ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮರಳಿ ಹೋಗಲ್ಲ: ಪ್ರತಾಪಗೌಡ ಪಾಟೀಲ್‌

ಶಾಸಕ ಬಸನಗೌಡರದ್ದು ಕಮಿಷನ್ ರಾಜಕಾರಣ: ಟೀಕೆ
Last Updated 4 ನವೆಂಬರ್ 2022, 7:06 IST
ಅಕ್ಷರ ಗಾತ್ರ

ಸಿಂಧನೂರು: ‘ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣಕರ್ತರಲ್ಲಿ ಒಬ್ಬರಾದ ನನ್ನನ್ನು ಎಂಎಲ್‍ಸಿ ಮಾಡುವಂತೆ ಒತ್ತಡ ಹಾಕಲಾಗಿತ್ತು. ಕೊನೆಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವಾದರೂ ಸಿಗುವ ನಿರೀಕ್ಷೆಯೂ ಹುಸಿಯಾಗಿದ್ದು ಬೇಸರ ತಂದಿದೆ.ಆದರೂ ಬಿಜೆಪಿಯಲ್ಲೇ ರಾಜಕಾರಣ ಮುಂದುವರೆಸುವೆ. ಮರಳಿ ಕಾಂಗ್ರೆಸ್‍ಗೆ ಹೋಗುವುದಿಲ್ಲ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ತಾವು ಸೇರಿ 16 ಜನ ಶಾಸಕರು ಕಾರಣ. ಇದರಲ್ಲಿ 13 ಮಂದಿ ಶಾಸಕರಾದರೆ, ಇಬ್ಬರು ವಿಧಾನ ಪರಿಷತ್ ಸದಸ್ಯರಾದರು. ತಮ್ಮನ್ನು ಸಹ ಎಂಎಲ್‍ಸಿ ಮಾಡುವಂತೆ ಒತ್ತಡ ಹಾಕಿದಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಒಪ್ಪಿಕೊಂಡಿದ್ದರು. ಆದರೆ ಹೈಕಮಾಂಡ್ ಬೇರೆ ತೀರ್ಮಾನ ಕೈಗೊಂಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಉಪ ಚುನಾವಣೆಯಲ್ಲಿ ತಾವು ಸೋತಿರುವುದು ಆಕಸ್ಮಿಕ. ಬೇರೆಯವರು ಬಂದು ತಮ್ಮ ಎಲೆಕ್ಷನ್ ಮಾಡಿದ್ದು ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಮನಸ್ತಾಪ ಉಂಟಾಗಿ ಸೋಲಿಗೆ ಕಾರಣವಾಯಿತು. ಬದಲಾವಣೆ ಬಯಸಿ ಆರ್.ಬಸನಗೌಡರನ್ನು ಕ್ಷೇತ್ರದ ಜನ ಗೆಲ್ಲಿಸಿದರು. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯವಾಗಿವೆ. ತಮ್ಮ ಅವಧಿಯಲ್ಲಿ ಮಂಜೂರಾದ ಅನುದಾನಗಳಿಗೆ ಟೆಂಡರ್ ಕರೆದು ಕೆಲಸ ಆರಂಭಿಸಲು ಆರ್.ಬಸನಗೌಡರಿಗೆ ಆಗಿಲ್ಲ. ಬದಲಿಗೆ ಎಲ್ಲ ಕೆಲಸಗಳಲ್ಲಿಯೂ ಕಮಿಷನ್ ಪಡೆದು ಆಡಳಿತ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ಆರ್.ಬಸನಗೌಡ ತುರ್ವಿಹಾಳ ಅವರು ಕಮಿಷನ್ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರದ ಹಣ ಲೂಟಿ ಹೊಡೆಯಲು ಗುತ್ತಿಗೆ ಪಡೆದ ತಮ್ಮ ಬೆಂಬಲಿಗರಿಗೆ ಅನುಕೂಲ ಕಲ್ಪಿಸುತ್ತಿದ್ದಾರೆ. ಆರ್.ಬಸನಗೌಡರ ಆಡಳಿತದಿಂದ ಜನ ಭ್ರಮನಿರಸನ ಗೊಂಡಿದ್ದು, ಗೆಲ್ಲಿಸಿದ್ದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನ ತಮಗೆ ಗೆಲ್ಲಿಸುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳು ಮತ್ತು ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ’ ಎಂದು ಹೇಳಿದರು.

ಜಿ.ಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ಮುಖಂಡರಾದ ಬಸವಂತರಾಯ ಕುರಿ, ಶಿವಪುತ್ರಪ್ಪ ಅರಳಹಳ್ಳಿ, ಶರಣೇಗೌಡ, ಸಿದ್ದೇಶ, ಶರಣಬಸವ ವಕೀಲ, ಶರಣಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT