ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಎಗೆ ಕಂಟಕವಾಯಿತೆ ನಕಲಿ ಸಹಿ; ₹ 50 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ

₹ 50 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ಬೆಳಕಿಗೆ
Last Updated 1 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ರಾಯಚೂರು:‌ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶಬಾಬು ಅವರು ಪ್ರಾಣ ಕಳೆದುಕೊಳ್ಳಲು, ನಕಲಿ ಸಹಿ ಮೂಲಕ ಹಣ ವರ್ಗಾಯಿಸಿಕೊಂಡಿದ್ದೆ ಕಾರಣವಾಯಿತೇ ಎನ್ನುವ ಚರ್ಚೆ ಅಧಿಕಾರಿಗಳ ಮಟ್ಟದಲ್ಲಿ ಶುರುವಾಗಿದೆ.

ಬೆಂಗಳೂರನ ವಸತಿಗೃಹವೊಂದರಲ್ಲಿ ಪ್ರಕಾಶಬಾಬು ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು.

ಆಗಸ್ಟ್‌ 23ರಿಂದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಾರಂಭಿಸಿದ ಲೆಕ್ಕಪರಿಶೋಧನೆಯಲ್ಲಿ ಅವ್ಯವಹಾರಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.‌‌

‘ಅವ್ಯವಹಾರದ ಸಮಗ್ರ ಮಾಹಿತಿ ಲೆಕ್ಕಪರಿಶೋಧನೆ ಬಳಿಕ ತಿಳಿಯಲಿದೆ’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಭೂಸ್ವಾಧೀನ ವಿಭಾಗದ ಕಡತಗಳನ್ನು ನಿರ್ವಹಿಸುತ್ತಿದ್ದ ಪ್ರಕಾಶಬಾಬು, ನಕಲಿ ಸಹಿಗಳನ್ನು ಮಾಡಿದ್ದಲ್ಲದೆ, ಚೆಕ್‌ಗಳನ್ನು ತಿದ್ದಿ ತಮ್ಮ ಸಂಬಂಧಿಕರಿಗೆ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಲೆಕ್ಕ ಪರಿಶೋಧನೆ (ಆಡಿಟ್‌) ಬಳಿಕ ತಲೆದಂಡವಾಗುವುದು ನಿಶ್ಚಿತ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಕಾಶಬಾಬು ಅವರು ಕಚೇರಿಯಿಂದ ನಾಪತ್ತೆಯಾಗಿದ್ದರು’ ಎಂಬುದು ಸಹೋದ್ಯೋಗಿಗಳ ಅಂಬೋಣ. ಆತ್ಮಹತ್ಯೆಗೆ ಶರಣಾಗುವುದಕ್ಕೆ ಇದೇ ಸಂಗತಿಯೇ ಕಾರಣ ಇರಬಹುದು ಎನ್ನುತ್ತಾರೆ ಅವರು.

‘ಉಪವಿಭಾಗಾಧಿಕಾರಿ ಕಚೇರಿಯಲ್ಲೇ ದಶಕದಿಂದ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದು ಈಗ ಬಯಲಾಗುತ್ತಿದೆ. ಇದು ಉರುಳಾಗಿ ತಮ್ಮನ್ನು ಸುತ್ತಿಕೊಳ್ಳುವುದು ಅವರಿಗೆ ಮನವರಿಕೆ ಆಗಿತ್ತು. ₹ 50 ಲಕ್ಷಕ್ಕೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಮೇಲ್ನೊಟದಲ್ಲೇ ಕಂಡು ಬಂದಿದೆ. ಅದಕ್ಕೂ ಮಿಗಿಲಾಗಿ ಅವರ ವೈಯಕ್ತಿಕ ಬ್ಯಾಂಕ್‌ ಖಾತೆಗೂ ಸರ್ಕಾರದ ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಆರೋಪವಿದೆ’ ಎಂಬುದು ಮೂಲಗಳ ವಿವರಣೆ.

‘ರೈಲ್ವೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ, ನೀರಾವರಿ ನಾಲೆ ನಿರ್ಮಾಣಕ್ಕೆ ಭೂಸ್ವಾಧೀನ, ಜುರಾಲಾ ಹಿನ್ನೀರಿನಲ್ಲಿ ಜಮೀನು ಮುಳುಗಡೆ...ಹೀಗೆ ಹಲವು ಯೋಜನೆಗಳಿಗೆ ಸಂಬಂಧಿಸಿದ ಸರ್ಕಾರದ ಹಣ ದುರ್ಬಳಕೆ ಆಗಿದೆ’ ಎನ್ನುತ್ತವೆ ಈ ಮೂಲಗಳು.

‘ಉಪವಿಭಾಗಾಧಿಕಾರಿ ಕಚೇರಿಯಿಂದಲೆ ಭೂ ಪರಿಹಾರದ ಚೆಕ್‌ಗಳನ್ನು ನೀಡಲಾಗುತ್ತದೆ. ರೈತರಿಗೆ ಪರಿಹಾರ ಹಣ ನೀಡಬೇಕಾಗಿದ್ದ ಚೆಕ್‌ಗಳನ್ನು ತಿದ್ದಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಪ್ರಕಾಶಬಾಬು ಸರ್ಕಾರಕ್ಕೆ ವಂಚಿಸಿದ್ದಾರೆ ಎನ್ನುವುದು ಅವರ ಮೇಲಿರುವ ಪ್ರಮುಖ ಆರೋಪ. ಇದು ಆಡಿಟ್‌ ವರದಿ ಬಳಿಕ ಸಾಬೀತಾಗುವುದಷ್ಟೇ ಬಾಕಿ ಉಳಿದಿದೆ’ಎಂಬುದು ಈ ಮೂಲಗಳ ಹೇಳಿಕೆ.

ಪತ್ನಿ, ಅತ್ತೆ, ಮಾವನ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳ ತಂಡವುಪ್ರಾಥಮಿಕ ತನಿಖೆಯಲ್ಲಿ ಪತ್ತೆ ಮಾಡಿದೆ. ಲೆಕ್ಕ ಪರಿಶೋಧಕ ತಂಡವು ರಾಯಚೂರಿಗೆ ಬಂದಿರುವ ಸುಳಿವು ಪಡೆದಿದ್ದ ಪ್ರಕಾಶಬಾಬು ಅವರು ಆತಂಕಕ್ಕೆ ಒಳಗಾಗಿದ್ದರು. ಅದೇ ದಿನವೇ ಅವರು ಕಚೇರಿಗೆ ಬರದೆ ನಾಪತ್ತೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT