ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗಾಗಿ ಪೈಪೋಟಿ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶುರುವಾದ ರಾಜಕೀಯ ಚಟುವಟಿಕೆ
Last Updated 9 ಅಕ್ಟೋಬರ್ 2020, 15:03 IST
ಅಕ್ಷರ ಗಾತ್ರ

ರಾಯಚೂರು: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ರಾಯಚೂರು ಹಾಗೂ ಸಿಂಧನೂರು ನಗರಸಭೆಗಳಲ್ಲಿ ಅಧಿಕಾರ ಹಿಡಿಯುವುದಕ್ಕೆ ಕಾಂಗ್ರೆಸ್‌ ನಾಯಕರು ತಯಾರಿ ಆರಂಭಿಸಿದ್ದಾರೆ.

ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರು ಅಧಿಕಾರ ಪಡೆಯಲು ಜಿಲ್ಲಾಮಟ್ಟದ ನಾಯಕರ ಬೆಂಬಲ ಕೋರುತ್ತಿದ್ದು, ತಮ್ಮಲ್ಲಿಯೇ ಶಕ್ತಿ ಪ್ರದರ್ಶನ ಆರಂಭಿಸಿದ್ದಾರೆ. ಲಿಂಗಸುಗೂರು ಪುರಸಭೆಯಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಕ್ಕೆ ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ಮಹಿಳೆಯರಿಲ್ಲ. 23 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಪಡೆದಿರುವ ಜೆಡಿಎಸ್‌ ಪಕ್ಷದಲ್ಲಿ ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ಇಬ್ಬರು ಮಹಿಳಾ ಸದಸ್ಯೆಯರಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ವಹಿಸಲು ಕಾಂಗ್ರೆಸ್‌ ಮನಸ್ಸು ಮಾಡಬೇಕಿದೆ.

ರಾಯಚೂರು ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತವಿಲ್ಲ. 11 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌, ಪಕ್ಷೇತರ 9 ಸದಸ್ಯರ ಬೆಂಬಲದೊಂದಿಗೆ ಅಧಿಕಾರ ವಹಿಸಿಕೊಳ್ಳಲು ತಯಾರಿ ಮಾಡಿದೆ. ಬಹುಮತ ಸಾಬೀತುಪಡಿಸಲು 19 ಸ್ಥಾನಗಳು ಬೇಕು. 12 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಕೂಡಾ ಪಕ್ಷೇತರರನ್ನು ಸೆಳೆಯುವುದಕ್ಕೆ ಮುಂದಾಗಿತ್ತು. ಪಕ್ಷೇತರರು ಸದ್ಯ ಕಾಂಗ್ರೆಸ್‌ ಪರವಾಗಿದ್ದು, ಚುನಾವಣೆ ನಡೆಯುವ ಹಂತದಲ್ಲಿ ಬದಲಾವಣೆ ಆದರೂ ಆಗಬಹುದು.

ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಈಗಾಗಲೇ ಮಲ್ಲಿಕಾರ್ಜುನ ಪಾಟೀಲ, ಶೇಖರಪ್ಪ ಗಿಣಿವಾರ, ಮಂಜುಳಾ ಪ್ರಭುರಾಜ, ಮುರತುಜಾ ಹುಸೇನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಸ್ಥಾನ ಒಲಿಯುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಮಸ್ಕಿ, ಬಳಗಾನೂರು ಹಾಗೂ ತುರ್ವಿಹಾಳ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕೀಯ ದ್ರುವೀಕರಣ ಆಗಿದೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ ಅವರು ಸದ್ಯ ಬಿಜೆಪಿ ಸೇರಿದ್ದಾರೆ. ಅವರನ್ನು ಬೆಂಬಲಿಸುತ್ತಿರುವ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಕಾಂಗ್ರೆಸ್‌ ಸದಸ್ಯರು ಕೂಡಾ ಈಗ ಬಿಜೆಪಿ ಪರವಾಗಿದ್ದಾರೆ.

ಮಾನ್ವಿ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದಂತೆ ಸಣ್ಣ ಪ್ರಮಾಣದ ಅಸಮಾಧಾನ ಏರ್ಪಟ್ಟಿದೆ. ಬಹುಮತ ಸಾಬೀತುಪಡಿಸಲು 15 ಸ್ಥಾನಗಳ ಅಗತ್ಯವಿದ್ದು, 13 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್‌ ಪಕ್ಷೇತರರೊಂದಿಗೆ ಅಧಿಕಾರ ಹಿಡಿಯುವ ಅವಕಾಶವಿದೆ. ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್‌ ಪಕ್ಷ ಕೂಡಾ ಪಕ್ಷೇತರ 6 ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಪಡೆಯಬಹುದಾಗಿದೆ.

ಮುದಗಲ್‌ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದೆ. ಮುದಗಲ್‌ನಲ್ಲಿ ಅಮೀನಾ ಬೇಗಂ ಸೈಯದ್‌ಸಾಬ್‌, ಖಾಸೀಂ ಬೀ, ಅಮೀನಾಬೇಗಂ ಮೆಹಬೂಬ್‌ಸಾಬ್‌, ವಿಜಯಲಕ್ಷ್ಮೀ, ಮಹಾದೇವಮ್ಮ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು. ಮಸ್ಕಿ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರವಿ ಪಾಟೀಲ, ದೇವಣ್ಣ ನಾಯಕ ಆಕಾಂಕ್ಷಿಗಳು.

ಜಿಲ್ಲೆಯಲ್ಲಿರುವ 11 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಏಳು ಕಡೆಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿವೆ. ಮೂರು ಕಡೆಗಳಲ್ಲಿ ಉಪಾಧ್ಯಕ್ಷ ಸ್ಥಾನಗಳು ಮೀಸಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT