ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಬಾಲಕಾರ್ಮಿಕರ ರಕ್ಷಣೆ: ಇಬ್ಬರು ರೈತರ ವಿರುದ್ಧ ದೂರು ದಾಖಲು

Last Updated 4 ಮಾರ್ಚ್ 2020, 12:06 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಂದಕಲ್ ಹಾಗೂ ಸುಂಕೇಶ್ವರಾಳ ಗ್ರಾಮಗಳಲ್ಲಿ ಹತ್ತಿ ಮತ್ತು ಮೆಣಸಿನಕಾಯಿ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೂವರು ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮಂಗಳವಾರ ರಕ್ಷಣೆ ಮಾಡಿದ್ದು, ಇಬ್ಬರು ರೈತರ ವಿರುದ್ಧ ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಕ್ಕಳ ಸಹಾಯ ವಾಣಿಗೆ ಬಂದ ದೂರುಗಳನ್ನು ಆಧರಿಸಿ ಮಂದಕಲ್ ಗ್ರಾಮದ ಮೌಲಾಸಾಬ್ ಹಿಮಾಮ್‌ಸಾಬ್ ಹೊಲದಲ್ಲಿ ಕೆಲಸ ಮಾಡುತ್ತಿದ್ದ 12 ಮತ್ತು 13 ವರ್ಷದ ಇಬ್ಬರು ಮಕ್ಕಳನ್ನು ಹಾಗೂ ಸುಂಕೇಶ್ವರಾಳ ಗ್ರಾಮದ ಹನುಮಂತ ರೆಡ್ಡಿ ವಿರುಪಾಕ್ಷಗೌಡ ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 10 ವರ್ಷದ ಮಗುವನ್ನು ಸಮಿತಿ ರಕ್ಷಿಸಿದೆ.

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. 2016 ರ ತಿದ್ದುಪಡಿ ಕಾಯ್ದೆ ಪ್ರಕಾರ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ದುಡಿಸಿಕೊಂಡಲ್ಲಿ ₹50 ಸಾವಿರ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಕರೆದುಕೊಂಡು ಹೋಗುವುದು ಕೂಡಾ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಸಮಿತಿ ತಿಳಿಸಿದೆ.

ದಾಳಿ ನಡೆಸಿದ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾಧಿಕಾರಿ ಮಂಜುನಾಥರೆಡ್ಡಿ, ಬಚಪನ್ ಬಚಾವೋ ಆಂದೋಲನ ರಾಜ್ಯ ಸಂಯೋಜಕಿ ಸುಮತಿ, ಕಾರ್ಮಿಕ ನಿರೀಕ್ಷಕ ವೆಂಕಟಸ್ವಾಮಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಪ್ರೋಗ್ರಾಮ್ ಮ್ಯಾನೇಜರ್‌ ರವಿಕುಮಾರ, ಸಿಆರ್‌ಪಿ ಶಿಕ್ಷಣ ಇಲಾಖೆ ಶಂಭುಲಿಂಗಪ್ಪ, ಸುಂಕೇಶ್ವರಾಳ ಗ್ರಾಮ ಲೆಕ್ಕಿಗ ನಸೀರುದ್ದೀನ್, ಮಕ್ಕಳ ರಕ್ಷಣಾ ಘಟಕದ ಕೀರಲಿಂಗಪ್ಪ, ಖಾಜಾಬಿ, ಈರಮ್ಮ, ಮಕ್ಕಳ ಸಹಾಯವಾಣಿಯ ತಾಯರಾಜ್ , ಮುಕ್ಕಣ್ಣ , ಮಹೇಶ ಮತ್ತು ಡಾನ್‌ಬೋಸ್ಕೋ ಸಂಸ್ಥೆ ದೇವದುರ್ಗದ ಫಾದರ್ ಕುರಿಯೋಕೋಸ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT