ಶುಕ್ರವಾರ, ಮಾರ್ಚ್ 31, 2023
31 °C
630 ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧ

ರಾಯಚೂರು: ಉದ್ಯೋಗ ಖಾತರಿಯಲ್ಲಿ ‘ಜಲಶಕ್ತಿ’ಗೆ ಒತ್ತು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಡಿ ಗ್ರಾಮೀಣ ಭಾಗಗಳಲ್ಲಿ ಜಲಶಕ್ತಿಗೆ ಸಂಬಂಧಿಸಿದಂತೆ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ 2021–22 ನೇ ಸಾಲಿನಲ್ಲಿ ಕ್ರಿಯಾಯೋಜನೆ ಮಾಡಿಕೊಳ್ಳಲಾಗಿದೆ.

ಕೋವಿಡ್‌ ಮಹಾಮಾರಿ ಕಾರಣದಿಂದ ಗ್ರಾಮೀಣ ಭಾಗಗಳಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಬಡವರಿಗೆ ಈ ಯೋಜನೆಯು ನೆರವಿಗೆ ಬಂದಿದ್ದು, 2020–21 ನೇ ಸಾಲಿನಲ್ಲಿಯೂ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ 1.10 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ಬೇಡಿಕೆಗೆ ತಕ್ಕಂತೆ ಉದ್ಯೋಗ ಸೃಜನೆ ಮಾಡುವುದರ ಜೊತೆಗೆ ಕೆಲವು ಕಾಮಗಾರಿಗಳನ್ನು ಮಾಡುವುದಕ್ಕೆ ಕ್ರಿಯಾಯೋಜನೆ ಕೂಡಾ ಮಾಡಿರುವುದು ವಿಶೇಷ.

ಬರಗಾಲ ಪೀಡಿತ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಉದ್ಯೋಗ ಖಾತರಿ ಯೋಜನೆ ವರದಾನವಾಗಿ ಪರಿಣಮಿಸಿದೆ. 2020–21ನೇ ಸಾಲಿನಲ್ಲಿ 1,869 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. 12,987 ಬದು ನಿರ್ಮಾಣ, 152 ಕೆರೆಗಳ ಹೂಳೆತ್ತಲಾಗಿದೆ. 466 ಕಡೆಗಳಲ್ಲಿ ಮಳೆನೀರು ಕೊಯ್ಲು ಕೈಗೊಳ್ಳಲಾಗಿದೆ. 36 ಕಲ್ಯಾಣಿಗಳಿಗೆ ಮರುಜೀವ ನೀಡಲಾಗಿದ್ದು, ಅಂತರ್ಜಲ ಸಂರಕ್ಷಣೆಯಾಗಿದೆ. 93 ಕಡೆಗಳಲ್ಲಿ ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ.

2021–22ನೇ ಸಾಲಿನಲ್ಲಿಯೂ ಜಲಶಕ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಗುರಿ ಇಟ್ಟುಕೊಂಡು ಕಾರ್ಯಾರಂಭ ಮಾಡಲಾಗಿದೆ. 630 ಕೆರೆಗಳ ಸಮಗ್ರ ಅಭಿವೃದ್ಧಿ ಗುರಿ ಹೊಂದಲಾಗಿದ್ದು, ಈಗಾಗಲೇ 240 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ವರ್ಷ 20 ಕಲ್ಯಾಣಿಗಳಿಗೆ ಮರುಜೀವ ನೀಡಲಾಗುತ್ತಿದ್ದು, 101 ಕಡೆಗಳಲ್ಲಿ ಮಳೆನೀರು ಕೊಯ್ಲು ಮಾಡುವುದಕ್ಕೆ ಗುರಿ ನಿಗದಿಪಡಿಸಲಾಗಿದೆ.

168 ಕಡೆಗಳಲ್ಲಿ ಅಂತರ್ಜಲ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗುತ್ತಿದೆ. 20 ಕಡೆಗಳಲ್ಲಿ ಅರಣ್ಯೀಕರಣ, 3580 ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತದೆ. ಒಟ್ಟಾರೆ ನೀರು ಸಂಗ್ರಹಣೆ ಮತ್ತು ಅದರ ಸದುಪಯೋಗಕ್ಕೆ ಸಂಬಂಧಿಸಿದಂತೆ 26,411 ಕಾಮಗಾರಿಗಳನ್ನು ಮಾಡುವ ಗುರಿ ನಿಗದಿ ಮಾಡಿಕೊಳ್ಳಲಾಗಿದೆ. ಲಾಕ್‌ಡೌನ್‌ ಜಾರಿ ಮಧ್ಯೆಯೂ ಸರ್ಕಾರದ ಮಾರ್ಗಸೂಚಿ ಅನುಸಾರ 3,146 ಕಾಮಗಾರಿಗಳನ್ನು ಆರಂಭಿಸಲಾಗಿದೆ.

ವರ್ಷಾರಂಭ ಏಪ್ರಿಲ್‌ನಲ್ಲಿ ಮಾನವ ದಿನಗಳ ಸೃಜನೆ ಸಂಪೂರ್ಣ ಸ್ಥಗಿತವಾಗಿತ್ತು. ಕೋವಿಡ್‌ ಮಹಾಮಾರಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹರಡಿತ್ತು. ಅತಿಹೆಚ್ಚು ಸೋಂಕಿತರು ಮತ್ತು ಪ್ರಾಣಹಾನಿ ಕಂಡುಬಂದಿದ್ದರಿಂದ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಸವಾಲಾಗಿ ಪರಿಣಮಿಸಿತ್ತು. ಆದರೆ ಬಡಜನರ ಉಪಜೀವನಕ್ಕೆ ನೆರವಾಗಿರುವ ಉದ್ಯೋಗ ಖಾತರಿ ಯೋಜನೆಯನ್ನು ಕೋವಿಡ್‌ ನಿಯಮ ಪಾಲನೆಯೊಂದಿಗೆ ಮತ್ತೆ ಮೇ, ಜೂನ್‌ನಲ್ಲಿ ವ್ಯಾಪಕವಾಗಿ ಆರಂಭಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು