ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿಯಲ್ಲಿ ಪಕ್ಷಗಳ ಬಲವರ್ಧನೆ ಕಸರತ್ತು

ರಾಜಕೀಯ ನಾಯಕರ ಕೇಂದ್ರವಾಗುತ್ತಿರುವ ಕ್ಷೇತ್ರ: ಪಕ್ಷ ತೊರೆದು ಹೋದವರಿಗೆ ಪಾಠ ಕಲಿಸಲು ಪೈಪೋಟಿ
Last Updated 21 ನವೆಂಬರ್ 2020, 16:17 IST
ಅಕ್ಷರ ಗಾತ್ರ

ರಾಯಚೂರು: ‘ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರತಾಪಗೌಡ ಪಾಟೀಲ ಹಾಗೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಬಸನಗೌಡ ತುರ್ವಿಹಾಳ ಅವರಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಬೇಕು’ ಎನ್ನುವ ಜಿದ್ದಾಜಿದ್ದಿ ಪರಸ್ಪರ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಶುರುವಾಗಿದ್ದು, ದಿನ ಕಳೆದಂತೆ ಮಸ್ಕಿ ವಿಧಾನಸಭಾ ಕ್ಷೇತ್ರವು ರಾಜ್ಯಮಟ್ಟದ ರಾಜಕೀಯ ನಾಯಕರ ಕೇಂದ್ರವಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಭಾವಿ ನಾಯಕರು ಸರದಿಯಂತೆ ಮಸ್ಕಿಗೆ ಭೇಟಿ ನೀಡುತ್ತಿದ್ದು, ಚುನಾವಣೆ ಕಣವು ಈಗಾಗಲೇ ರಂಗೇರಿದೆ. ಉಪಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗುವ ಪೂರ್ವದಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪಗೌಡ ಪಾಟೀಲ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಕಳೆದ ಮೂರು ತಿಂಗಳುಗಳಿಂದ ಆರಂಭಿಸಿದ್ದು, ಚುನಾವಣೆ ಬಿಸಿ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿ. ಪ್ರತಾಪಗೌಡ ಪಾಟೀಲ ಅವರಿಗೆ ಸಮಬಲ ಸ್ಪರ್ಧಾಳು ಬಸನಗೌಡ ತುರ್ವಿಹಾಳ ಅವರು ಕಾಂಗ್ರೆಸ್ ಸೇರಿದ್ದರಿಂದ ಪಕ್ಷದ ಬಲ ಇಮ್ಮಡಿಸಿದೆ.

ಅವರೇ ಸಂಭಾವ್ಯ ಅಭ್ಯರ್ಥಿ ಎಂದು ಆ ಪಕ್ಷದ ನಾಯಕರು ಈಗಾಗಲೇ ಹೇಳಿದ್ದಾರೆ.

ಶಕ್ತಿ ಪ್ರದರ್ಶನಕ್ಕೆ ಅಣಿಯಾಗಿರುವ ಬಸನಗೌಡ ಅವರು ಈಚೆಗೆ ಆಯೋಜಿಸಿದ್ದ ಸಭೆಯೊಂದರಲ್ಲಿ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಬೃಹತ್‌ ಬೈಕ್‌ ರ‍್ಯಾಲಿ ನಡೆಸಿ ಗಮನ ಸೆಳೆದಿದ್ದರು. ವ್ಯಕ್ತಿಗತ ಪ್ರಭಾವ ಮತ್ತು ಕಾಂಗ್ರೆಸ್‌ ಪಕ್ಷದ ಶಕ್ತಿಯನ್ನು ಒಟ್ಟುಗೂಡಿಸಿ ಅವರು ಉಪಚುನಾವಣೆಯಲ್ಲಿ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ನವೆಂಬರ್‌ 23 ರಂದು ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬರುತ್ತಿದ್ದಾರೆ. ಆನಂತರ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಅನೇಕ ನಾಯಕರು ಭೇಟಿ ನೀಡಲಿದ್ದು, ಜನರನ್ನು ಸೆಳೆಯಲಿದ್ದಾರೆ. ವಿಶೇಷವಾಗಿ ಮಸ್ಕಿ ವಿಧಾನಸಭೆ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸುತ್ತಿದ್ದ ನಾಯಕರಾದ ವಿರೂಪಾಕ್ಷಪ್ಪ, ಎನ್‌.ಎಸ್‌.ಬೋಸರಾಜು, ಹಂಪಣ್ಣ ನಾಯಕ, ಹಂಪನಗೌಡ ಬಾದರ್ಲಿ ಹಾಗೂ ಅಮರೇಗೌಡ ಬಯ್ಯಾಪುರ ಅವರು ಪಕ್ಷದ ಸಂಘಟನೆಗೆ ಬಲ ತುಂಬಲಿದ್ದಾರೆ.

ಬಿಜೆಪಿಯಿಂದ ಗೆಲುವಿನ ತಯಾರಿ: ಮಸ್ಕಿ ಉಪಚುನಾವಣೆಯಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿ ನಾಯಕರು ಈಗಾಗಲೇ ಕಾಂಗ್ರೆಸ್‌ ಪಕ್ಷದ ಶಕ್ತಿ ಕುಗ್ಗಿಸುವ ಕೆಲಸವನ್ನು ಆರಂಭಿಸಿದ್ದಾರೆ.

ಮಸ್ಕಿಯಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಮತ್ತು ಸಿಂಧನೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಆಯೋಜಿಸುವ ಮೂಲಕ ಮತದಾರರ ಮನವೊಲಿಕೆಗೆ ಯೋಜನೆ ಸಿದ್ಧಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಸ್ಕಿ ಕ್ಷೇತ್ರದ ಕಾರ್ಯಕರ್ತರ ಸಭೆ ಆಯೋಜಿಸಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸಂಸದರಾಗಿದ್ದ ವಿರೂಪಾಕ್ಷಪ್ಪ ಅವರನ್ನು ಬಿ.ವೈ.ವಿಜಯೇಂದ್ರ ಅವರ ಶುಕ್ರವಾರ ಭೇಟಿ ಮಾಡಿರುವುದು ಸಂಚಲನ ಮೂಡಿಸಿದೆ.

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ವಿರೂಪಾಕ್ಷಪ್ಪ ಅವರು, ‘ಇದೊಂದು ಸೌಜನ್ಯದ ಭೇಟಿ’ ಎಂದು ಹೇಳಿದ್ದಾರೆ. ಆದರೆ, ಗೆಲುವು ಸಾಧಿಸಲು ಬಿಜೆಪಿ ಎಲ್ಲ ವಿಧದ ತಯಾರಿ ಆರಂಭಿಸಿರುವುದಕ್ಕೆ ಇದೊಂದು ಮುನ್ಸೂಚನೆ.

ಮಸ್ಕಿ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ₹100 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಎನ್‌ಆರ್‌ಬಿಸಿ 5ಎ ಕಾಲುವೆ ನಿರ್ಮಿಸುವ ಭರವಸೆ ಕೂಡಾ ನೀಡಲಾಗಿದೆ. ಆದರೆ, ಕಾಲುವೆ ನಿರ್ಮಾಣಕ್ಕೆ ಈಗಲೇ ಅನುದಾನ ಕೊಡಿ ಎಂದು ಪಾಮನಕಲ್ಲೂರು ಭಾಗದ ರೈತರು ಒತ್ತಾಯ ಆರಂಭಿಸಿದ್ದಾರೆ. ಆ ಬೇಡಿಕೆಯನ್ನು ಸರ್ಕಾರ ಈಡೇರಿಸಿ ರೈತರ ಒಲವು ಗಳಿಸುವ ಸಾಧ್ಯತೆ ಇದೆ.

ಶಾಸಕ ಪಿ.ರಾಜೀವ್‌ ಅವರು ಮಸ್ಕಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಸಮಾವೇಶ ಆಯೋಜಿಸುತ್ತಿದ್ದರೆ, ಶಾಸಕ ರಾಜುಗೌಡ ಅವರು ಪರಿಶಿಷ್ಟ ಪಂಗಡ ಸಮಯದಾಯ ಸಮಾವೇಶ ಆಯೋಜಿಸಿ ಬಿಜೆಪಿ ಬಲ ಹೆಚ್ಚಿಸುವುದಕ್ಕೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT