ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಶಾಲೆಗಳ ಅಭಿವೃದ್ಧಿಗೆ ‘ನರೇಗಾ’ ಬಲ

Published 10 ನವೆಂಬರ್ 2023, 5:43 IST
Last Updated 10 ನವೆಂಬರ್ 2023, 5:43 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸಲು ನರೇಗಾ ಯೋಜನೆ ನೆರವಾಗಿದೆ. ಸ್ಥಳೀಯ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವುದರ ಜತೆ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2022-23ನೇ ಸಾಲಿನಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಂದ 30ಕ್ಕೂ ಅಧಿಕ ಶಾಲೆಗಳಲ್ಲಿ ನರೇಗಾ ಯೋಜನೆಯ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಬಿಸಿಯೂಟ ಯೋಜನೆಯ ಅಡುಗೆ‌ ಕೋಣೆ, ಭೋಜನಾಲಯ, ಕಾಂಪೌಂಡ್, ಆಟದ ಮೈದಾನ ಹಾಗೂ ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

2022-23ನೇ ಸಾಲಿನಲ್ಲಿ ಕೈಗೊಳ್ಳಲಾದ ಒಟ್ಟು 33 ಕಾಮಗಾರಿಗಳ ಪೈಕಿ 20 ಕಾಮಗಾರಿಗಳು ಪೂರ್ಣಗೊಂಡಿವೆ. ಊಟದ ಕೊಠಡಿ ಕೊರತೆ ಇದ್ದ 6 ಸರ್ಕಾರಿ ಶಾಲೆಗಳಲ್ಲಿ ತಲಾ ₹13 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಭೋಜನಾಲಯಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗೋರ್ಕಲ್ ಹಾಗೂ ಪೋತ್ನಾಳ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಭೋಜನಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡಗಳು ಗಮನ ಸೆಳೆಯುತ್ತಿವೆ.

ತಾಲ್ಲೂಕಿನ ನಕ್ಕುಂದಿ, ಜಾನೇಕಲ್, ಮದ್ಲಾಪುರ, ಪೋತ್ನಾಳ ಹಾಗೂ ಸಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಸರ್ಕಾರಿ ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿಗಳ ಮೂಲಕ ಶಾಲಾ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ನೀರಮಾನ್ವಿ, ಸಾದಾಪುರ ಸೇರಿದಂತೆ ಐದು ಗ್ರಾಮಗಳ ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 7 ಶಾಲೆಗಳಲ್ಲಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

‘ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಲಾಗುವ ಪ್ರತಿ ಕಾಮಗಾರಿ ಅನುಷ್ಠಾನಕ್ಕೆ ಆಯಾ ಗ್ರಾಮಗಳ 20ಕ್ಕೂ ಅಧಿಕ ಕೂಲಿಕಾರ್ಮಿಕರಿಗೆ 20ರಿಂದ 25 ದಿನಗಳವರೆಗೆ ಉದ್ಯೋಗ ಸಿಗುತ್ತಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ನರೇಗಾ ವಿಭಾಗದ ಸಂಯೋಜಕ ಈರೇಶ ತಿಳಿಸಿದ್ದಾರೆ.

2023-24ನೇ ಸಾಲಿನಲ್ಲಿ ನರೇಗಾ ಅಡಿಯಲ್ಲಿ ಆದ್ಯತೆ ಮೇರೆಗೆ ಇನ್ನುಳಿದ ಶಾಲೆಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು
ಖಾಲೀದ್ ಅಹ್ಮದ್ ತಾ.ಪಂ.ಇಒ ಮಾನ್ವಿ
ನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಹಾಗೂ ಗ್ರಂಥಾಲಯ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು
ಕಾಶಿನಾಥ ಮ್ಯಾತ್ರಿ ಶಿಕ್ಷಣ ಪ್ರೇಮಿ ಕಾತರಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT