾಧ್ಯಕ್ಷ ಎಂ.ಡಿ.ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ ಸೇರಿದಂತೆ ಸದಸ್ಯರು ಮುಖ್ಯಾಧಿಕಾರಿಗಳ ಅಸಹಕಾರ, ಅನುಚಿತ ವರ್ತನೆ ಕುರಿತು ಆರೋಪಿಸಿದರು.

ಪುರಸಭೆ ಕಾರ್ಮಿಕರಿಗೆ ಈ ಹಿಂದಿನ ಅವಧಿಯಲ್ಲಿ ಖರೀದಿಸಿದ್ದ ಬೂಟ್‍, ಮಾಸ್ಕ್‌ ಇತರ ಸುರಕ್ಷತಾ ಕಿಟ್‍ಗಳನ್ನು ಆಡಳಿತ ಮಂಡಳಿ ಗಮನಕ್ಕೆ ತರದೆ  ಹಂಚಿಕೆ ಮಾಡಿದ್ದಾರೆ. ಕೋವಿಡ್‍ ಜಾಗೃತಿ ಅಭಿಯಾನ ನಡೆಸಿಲ್ಲ. ಇಂದಿನ ಸಂಕಷ್ಟದಲ್ಲಿಯೂ ಸಂತೆ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಕೋವಿಡ್‍ ಕುರಿತು ಪುರಸಭೆ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ, ಏನು ಮಾಡುತ್ತಿದ್ದಾರೆ ಎಂಬುದೇ ಗಮನಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‍, ಮಸ್ಕಿ ವಿಧಾನಸಭಾ ಉಪ ಚುನಾವಣೆ ಹೆಸರಲ್ಲಿ ಸ್ಥಳೀಯ ಪುರಸಭೆ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ ಜೋಡಣೆ, ಚರಂಡಿಗಳ ಸ್ವಚ್ಛತೆ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಅವ್ಯವಸ್ಥೆಯಿಂದ ಸಾರ್ವಜನಿಕರು ಸದಸ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ.  ಮನೆಯಲ್ಲಿ ಕುಳಿತು ತುಘಲಕ್‍ ಆಡಳಿತ ನಡೆಸುತ್ತಿದ್ದಾರೆ ಆರೋಪಿಸಿದರು.

ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಡೀಸೆಲ್‌, ಪೆಟ್ರೋಲ್‍ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಧ್ಯಕ್ಷೆ ದೂರಿದರು.

ಮುಖ್ಯಾಧಿಕಾರಿ ಮಾತನಾಡಿ, ತಾವು ನಿಯಮಾನುಸಾರ ಆಡಳಿತ ಮಂಡಳಿ ಸಹಕಾರದಿಂದ ಕೆಲಸ ಮಾಡಿರುವೆ. ಡೀಸೆಲ್‌, ಪೆಟ್ರೋಲ್‍ ಹೆಸರಲ್ಲಿ ಅವ್ಯವಹಾರ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಗೌರವ ನೀಡಿರುವೆ.  ಸದಸ್ಯರೇ ಸಹಕಾರ ನೀಡುತ್ತಿಲ್ಲ’ ಎಂದರು.

‘ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ’ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ, ಉಪಾಧ್ಯಕ್ಷ ಎಂ.ಡಿ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ, ಸದಸ್ಯರಾದ ಯಮನಪ್ಪ ದೇಗುಲಮಡಿ, ಬಸವರಾಜ ಯತಗಲ್, ಮೌಲಾಸಾಬ ಗೌಳಿ, ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಭೂಪನಗೌಡ ಕರಡಕಲ್ಲ, ಮುಖಂಡರಾದ ಶರಣಪ್ಪ, ಪರಶುರಾಮ ನಗನೂರ, ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು