ಶನಿವಾರ, ಮಾರ್ಚ್ 25, 2023
29 °C

ಗ್ರಾಮೀಣ ಶಾಸಕರ ಅನುದಾನ ಹೈಮಾಸ್ಟ್‌ ದೀಪ, ದೇವಸ್ಥಾನಕ್ಕೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರಥಮಬಾರಿ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದ ಬಸನಗೌಡ ದದ್ದಲ ಅವರು ತಮ್ಮ ಸ್ಥಳೀಯ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಬಹುತೇಕ ಹೈಮಾಸ್ಟ್‌ ದೀಪ ಅಳವಡಿಸುವುದಕ್ಕೆ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಹಂಚಿಕೆ ಮಾಡಿದ್ದಾರೆ.

2018 ರಿಂದ ಇದುವರೆಗೂ ಸ್ಥಳೀಯ ಕ್ಷೇತ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ₹6 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎಲ್ಲ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಶಾಸಕರು ಹಂಚಿಕೆ ಮಾಡಿದ್ದಾರೆ. ಆದರೆ ವಿವಿಧ ಕಾಮಗಾರಿಗೆ ₹5.2 ಕೋಟಿ ವೆಚ್ಚವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 131 ವಿವಿಧ ಕಾಮಗಾರಿಗಳಿಗೆ ಶಾಸಕರು ಅನುದಾನ ಒದಗಿಸಿದ್ದಾರೆ. ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ ಒಂದು ಅ್ಯಂಬುಲೆನ್ಸ್‌ ಒದಗಿಸಲು ಒಟ್ಟು ₹49 ಲಕ್ಷ ಒದಗಿಸಿದ್ದಾರೆ. ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ಖರೀದಿಗಾಗಿ ₹60 ಲಕ್ಷ ಅನುದಾನ ಕೊಟ್ಟಿದ್ದಾರೆ. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ₹4 ಲಕ್ಷ ಅನುದಾನ ನೀಡಿದ್ದಾರೆ.

ರಾಯಚೂರು ಹಾಗೂ ಮಾನ್ವಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮೀಣ ವಿಧಾನಸಭೆ ಕ್ಷೇತ್ರದಾದ್ಯಂತ ವಿವಿಧ ದೇವಸ್ಥಾನಗಳ 36 ಕಾಮಗಾರಿಗಳಿಗೆ ಒಟ್ಟು ₹1.51 ಕೋಟಿ, 51 ಗ್ರಾಮಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸುವುದಕ್ಕಾಗಿ ₹1.84 ಕೋಟಿ, 12 ಕಡೆಗಳಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ₹50 ಲಕ್ಷ, 13 ಕಡೆಗಳಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಾಗಿ ₹13 ಲಕ್ಷ, ಎಂಟು ಶಾಲೆಗಳಿಗೆ ಡೆಸ್ಕ್‌ ಒದಗಿಸಲು ₹8.5 ಲಕ್ಷ ಹಾಗೂ ಆರು ಸಮುದಾಯ ಭವನಕ್ಕಾಗಿ ₹25.5 ಲಕ್ಷ ಅನುದಾನವನ್ನು ಶಾಸಕರು ಹಂಚಿಕೆ ಮಾಡಿದ್ದಾರೆ.

2018–19 ರಲ್ಲಿ ಬಂದಿದ್ದ ₹2 ಕೋಟಿ ಅನುದಾನದಲ್ಲಿ ಒಟ್ಟು 46 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ 10 ರಸ್ತೆ ಸುಧಾರಣೆ, ಮೂರು ಸಾಂಸ್ಕೃತಿಕ ಭವನ, 15 ಕಡೆಗಳಲ್ಲಿ ದೇವಸ್ಥಾನ ನಿರ್ಮಾಣ, ನಾಲ್ಕು ಸಮುದಾಯ ಭವನ, ಒಂಭತ್ತು ಗ್ರಾಮಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಹೈಮಾಸ್ಟ್‌ ದೀಪ ಅಳವಡಿಸುವುದಕ್ಕೆ ತಲಾ ₹3.5 ಲಕ್ಷ ಅನುದಾನ ಒದಗಿಸಿದ್ದಾರೆ. ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಈ ಅನುದಾನದಲ್ಲಿ ಒಟ್ಟು ₹22.5 ಲಕ್ಷ ಅನುದಾನ ಕೊಟ್ಟಿದ್ದಾರೆ.

2019–20ನೇ ಸಾಲಿನ ಕ್ಷೇತ್ರಭಿವೃದ್ಧಿಗಾಗಿ ಬಂದಿದ್ದ ₹2 ಕೋಟಿ ಅನುದಾನದಲ್ಲಿ 31 ಗ್ರಾಮಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಿದ್ದರೆ, 10 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿರುವುದು ಗಮನಾರ್ಹ. ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ಖರೀದಿಗೆ ₹20 ಲಕ್ಷ ಅನುದಾನ ಕೊಟ್ಟಿದ್ದಾರೆ. ಇದೇ ವರ್ಷ ವಿವಿಧ ಶಾಲೆಗಳಿಗೆ ಡೆಸ್ಕ್‌ ಖರೀದಿಗಾಗಿ ಒಟ್ಟು ₹8.5 ಲಕ್ಷ ಅನುದಾನ ಹಂಚಿಕೆ ಮಾಡಿದ್ದಾರೆ. ಸಂಪೂರ್ಣ ಅನುದಾನ ವೆಚ್ಚ ಮಾಡಲಾಗಿದೆ.

2020–21ನೇ ಸಾಲಿನಲ್ಲಿ 11 ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹45 ಲಕ್ಷ ಅನುದಾನ, ಐದು ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕಾಗಿ ₹24 ಲಕ್ಷ, ಮೂರು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ₹14 ಲಕ್ಷ, 11 ಗ್ರಾಮಗಳಲ್ಲಿ ತಲಾ ₹4 ಲಕ್ಷ ವೆಚ್ಚದಲ್ಲಿ ಹೈಮಾಸ್ಟ್‌ ಅಳವಡಿಸುವುದಕ್ಕಾಗಿ ₹44 ಲಕ್ಷ ಅನುದಾ ನೀಡಿದ್ದಾರೆ. ಮಾನ್ವಿ ತಾಲ್ಲೂಕಿನ ಗ್ರಾಮಗಳಿಗೆ ಒಟ್ಟು ₹5 ಲಕ್ಷ ಅನುದಾನ ವ್ಯಯಿಸಿದ್ದಾರೆ.

2021–22 ನೇ ಸಾಲಿನ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ₹49 ಲಕ್ಷ ವೆಚ್ಚದಲ್ಲಿ ಎರಡು ಆ್ಯಂಬುಲೆನ್ಸ್‌ಗಳ ಖರೀದಿಗೆ ಹಂಚಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರವು ಈಚೆಗೆ ₹1 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಈಗಾಗಲೇ ಅದನ್ನು ಶಾಸಕರು ವಿವಿಧ ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.