ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ತಯಾರಿ | ತರಕಾರಿ, ಧಾನ್ಯಗಳ ಖರೀದಿಗೆ ಮುಗಿಬಿದ್ದ ಜನ

Last Updated 14 ಜನವರಿ 2023, 2:49 IST
ಅಕ್ಷರ ಗಾತ್ರ

ರಾಯಚೂರು: ಬೇಸಿಗೆ ಆರಂಭದಲ್ಲಿ ಬರುವ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುವುದು ವಾಡಿಕೆ. ರಾಯಚೂರಿನಲ್ಲಿಯೂ ಈ ವರ್ಷ ಸಂಕ್ರಾಂತಿ ಆಚರಿಸುವುದಕ್ಕೆ ಜನರು ಭರ್ಜರಿ ತಯಾರಿ ಮಾಡಿಕೊಳ್ಳುವುದು ಎಲ್ಲೆಡೆ ಕಾಣುತ್ತಿದೆ.

ಸಂಕ್ರಾಂತಿ ಭೋಗ್ಯವು ಬರುವ ಭಾನುವಾರ ಇದ್ದರೂ ಶುಕ್ರವಾರದಿಂದಲೇ ಮಾರುಕಟ್ಟೆಯಲ್ಲಿ ಖರೀದಿ–ಮಾರಾಟ ಜೋರಾಗಿದೆ. ಬೇಡಿಕೆ ಹೆಚ್ಚಳಾಗಿದ್ದರಿಂದ ತರಕಾರಿ ದರಗಳು ಕೂಡಾ ಏರುಮುಖವಾಗಿವೆ. ಮಾರುಕಟ್ಟೆಯಲ್ಲಿ ಚವಳಿಕಾಯಿ ದರ ಗಗನಮುಖಿಯಾಗಿದ್ದು, ಕೆಜಿಗೆ ₹60 ರಷ್ಟಿದ್ದ ದರವು ಈಗ ₹100 ಕ್ಕೆ ತಲುಪಿದೆ. ತರಕಾರಿಗಳ ಮಿಶ್ರಣ ಮಾರಾಟವು ನಡೆಯುತ್ತಿದೆ. ಬದನೆಕಾಯಿ, ಬೆಂಡಿಕಾಯಿ, ಗೆವುಡಿಕಾಯಿ, ಹಿರೇಕಾಯಿ ದರಗಳು ಶೇ 30 ರಷ್ಟು ಏರಿಕೆಯಾಗಿವೆ.

ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ, ಸಡಗರ ಎದ್ದು ಕಾಣುತ್ತಿದೆ. ಹಬ್ಬಕ್ಕೆ ಬೇಕಾಗುವ ವಿವಿಧ ಸಾಮಗ್ರಿಗಳ ಖರೀದಿ–ಮಾರಾಟ ಗಮನ ಸೆಳೆಯುತ್ತಿದೆ. ಸಂಕ್ರಾಂತಿ ದಿನದಂದು ತರಹೇವಾರಿ ತರಕಾರಿ ಪಲ್ಲೆಗಳನ್ನು ತಯಾರಿಸಿ ಸಜ್ಜೆರೊಟ್ಟಿರೊಂದಿಗೆ ಸವಿಯುವುದು ವಿಶೇಷ.

ರಾಯಚೂರಿನಲ್ಲಿರುವ ರೊಟ್ಟಿ ಕೇಂದ್ರಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿಯೇ ಸಜ್ಜೆ ರೊಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ ಅಗಸಿ ಪುಡಿ, ಶೇಂಗಾ ಪುಡಿ, ಗುರ‍್ರೆಳ್ಳು ಪುಡಿ, ಪುಟಾಣಿ ಪುಡಿ, ರಂಜಕದ ಖಾರ ಹಾಗೂ ಪುಂಡಿ ಪಲ್ಲೆಗಳಿಗೂ ಬೇಡಿಕೆ ಹೆಚ್ಚಳವಾಗಿದೆ.

ಮಾರುಕಟ್ಟೆಯಲ್ಲಿ ಹಸಿಕಡಲೆ ಗುಚ್ಚಗಳ ಮಾರಾಟ– ಖರೀದಿಯೂ ಜೋರಾಗಿದೆ. ಕಬ್ಬು ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸುತ್ತಿದ್ದಾರೆ. ಒಟ್ಟಾರೆ ಸಂಕ್ರಾಂತಿ ಹಬ್ಬದ ನಿಮಿತ್ತ ಭರ್ಜರಿ ಭೋಜನ ಸವಿಯುವುದಕ್ಕೆ ಭಾರಿ ತಯಾರಿ ಮಾಡಿಕೊಳ್ಳಲಾಗಿದೆ. ಶನಿವಾರ ಹಾಗೂ ಭಾನುವಾರ ತರಕಾರಿ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ತರಕಾರಿ ಖರೀದಿಗಾಗಿ ಜನರು ಮುಗಿಬೀಳುತ್ತಿರುವುದರಿಂದ ರಾಯಚೂರಿನ ಎಂ.ವೀರಣ್ಣ ವೃತ್ತದಲ್ಲಿ, ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ, ರೈತರ ಸಂತೆ ಕಟ್ಟೆಯಲ್ಲಿ ಹಾಗೂ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಬೆಳಗಿನ ಜಾವದಿಂದ ದಟ್ಟಣೆ ಶುರುವಾಗಿದೆ. ತಳ್ಳುಗಾಡಿಗಳಲ್ಲಿ, ಕಿರಾಣಿ ಅಂಗಡಿಗಳ ಎದುರು, ಬೀದಿಬದಿ ತರಕಾರಿ ಮಾರಾಟ ಮಳಿಗೆಗಳಲ್ಲಿ ರಾಶಿರಾಶಿ ತಾಜಾ ತರಕಾರಿಗಳು ಸೆಳೆಯುತ್ತಿದ್ದು, ಸಂಕ್ರಾಂತಿ ಸಡಗರವನ್ನು ಇಮ್ಮಡಿಸಿವೆ.

‘ತರಕಾರಿ ದರಗಳು ಎಷ್ಟೇ ದುಬಾರಿಯಾದರೂ ಕನಿಷ್ಠ ಐದು ನಮೂನೆಯ ಕಾಯಿಪಲ್ಲೆ ಹಾಗೂ ಕಾಳುಗಳನ್ನು ಎಲ್ಲರೂ ಖರೀದಿಸುತ್ತಾರೆ. ಬಡವರು ಕೂಡಾ ಒಂದು ಹೊತ್ತಿನ ಊಟಕ್ಕೆ ಆಗುವಷ್ಟಾದರೂ ಖರೀದಿಸಿಕೊಂಡು ಸಂಕ್ರಾಂತಿ ದಿನದಂದು ಸಂತೋಷದಿಂದ ಊಟ ಮಾಡುತ್ತಾರೆ. ಚಳಿಗಾಲ ಮುಗಿಯುತ್ತಿದ್ದು, ಇನ್ನು ಬೇಸಿಗೆ ಶುರುವಾಗುತ್ತದೆ. ಚೆನ್ನಾಗಿ ಊಟ ಮಾಡಿಕೊಂಡು ಬೇಸಿಗೆ ಬಿಸಿಲು ಕಾಯಿಸಲು ಸಿದ್ಧವಾಗುವುದಕ್ಕೆ ಸಂಕ್ರಾಂತಿ ಪ್ರೇರೆಪಿಸುತ್ತಿದೆ’ ಎಂದು ಐಬಿ ಕಾಲೋನಿಯ ವೆಂಕಟೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT