ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ, ಹತ್ತಿ, ತೊಗರಿ ಬೆಳೆಗಾರರಿಗೆ ಸಂಕಷ್ಟ

ಜಿಲ್ಲೆಯಲ್ಲಿ ಆರಂಭವಾಗಿರುವ ಅಕಾಲಿಕ ಮಳೆ
Last Updated 17 ನವೆಂಬರ್ 2021, 13:41 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಂಪು ಆವರಿಸಿಕೊಂಡಿದ್ದು, ಎರಡು ದಿನಗಳಿಂದ ಅಕಾಲಿಕ ತುಂತುರು ಮಳೆ ಬೀಳುತ್ತಿದೆ. ಇದರಿಂದ ಕೊಯ್ಲು ಮಾಡುತ್ತಿದ್ದ ಹತ್ತಿ ಬೆಳೆದ ರೈತರು ಹಾಗೂ ಕೊಯ್ಲು ಹಂತಕ್ಕೆ ಬಂದಿರುವ ಭತ್ತ ಮತ್ತಿ ತೊಗರಿ ಬೆಳೆದಿರುವ ರೈತರು ಸಂಕಷ್ಟ ಅನುಭವಿಸುಂತಾಗಿದೆ.

ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ, ಬುಧವಾರ ಬೆಳಗಿನವರೆಗೂ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 8 ಮಿಲಿಮೀಟರ್‌ ಮಳೆ ಸುರಿದಿದೆ. ವಾಡಿಕೆ ಪ್ರಕಾರ 2 ಮಿಲಿಮೀಟರ್‌ ಮಳೆಯಾಗಬೇಕಿತ್ತು. ಎಲ್ಲ ತಾಲ್ಲೂಕುಗಳಲ್ಲಿಯೂ ಅಲ್ಲಲ್ಲಿ ಮಳೆ ಸುರಿದಿದೆ.

ಮಸ್ಕಿ ತಾಲ್ಲೂಕಿನ ತಲೇಖಾನ್‌ ಹೋಬಳಿ (13 ಮಿಲಿಮೀಟರ್‌), ಮಾನ್ವಿ ತಾಲ್ಲೂಕಿನ ಕುರ್ಡಿ ಹೋಬಳಿ (7.3 ಮಿಲಿಮೀಟರ್), ಸಿಂಧನೂರು ತಾಲ್ಲೂಕಿನ ಸಾಲಗುಂದಾ ಹೋಬಳಿ (16.4 ಮಿಲಿಮೀಟರ್‌), ದೇವದುರ್ಗ ತಾಲ್ಲೂಕಿನ ಅರಕೇರಾ ಹೋಬಳಿ (31.4 ಮಿಲಿಮೀಟರ್‌), ಸಿರವಾರ ತಾಲ್ಲೂಕು 15.4 ಮಿಲಿಮೀಟರ್‌, ರಾಯಚೂರು ತಾಲ್ಲೂಕಿನ ಕಲಮಲಾ ಹೋಬಳಿ (56 ಮಿಲಿಮೀಟರ್‌), ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿ (15 ಮಿಲಿಮೀಟರ್‌)ಯಲ್ಲಿ ಅತಿಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ.

ಸಿಂಧನೂರು ತಾಲ್ಲೂಕಿನ 11 ಹೋಬಳಿಯಲ್ಲೂ ಅಕಾಲಿಕ ಮಳೆ ಸುರಿದಿದ್ದು, ಭತ್ತದ ಬೆಳೆಯು ಅಪಾರ ಪ್ರಮಾಣದಲ್ಲಿ ನೆಲಕಚ್ಚಿದೆ. ಜಮೀನುಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಭತ್ತದ ಕಾಳುಗಳು ಬಿದ್ದಿದ್ದು, ಅದು ರೈತರ ಕೈಗೆ ದೊರಕುವುದು ಅಸಾಧ್ಯವಾಗಿದೆ. ತಂಪು ಹವಾಮಾನ ಮುಂದುವರಿದಿದ್ದು, ಭತ್ತವು ಸದ್ಯಕ್ಕೆ ಒಣಗುವುದಿಲ್ಲ. ಹೀಗಾಗಿ ನೆಲಕಚ್ಚಿದ ಭತ್ತವೆಲ್ಲ ಹಾನಿಯಾಗಲಿದೆ.

ಮಳೆಯಿಂದ ಹಾನಿಗೊಳಗಾದ ಭತ್ತ

ಸಿಂಧನೂರು: ವಾರದಿಂದ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯು ಭೂಮಿಗೆ ಉರುಳಿದ ಪರಿಣಾಮ ರೈತರಿಗೆ ಅಪಾರ ನಷ್ಟವಾಗಿದೆ.

ನಗರದಿಂದ ಮಸ್ಕಿ, ಬಪ್ಪೂರು, ತುರ್ವಿಹಾಳ, ಗಂಗಾವತಿ, ರಾಯಚೂರು, ಸಿರಗುಪ್ಪ ಮುಖ್ಯರಸ್ತೆಗಳಲ್ಲಿ ಸಂಚರಿಸುವಾಗ ಗೋಚರಿಸುವ ಭತ್ತವೆಲ್ಲವೂ ನೆಲಕ್ಕೆ ಒರಗಿಕೊಂಡಿದೆ. ಮಳೆ ಮತ್ತು ಗಾಳಿ ಹೊಡೆತಕ್ಕೆ ಭತ್ತವು ಉರುಳಿ ಬಿದ್ದಿರುವುದೇ ಕಂಡು ಬರುತ್ತಿದೆ.

‘ಗಾಂಧಿನಗರ, ಸಾಸಲಮರಿ ಕ್ಯಾಂಪ್, ಜವಳಗೇರಾ, ಪಗಡದಿನ್ನಿ, ಕುರುಕುಂದಿ, ಹಂಚಿನಾಳ, ಹಂಚಿನಾಳ ಕ್ಯಾಂಪ್, ಉಪ್ಪಲದೊಡ್ಡಿ, ಕೋಳಬಾಳ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದ ಭತ್ತದ ಬೆಳೆಗಳ ಪೈಕಿ ಶೇ 70 ರಷ್ಟು ಬೆಳೆ ಹಾನಿ ಆಗಿರಬಹುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮಯ್ಯ ಜವಳಗೇರಾ ತಿಳಿಸಿದರು.
ಈ ಬಾರಿಯ ಹಂಗಾಮಿನಲ್ಲಿ ಉತ್ತಮ ಇಳುವರಿ ಬಂದಿತ್ತು. ಕೃಷಿ ಚಟುವಟಿಕೆಗಾಗಿ ರೈತರು ಬ್ಯಾಂಕ್, ಗೊಬ್ಬರದ ಅಂಗಡಿ ಮತ್ತಿತರ ಕೈಸಾಲ ಮಾಡಿಕೊಂಡಿದ್ದಾರೆ. ಸಾಲ ತೀರಿಸುವ ಕನಸು ಕಟ್ಟಿಕೊಂಡಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ.

‘ಆರ್‍ಎನ್‍ಆರ್ ತಳಿಯ ಭತ್ತ ಹೆಚ್ಚು ಎತ್ತರ ಬೆಳೆದಿರುವುದರಿಂದ ಯಾವ ಹೊಲದಲ್ಲೂ ಮಳೆ ಬರುವ ಪೂರ್ವದಲ್ಲಿ ಇದ್ದಂತೆ ಭತ್ತದ ಬೆಳೆ ಉಳಿದಿಲ್ಲ. ಎಲ್ಲವೂ ನೆಲಕ್ಕೆ ಬಿದ್ದಿದೆ. ಸೋನಾ ಮಸೂರಿಯು ಸಹ ಕೆಲ ಗ್ರಾಮಗಳಲ್ಲಿ ಮಳೆ ಮತ್ತು ಗಾಳಿಯಿಂದ ನೆಲಕ್ಕೆ ಉರುಳಿದೆ’ ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ವೆಂಕನಗೌಡ ಗದ್ರಟಗಿ ಹೇಳಿದರು.

ಭತ್ತ ಹಾನಿಯಿಂದ ರೈತರಿಗೆ ನಷ್ಟ

ಜಾಲಹಳ್ಳಿ: ಸಮೀಪದ ಗಲಗ ಹಾಗೂ ಜಾಲಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ನೀರು ಬಳಸಿಕೊಂಡು ರೈತರು ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಇದೀಗ ಅಕಾಲಿಕ ಮಳೆಯಿಂದಾಗಿ ಭತ್ತ ನೆಲಕ್ಕೆ ಬಾಗಿದೆ.

‘ತುಂತುರು ಮಳೆ ಹಾಗೂ ಗಾಳಿಯಿಂದಾಗಿ ಬೆಳೆದು ನಿಂತ ಭತ್ತ ನೆಲಕ್ಕೆ ಬಿದ್ದು ನಷ್ಟ ಉಂಟಾಗಿದೆ. ಮುಂದಿನ 20 ದಿನಗಳ ಬಳಿಕ ಭತ್ತ ಕಾಟವು ಮಾಡಬೇಕಿತ್ತು. ಅದರೆ, ರೈತರು ಒಂದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವುದಕ್ಕೆ ಕನಿಷ್ಠ ₹ 16 ರಿಂದ ₹ 18 ಸಾವಿರ ವೆಚ್ಚ ಮಾಡಿಕೊಂಡಿದ್ದಾರೆ. ಈಗ ಅಕಾಲಿಕ ಮಳೆ ಪ್ರಾರಂಭ ಆಗಿರುವುದರಿಂದ ಭತ್ತಹಾನಿಯಾಗಿ, ರೈತರಿಗೆ ಭಾರಿ ನಷ್ಟವಾಗಲಿದೆ' ಎಂದು ಎಂದು ಗಲಗ ಗ್ರಾಮ ರೈತ ದಾವಲ ಸಾಬ್ ತಿಳಿಸಿದರು.

ಹತ್ತಿ, ತೊಗರಿ, ಶೇಂಗಾ, ಮೇಣಸಿನ‌ಕಾಯಿ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ಕೂಡಾ ನೆಲದಲ್ಲೇ ಉಳಿದು ಕೊಳೆಯುತ್ತಿವೆ. ರೈತರು ಈಗಾಗಲೇ ಭತ್ತ ನಟಿಗೆ, ರಸಗೋಬ್ಬರ, ಕ್ರಿಮಿನಾಶಕ, ಉಳುಮೆ ಮಾಡುವುದಕ್ಕಾಗಿ ಸಾಲ ಮಾಡಿಕೊಂಡಿರುವುದನ್ನೇ ಮರಳಿಸಲು ಹರಸಾಹಸ ಪಡುತ್ತಿದ್ದಾರೆ.

ಈರುಳ್ಳಿ ಬೆಳೆಗೆ ಹಾನಿ

ಕವಿತಾಳ: ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜೋಳದ ಭತ್ತ ಮತ್ತು ಈರುಳ್ಳಿ ಬೆಳೆಗಳು ಹಾನಿಯಾಗಿವೆ.

‘ಈರುಳ್ಳಿ ಗಡ್ಡೆ ಕೀಳಲು ಕೂಲಿಕಾರರನ್ನು ನೇಮಿಸಿಕೊಂಡಿದ್ದು ಮೇಲಿಂದ ಮೇಲೆ ಸುರಿಯುತ್ತಿರುವ ಮಳೆಯಿಂದ ಕೆಲಸ ನಡೆಯುತ್ತಿಲ್ಲ. ಈರುಳ್ಳಿ ಬೆಳೆಗೆ ಕೊಳೆ ರೋಗ ಬಂದು ಭೂಮಿಯಲ್ಲಿಯೇ ಗಡ್ಡೆಗಳು ಕೊಳೆತಿವೆ. ಇದೀಗ ಉಳಿದ ಅಲ್ಪ ಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳಲು ಮಳೆಯಿಂದ ಅಡ್ಡಿಯಾಗುತ್ತಿದೆ. ಹೀಗಾಗಿ ನಷ್ಟ ಅನುಭವಿಸುವಂತಾಗಿದೆ’ ಎಂದು ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮದ ರೈತ ಪೊತ್ನಾಳ ಈರಣ್ಣ ನಾಯಕ ಹೇಳಿದರು.

‘ಬಾಗಲವಾಡ ಸುತ್ತಮುತ್ತ ಭತ್ತ ಕೊಯ್ಲು ನಡೆಯುತ್ತಿದ್ದು ಮಳೆಯಿಂದ ರೈತರು ತೊಂದರೆ ಎದುರಿಸುತ್ತಿದ್ದಾರೆ. ಹೋಬಳಿ ವ್ಯಾಪ್ತಿಯ ಶಿವನಗರ ಕ್ಯಾಂಪ್‍ ನಿವಾಸಿ ರೈತ ಗೋವಿಂದರಾಜು ಅವರ 5 ಎಕರೆ ಜಮೀನಿನಲ್ಲಿನ ಭತ್ತದ ಬೆಳೆ ಬಹುತೇಕ ನೆಲಕಚ್ಚಿದ್ದು ನಷ್ಟ ಅನುಭವಿಸುವಂತಾಗಿದೆ’ ಎಂದು ನಾಗರಾಜ ಹಿಂದಿನಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT