ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನ ಬಸ್‌ ನಿಲ್ದಾಣಗಳಲ್ಲಿ ಮಳೆಗಾಲದ ಅವ್ಯವಸ್ಥೆ

ಶಾಶ್ವತ ಪರಿಹಾರ ಕ್ರಮ ರೂಪಿಸದ ಎನ್‌ಇಕೆಆರ್‌ಟಿಸಿ ಎಂಜಿನಿಯರ್ಸ್‌
Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಸರ್ಕಾರಿ ಬಸ್‌ ನಿಲ್ದಾಣಗಳ ಅವ್ಯವಸ್ಥೆ ಅತಿಯಾಗುತ್ತಿದೆ.

ಮಳೆನೀರಿನ ರಭಸಕ್ಕೆ ಕೊಳೆಕೊಚ್ಚಿ ಹೋಗುವ ಬದಲಾಗಿ, ನಿಲ್ದಾಣದಲ್ಲೇ ನೆಲೆ ನಿಂತುಕೊಳ್ಳುತ್ತಿದೆ. ಗುಂಡಿಗಳಲ್ಲಿ ಸಂಗ್ರಹವಾಗುವ ನೀರಿನ ಮಧ್ಯೆಯೆ ಪ್ರಯಾಣಿಕರು ಸರ್ಕಸ್‌ ಮಾಡಿಕೊಂಡು ಬಸ್‌ ಏರುವುದು ಮತ್ತು ಕೆಳಗಿಳಿಯುವ ದೃಶ್ಯ ಸಾಮಾನ್ಯವಾಗಿ ಕಾಣುತ್ತದೆ. ಹಂದಿ, ಬೀದಿನಾಯಿಗಳು ಹಾಗೂ ಬಿಡಾಡಿ ದನಗಳ ಗುಂಪು ಕೊಳಚೆಸ್ನೇಹಿಯಾಗಿ ಬೀಡುಬಿಟ್ಟಿವೆ.

ನೂತನ ತಾಲ್ಲೂಕು ಕೇಂದ್ರಗಳಾಗಿರುವ ಸಿರವಾರ ಹಾಗೂ ಮಸ್ಕಿ ಬಸ್‌ ನಿಲ್ದಾಣಗಳಲ್ಲಿ ಹಲವು ವರ್ಷಗಳಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸಿರವಾರ ಬಸ್‌ ನಿಲ್ದಾಣದಲ್ಲಿ ಮಳೆನೀರಿನ ಗುಂಡಿಯಲ್ಲಿಯೇ ಬಸ್‌ಗಳು ನಿಲುಗಡೆ ಆಗುತ್ತವೆ. ಪ್ರಯಾಣಿಕರು ಕಡ್ಡಾಯವಾಗಿ ತಾವು ಧರಿಸಿದ ಬಟ್ಟೆಯನ್ನು ಕೊಳಚೆ ತಾಗದಂತೆ ಮೇಲೆತ್ತಿಕೊಂಡು ಕೆಸರಿನಲ್ಲಿ ಕಾಲಿಟ್ಟುಕೊಂಡು ಬಸ್‌ಗಳತ್ತ ನಡೆಯಬೇಕು. ಪಾದರಕ್ಷೆಗಳೆಲ್ಲ ಹಾಳಾಗುತ್ತವೆ. ಸಮಸ್ಯೆ ಶಾಶ್ವತವಾಗಿ ಮುಂದುವರಿದಿದೆ.

ರಾಯಚೂರು ಕೇಂದ್ರ ಬಸ್‌ ನಿಲ್ದಾಣದೊಳಗಿನ ಆವರಣವೆಲ್ಲವೂ ಸಿಸಿ ಮಾಡಲಾಗಿದೆ. ಆದರೆ, ಆವರಣದ ಸುತ್ತಲೂ ಮಳೆನೀರು ಸಮರ್ಪಕವಾಗಿ ಹರಿದುಹೋಗುತ್ತಿಲ್ಲ. ಹೀಗಾಗಿ ಪುರುಷ ಪ್ರಯಾಣಿಕರು ಅಲ್ಲೇ ಮೂತ್ರ ಮಾಡುತ್ತಿದ್ದು, ವಾತಾವರಣ ಇನ್ನಷ್ಟು ಹದಗೆಟ್ಟಿದೆ. ನಿಲ್ದಾಣಕ್ಕೆ ಆವರಣ ಗೋಡೆಗಳಿಲ್ಲದ ಕಾರಣ, ಬೀದಿನಾಯಿಗಳು ಮತ್ತು ಹಂದಿಗಳು ಬಸ್‌ಗಳ ಮಧ್ಯೆದಲ್ಲೇ ಓಡಾಡಿಕೊಂಡಿವೆ.

ಮಾನ್ವಿ ಬಸ್‌ ನಿಲ್ದಾಣದೊಳಗೆ ಪ್ರಯಾಣಿಕರು ಸೇರಿದಂತೆ ಬಸ್‌ ಚಾಲಕರು ಮತ್ತು ನಿರ್ವಾಹಕರು ಪ್ರತಿದಿನ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬೆರಳೆಣಿಕೆಯಷ್ಟು ಪ್ಲಾಟ್‌ಫಾರಂಗಳಿಗೆ ಹತ್ತಾರು ಬಸ್‌ಗಳು ಏಕಕಾಲಕ್ಕೆ ನುಗ್ಗುತ್ತವೆ. ಬಸ್‌ ತಿರುಗಿಸುವುದು, ಹಿಂದಕ್ಕೆ ತೆಗೆದುಕೊಳ್ಳುವುದಕ್ಕೆ ಹರಸಾಹಸ ಪಡುತ್ತಾರೆ. ಬಸ್‌ದಟ್ಟಣೆಗಳ ಮಧ್ಯೆದಲ್ಲೇ ಪ್ರಯಾಣಿಕರು ಅತ್ತಿಂದಿತ್ತ ಓಡಾಡಿಕೊಂಡಿರುತ್ತಾರೆ.

ಸಿಂಧನೂರು ಬಸ್‌ ನಿಲ್ದಾಣ ಹೊರಗಿನಿಂದ ಹೊಳಪು, ಒಳಗಡೆ ಕೊಳಕು. ಕಟ್ಟಡದೊಳಗೆ ತ್ಯಾಜ್ಯ ಸಂಗ್ರಹವಾಗಿದೆ. ಕೆಲವು ಕೋಣೆಗಳು ಬಳಕೆಯಾಗದೆ ಶಿಥಿಲಾವಸ್ಥೆಗೆ ಹೋಗಿವೆ.

ಪ್ರಯಾಣಿಕರ ಪರದಾಟ

ಸಿರವಾರ: ಪಟ್ಟಣದ ಬಸ್ ನಿಲ್ದಾಣವು ನೂರಾರೂ ಬಸ್ ಸಂಚರಿಸುವ ಪ್ರಮುಖ ಕೇಂದ್ರವಾಗಿದ್ದು, ಮಳೆ ಬಂದರೆ ಸಾಕು ನಿಲ್ದಾಣವಿಡೀ ಜಲಾವೃತವಾಗುತ್ತದೆ.

ಮಳೆ ನೀರಿನಿಂದಾಗಿ ಬಸ್ ನಿಲುಗಡೆಗೆ ಸ್ಥಳದ ಕೊರತೆ ಎದುರಿಸುವಂತಾಗಿದೆ. ಇದರಿಂದ ಪ್ರಯಾಣಿಕರು ಬಸ್ ಹತ್ತಲು ಹರಸಾಹಸ ಪಡುತ್ತಾರೆ. ಒಮ್ಮೆ ಮಳೆಯಾದರೆ, ನಿಲ್ದಾಣದೊಳಗೆ ಕೆಸರುಮಯ ಸ್ಥಿತಿ ದೂರವಾಗಲು ಕನಿಷ್ಠ ವಾರವಾದರೂ ಬೇಕಾಗುತ್ತದೆ. ಮಳೆ ನೀರನ್ನು ಬಸ್ ನಿಲ್ದಾಣದಿಂದ ಬೇರೆಡೆ ಹರಿಸಲು ಅವಕಾಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಳೆ ನೀರಿನ ತೊಂದರೆ ಅನುಭವಿಸುವಂತಾಗಿದೆ.

ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯಿಲ್ಲ

ಸಿಂಧನೂರು: ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಂಧನೂರು ನಗರದ ಬಸ್ ನಿಲ್ದಾಣದ ಆವರಣ ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ.

ಈ ಹಿಂದೆ ಸಂಘ-ಸಂಸ್ಥೆಗಳು ಬಸ್ ನಿಲ್ದಾಣದ ಸುತ್ತಲಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಗಿಡಗಳನ್ನು ನೆಟ್ಟಿದ್ದರು. ಆದರೀಗ ಮಳೆಯಿಂದಾಗಿ ಎಲ್ಲೆಂದರಲ್ಲಿ ಮಳೆನೀರು ಸಂಗ್ರಹವಾಗಿದೆ. ಕಸದ ರಾಶಿ ಬಿದ್ದಿದೆ. ಅವುಗಳ ಮಧ್ಯ ಹಂದಿ, ನಾಯಿಗಳ, ದನಕರುಗಳು ಬಿದ್ದು ಒದ್ದಾಡುವುದು ಸಾಮಾನ್ಯವಾಗಿದೆ.

ಹಂದಿಗಳ ವಾಸಸ್ಥಾನ

ದೇವದುರ್ಗ: ಪಟ್ಟಣದ ಎನ್‌ಇಕೆಆರ್‌ಟಿಸಿ ನಿಲ್ದಾಣದ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗಿದೆ ಇದರಿಂದ ದುರ್ವಾಸನೆ ಬರುತ್ತಿದೆ ಅಲ್ಲದೇ ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯ ಗುತ್ತಿಗೆದಾರನ ಬೇಜವಾಬ್ದಾರಿತನದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ.

ಕೆಸರು ಗದ್ದೆಯಾದ ಬಸ್‍ ನಿಲ್ದಾಣ

ಲಿಂಗಸುಗೂರು: ಸ್ಥಳೀಯ ಬಸ್‍ ನಿಲ್ದಾಣ ಆವರಣ ಅಭಿವೃದ್ಧಿಗೆ ಲಕ್ಷಾಂತರ ಅನುದಾನ ಬಿಡುಗಡೆ ಆಗಿದೆ. ಅಪೂರ್ಣ ಕಾಮಗಾರಿಯಿಂದ ಮಳೆ ಬಂದಾಗ ಮುಖ್ಯದ್ವಾರ ಪ್ರವೇಶಿಸುವ ರಸ್ತೆಗಳು ಜಲಾವೃತಗೊಂಡು ಕೆಸರುಗದ್ದೆಯಾಗಿ ಮಾರ್ಪಡುತ್ತಿವೆ.
ದಶಕದ ಹಿಂದೆ ನಿರ್ಮಾಣಗೊಂಡಿದ್ದ ಸಿಸಿ ರಸ್ತೆ ಹೊಡೆದು ಹಾಕಿ ಹಣ ದುರ್ಬಳಕೆ ಮಾಡಿದ್ದರಿಂದ ಬಹುತೇಕ ಆವರಣ ಕಾಂಕ್ರಿಟ್‍ ಕೊರತೆಯಿಂದ ತೆಗ್ಗುಗುಂಡಿಗಳು ಕಾಣಿಸಿಕೊಂಡು ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಭೇಟಿ ನೀಡಿದಾಗ ನೂತನ ಬಸ್‍ ನಿಲ್ದಾಣದ ಆಮೆಗತಿಯ ಕಾಮಗಾರಿ ಆವರಣದಲ್ಲಿನ ಅವ್ಯವಸ್ಥೆ ಬಗ್ಗೆ ಗಮನ ಸೆಳೆದರೂ ಸ್ಪಂದಿಸಿಲ್ಲ.

ಕೊನೆಯಾಗದ ಪ್ರಯಾಣಿಕರ ಗೋಳು

ಮಾನ್ವಿ: ಮಳೆ ಬಂದರೆ ಸಾಕು ಮಾನ್ವಿ ಬಸ್ ನಿಲ್ದಾಣ ಕೆಸರು ಗದ್ದೆಯಂತಾಗುತ್ತದೆ. ಇದು ಹಲವು ವರ್ಷಗಳ ಸಾಮಾನ್ಯ ಸಮಸ್ಯೆಯಾಗಿದೆ.

ಬಸ್ ನಿಲ್ದಾಣದ ಆವರಣದ ನೀರು ಮುಂಭಾಗದಲ್ಲಿರುವ ತಗ್ಗು ಗುಂಡಿಗಳಲ್ಲಿ ಸಂಗ್ರಹವಾಗುತ್ತದೆ. ನಿಲ್ದಾಣ ಪ್ರವೇಶಿಸಲು ಪ್ರಯಾಣಿಕರು ಹರಸಾಹಸ ಪಡುವ ಸ್ಥಿತಿ ಸಾಮಾನ್ಯ. ನಿಲ್ದಾಣಕ್ಕೆ ಬರುವ ಬಸ್‍ಗಳು ಹಾಗೂ ವಾಹನ ಸವಾರರಿಗೂ ಮುಂದಿನ ರಸ್ತೆ ದಾಟಲು ತೊಂದರೆಯಾಗುತ್ತದೆ. ಮಳೆ ನೀರು ಹರಿಯಲು ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ. ಜಾಗದ ಕೊರತೆ ಇದೆ. ತಗ್ಗು ಗುಂಡಿಗಳನ್ನು ಮುಚ್ಚಲು ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸುತ್ತಿಲ್ಲ.

ಮಾನ್ವಿ ಪಟ್ಟಣದ ಹೊರವಲಯದ ವಿಶಾಲ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣ ದಶಕಗಳಿಂದ ಇದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT