ಸೋಮವಾರ, ಸೆಪ್ಟೆಂಬರ್ 20, 2021
22 °C

ಸಿಂಧನೂರು: ಜಾತಿ ಆಧಾರದಲ್ಲಿ ‘ನರೇಗಾ’ ಕೆಲಸ ವಿಭಜನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಪ್ರತಿಯೊಂದು ವಿಷಯದಲ್ಲಿಯೂ ಸಾಮಾಜಿಕ ವಿಭಾಗೀಕರಣದ ಗುರಿ ಹೊಂದಿರುವ ಗ್ರಾಮೀಣಾಭಿವೃದ್ದಿ ಇಲಾಖೆಯ ಸಲಹೆ ರೂಪದ ಆದೇಶವನ್ನು ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಸಮಿತಿ ಹಾಗೂ ಸಾಲಗುಂದಾದ ಉದ್ಯೋಗ ಖಾತ್ರಿ ಯೋಜನೆ ಜಾರಿ ಸಮಿತಿ ಜಂಟಿಯಾಗಿ ಮಂಗಳವಾರ  ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿದವು.

‘ಇತ್ತೀಚಿಗೆ ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆಯು ಎಸ್‍ಸಿ, ಎಸ್‍ಟಿ ಮತ್ತು ಇತರ ವಿಭಾಗಗಳ ವೇತನ ಪಡೆಯುವವರಿಗೆ ವೇತನ ಪಾವತಿ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರಗಳಿಗೆ ಸಲಹೆ ಮಾದರಿಯಲ್ಲಿ ನೀಡಲಾದ ಆದೇಶ ಕೂಲಿಕಾರರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ‘ ಎಂದು ಡಿಎಚ್‍ಎಸ್ ತಾಲ್ಲೂಕು ಘಟಕದ ಸಂಚಾಲಕ ನರಸಿಂಹಪ್ಪ ದೂರಿದರು.

‘ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಹಕ್ಕನ್ನು ಹೊಂದಿರುವ ಕೆಲಸಗಾರರನ್ನು ಜಾತಿ ಆಧಾರದಲ್ಲಿ ವಿಭಜಿಸುವುದು ತಾರ್ಕಿಕವಾಗಿ ಸರಿಯಲ್ಲ. ಈ ಸಲಹೆಯಿಂದ ವೇತನ ಸಂದಾಯದ ಮೇಲೆ ಅಹಿತಕರ ಪರಿಣಾಮ ಬೀರುವುದಲ್ಲದೆ ವೇತನ ಸಂದಾಯ ಹಾಗೂ ಕೆಲಸ ನಿಗದಿಪಡಿಸುವ ಪ್ರಕ್ರಿಯೆ ಅನಗತ್ಯ ವಿಳಂಬವಾಗುತ್ತದೆ’ ಎಂದು ಆರೋಪಿಸಿದರು.

ಈಗಾಗಲೇ ಕೆಲವು ರಾಜ್ಯಗಳಿಂದ ಲಭ್ಯವಾದ ಮಾಹಿತಿಗಳ ಪ್ರಕಾರ ಎಸ್‍ಸಿ, ಎಸ್‍ಟಿ ಕೆಲಸಗಾರರ ವೇತನ ಪಾವತಿ ವಿಳಂಬವಾಗುತ್ತಿದೆ. ಅವರಿಗೆ ನಿಗದಿತ ವೇತನಕ್ಕಿಂತ ಕಡಿಮೆ ಹಣ ನೀಡುವುದು ಕಾಯ್ದೆಯ ಉಲ್ಲಂಘನೆ ಸಹ ನಡೆಯುತ್ತಿದೆ. ಜಾತಿ ಆಧಾರದಲ್ಲಿ ಕೆಲಸ ಮತ್ತು ಸ್ಥಳವನ್ನು ನಿಗದಿ ಪಡಿಸಲಾಗುತ್ತಿದೆ. ಆದ್ದರಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಸಲಹೆ ರೂಪದ ಆದೇಶವನ್ನು ಹಿಂತೆಗೆದುಕೊಳ್ಳಬೇಕು. ನರೇಗಾ ಅಡಿಯಲ್ಲಿ ಕೆಲಸದ ದಿನಗಳನ್ನು ವರ್ಷದಲ್ಲಿ 200 ದಿನಗಳಿಗೆ ಹೆಚ್ಚಿಸಬೇಕು. ದಿನದ ವೇತನವನ್ನು ₹ 600ಕ್ಕೆ ಏರಿಕೆ ಮಾಡಬೇಕು. ಈ ವಿಷಯದಲ್ಲಿ ರಾಷ್ಟ್ರಪತಿ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಶಿರಸ್ತೇದಾರ್ ಅಂಬಾದಾಸ್ ಸೂರ್ಯವಂಶಿ ಮನವಿ ಪತ್ರ ಸ್ವೀಕರಿಸಿದರು.

ಎಐಎಡಬ್ಲ್ಯೂಯು ಅಧ್ಯಕ್ಷ ಯಂಕಪ್ಪ ಕೆಂಗಲ್, ಸದಸ್ಯ ಚಂದಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು