ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗು ಕಳೆದುಕೊಂಡ ರಂಗ ಮಂದಿರಗಳು!

ನಿರ್ವಹಣೆಗೆ ಬಳಕೆಯಾಗದ ಸಂಗ್ರಹವಾದ ಶುಲ್ಕ
Last Updated 10 ಜುಲೈ 2022, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಮಹಾತ್ಮರ ಜಯಂತಿ ಆಚರಣೆಗೆ, ನಾಟಕ, ಸಂಗೀತ ಸೇರಿದಂತೆ ವಿವಿಧ ಸಮಾರಂಭಗಳನ್ನು ಆಯೋಜಿಸುವುದಕ್ಕೆ ನೆಲೆಯಾಗಿರುವ ಸಭಾಂಗಣಗಳು ದಿನಕಳೆದಂತೆ ರಂಗು ಕಳೆದುಕೊಳ್ಳುತ್ತಿವೆ. ಕನಿಷ್ಠ ಪಕ್ಷ ಕಾರ್ಯಕ್ರಮಗಳಿಂದ ಸಂಗ್ರಹವಾದ ಶುಲ್ಕ ಬಳಕೆ ಮಾಡಿ ಸಭಾಂಗಣ ನಿರ್ವಹಣೆ ಮಾಡುತ್ತಿಲ್ಲ.

ರಾಯಚೂರು ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರವು ಹೆಸರಿನಿಂದಲೇ ಖ್ಯಾತಿ ಪಡೆದಿದೆ. ಅಷ್ಟು ಮಹತ್ವದ ನೆಲೆ. ಜಿಲ್ಲೆ ಹಾಗೂ ಹೊರಜಿಲ್ಲೆಯವರಿಗೂ ಈ ರಂಗಮಂದಿರ ಚಿತಪರಿಚಿತ. ರಂಗಮಂದಿರ ಕುರಿತು ಕಲಾವಿದರು, ಹೋರಾಟಗಾರರು ಮತ್ತು ಭಾಷಣಕಾರರು ತಮ್ಮದೇ ಆದ ವಿಶೇಷ ಅನುಭವವನ್ನು ಹೇಳುವುದು ಸಾಮಾನ್ಯ. ಇಂಥ ರಂಗಮಂದಿರಕ್ಕೆ ಪ್ರತಿಸ್ಪರ್ಧಿ ವೇದಿಕೆ ಸದ್ಯ ರಾಯಚೂರಿನಲ್ಲಿ ಯಾವುದೂ ಇಲ್ಲ.

ಆದರೆ, ಇದರಲ್ಲಿರುವ ಸೌಲಭ್ಯಗಳು ಮತ್ತು ನಿರ್ವಹಣೆ ವಿಷಯ ಬಂದಾಗ, ಖ್ಯಾತಿಗೆ ವಿರುದ್ಧವಾದ ಪದಗಳನ್ನು ಬಳಸಿ ಅಸಮಾಧಾನ ಹೊರಹಾಕುವುದು ಕೂಡಾ ಸಾಮಾನ್ಯವಾಗಿದೆ. ರಂಗಮಂದಿರಕ್ಕೆ ಬರುವ ಪ್ರತಿ ಪ್ರೇಕ್ಷಕನಿಗೆ ಮೊದಲು ಖುಷಿ ಕೊಡಬೇಕಾದ ಸೌಲಭ್ಯವೆಂದರೆ ಕುಳಿತುಕೊಳ್ಳುವ ಆಸನ. ಆನಂತರ ವೇದಿಕೆಯ ಮೇಲಿನ ಕಾಣುವ ಸೌಲಭ್ಯಗಳು ಮತ್ತು ಕಿವಿಗೆ ಕೇಳಿಸುವ ಧ್ವನಿವರ್ಧಕಗಳು ಇತ್ಯಾದಿ.

ಆದರೆ, ಆಸನಗಳ ವ್ಯವಸ್ಥೆ ಆಧ್ವಾನವಾಗಿದ್ದರೂ ಹಾಗೇ ಮುಂದು ವರಿಸಿಕೊಂಡು ಹೋಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಮೈ ಕೈಗಳಿಗೆ ಪರಚುವ ರೀತಿ ಆಸನಗಳಿಗೆ ನಟ್‌ಬೋಲ್ಟ್‌ ಹಾಕಲಾಗಿದೆ. ಅನೇಕ ಜನ ಈ ನಟ್‌ಬೋಲ್ಟ್‌ನಿಂದ ಧರಿಸಿದ ಬಟ್ಟೆ ಹರಿದುಕೊಂಡು ಫಜೀತಿ ಅನುಭವಿಸುತ್ತಿದ್ದಾರೆ. ಆಸನಗಳಿಗೆ ಅಳವಡಿಸಿದ ನಟ್‌ಬೋಲ್ಟ್‌ ಹೊರಭಾಗಕ್ಕೆ ಚಾಚಿಕೊಂಡಿವೆ. ಪ್ರೇಕ್ಷಕರು ತಮ್ಮ ಎರಡು ಕೈ ಆಸನದ ಕೈಗಳ ಮೇಲೆ ಚಾಚುವಂತಿಲ್ಲ. ಒಂದು ವೇಳೆ ಮೈಮರೆತು ಕೈ ಚಾಚಿದರೆ, ಪರಿಚಿಕೊಳ್ಳುತ್ತವೆ. ರಂಗ ಮಂದಿರದೊಳಗಿನ ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛವಾಗಿಡುತ್ತಿಲ್ಲ. ಧ್ವನಿವರ್ಧಕಗಳು ಕರ್ಕಶವಾಗಿರುವ ಕಾರಣ, ಬಹಳಷ್ಟು ಕಾರ್ಯಕ್ರಮಗಳಿಗೆ ಹೊರಗಿನಿಂದಲೇ ಧ್ವನಿವರ್ಧಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ವರ್ಣಗಳ ವಿದ್ಯುತ್‌ದೀಪಗಳ ವ್ಯವಸ್ಥೆ ಕೂಡಾ ದಿನಕಳೆದಂತೆ ತಾಂತ್ರಿಕ ದೋಷಕ್ಕೆ ಒಳಗಾಗಿವೆ. ಐದು ವರ್ಷಗಳ ಹಿಂದೆ ರಂಗಮಂದಿರ ನವೀಕರಣ ಮಾಡಲಾಗಿದೆ. ನವೀಕರಣದ ಬಗ್ಗೆ ಆರಂಭದಲ್ಲೇ ಆರೋಪಗಳು ಶುರುವಾಗಿದ್ದು, ಇದುವರೆಗೂ ಅನೇಕ ಸಂಘ–ಸಂಸ್ಥೆಗಳು ರಂಗಮಂದಿರದ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಸಲ್ಲಿಸುತ್ತಲೇ ಬಂದಿವೆ.

ರಂಗಮಂದಿರ ಹೊರಭಾಗವು ಇನ್ನೂ ಅವ್ಯವಸ್ಥೆಯಿಂದ ಕೂಡಿದೆ. ಗೋಡೆಗಳು ಬಣ್ಣ ಕಳೆದುಕೊಂಡಿದ್ದು, ಶಿಥಿಲವಾಗುತ್ತಿವೆ. ಮೆಟ್ಟಿಲುಗಳಿಗೆ ಅಳವಡಿಸಿದ್ದ ಆಸರೆ ಕಂಬಗಳು ಕಿತ್ತು ಹೋದರೂ ದುರಸ್ತಿ ಮಾಡಿಸುತ್ತಿಲ್ಲ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ರಂಗಮಂದಿರ ನಿರ್ವಹಣೆ ಮಾಡಲಾಗುತ್ತಿದೆ. ರಂಗಮಂದಿರ ದುರಸ್ತಿ ಮತ್ತು ಅದಕ್ಕೆ ಆವರಣ ಗೋಡೆ ನಿರ್ಮಾಣ ಮಾಡುವುದಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಎರಡು ವರ್ಷಗಳಿಂದ ಅಧಿಕಾರಿಗಳು ಹೇಳುತ್ತಿದ್ದಾರೆ.

ಸಮಸ್ಯೆಗಳೇ ಹೆಚ್ಚು

ಲಿಂಗಸುಗೂರು: ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ, ಸಾಂಸ್ಕೃತಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ₹1.10ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಾಂಸ್ಕೃತಿಕ ಭವನವು ಮೇಲುಸ್ತುವಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯದಿಂದ ಮೋಜು-ಮಸ್ತಿ ಕೇಂದ್ರವಾಗಿ ಬದಲಾಗಿದೆ.

2011ರಲ್ಲಿ ನಗರೋತ್ಥಾನ ಯೋಜನೆಯ ಮೊದಲ ಹಂತದಲ್ಲಿ ₹1ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿತ್ತು. ಗುತ್ತಿಗೆದಾರರ ವಿಳಂಬ ಧೋರಣೆ, ಅನುದಾನ ಕೊರತೆ ಮುಂದಿಟ್ಟು ಹೆಚ್ಚುವರಿಯಾಗಿ ಪುರಸಭೆ ಎಸ್‍ಎಫ್‍ಸಿ ಯೋಜನೆಯಡಿ ₹10 ಲಕ್ಷ ಅನುದಾನ ನೀಡಲಾಗಿತ್ತು.

2017ರಲ್ಲಿ ಲೋಕಾರ್ಪಣೆ ಆಗಿದ್ದು, ಬೆರಳೆಣಿಕೆಯಷ್ಟು ಸರ್ಕಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಉಳಿದಂತೆ ಅಹೋರಾತ್ರಿ ಪುಂಡ ಪೋಕರಿಗಳ ಪಾಲಿಗೆ ಮೋಜು ಕೇಂದ್ರವಾಗಿ ಮಾರ್ಪಟ್ಟಿದೆ. ಇಸ್ಪೀಟ್‍, ಮಟ್ಕಾ, ಗಾಂಜಾ, ಕುಡಿತ ಸೇರಿದಂತೆ ವೇಶ್ಯಾವಾಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸುತ್ತಮುತ್ತಲ ನಾಗರಿಕರು ಹೇಳುತ್ತಾರೆ.

ಸಾಂಸ್ಕೃತಿಕ ಭವನದ ಮೇಲುಸ್ತುವಾರಿ, ನಿರ್ವಹಣೆ ಕೊರತೆಯಿಂದ ಶೌಚಾಲಯ, ವಿದ್ಯುತ್‍ ಸಂಪರ್ಕ ಸಮಸ್ಯೆ ಹೆಚ್ಚಾಗಿದೆ.

ಬಾಗಿಲು, ಕಿಟಕಿ ಗಾಜು ಕಿತ್ತುಕೊಂಡಿವೆ. ಸಭಾಂಗಣದಲ್ಲಿ ಪ್ರತಿಧ್ವನಿ ಬರುತ್ತಿದ್ದು, ಕಾರ್ಯಕ್ರಮ ಆಯೋಜಿಸಲು ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಲಾ ಆಸಕ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಸ್ವಚ್ಛತೆ ಮರೀಚಿಕೆ

ದೇವದುರ್ಗ: ಪಟ್ಟಣದ ಪುರಸಭೆ ಮುಂಭಾಗದಲ್ಲಿರುವ ಸಾರ್ವಜನಿಕ ಕ್ಲಬ್ ಆವರಣವು ಸ್ವಚ್ಛತೆಯ ಕೊರತೆ ಎದುರಿಸುತ್ತಿದೆ.

ತಾಲ್ಲೂಕು ಆಡಳಿತ ವತಿಯಿಂದ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹನೀಯರ ಜಯಂತಿಗಳು, ಶಾಲಾ ಕಾಲೇಜು ವಾರ್ಷಿಕೋತ್ಸವಗಳು, ಮತ್ತು ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಇದೆ ಆವರಣದಲ್ಲಿ ನಡೆಯುತ್ತವೆ.

ಪುರಸಭೆ ನಿರ್ಲಕ್ಕ್ಷ್ಯ ಹಾಗೂ ತಾಲ್ಲೂಕು ಆಡಳಿತದ ನಿರ್ಲಕ್ಷದಿಂದಾಗಿ ಸಾರ್ವಜನಿಕ ಕ್ಲಬ್ ಆವರಣ ಅನೈತಿಕ ಚಟುವಟಿಕೆಗಳ ತಾಣ ಹಾಗೂ ಸಾರ್ವಜನಿಕರ ಶೌಚಾಲಯವಾಗಿ ಪರಿವರ್ತನೆಯಾಗಿದೆ.

ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಕ್ಲಬ್ ಆವರಣ ಸುತ್ತಲೂ ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ಕೋರ್ಟ್, ಮಿನಿ ವಿಧಾನಸೌಧ, ಪುರಸಭೆ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕೇಂದ್ರ ಕಚೇರಿಗಳಿವೆ.

ಈ ಕಚೇರಿಗೆ ಬರುವ ಎಲ್ಲಾ ಜನರು ಈ ಪ್ರದೇಶದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ದುರ್ನಾತ ಬೀರುತ್ತಿದೆ. ಅಸ್ವಚ್ಛತೆ ಕಾಡುತ್ತಿದೆ.

₹3 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೈಮಾಸ್ಟ್‌ ದೀಪಗಳು ರಿಪೇರಿಗೆ ಬಂದು ವರ್ಷವಾದರೂ ಅವುಗಳಿಗೆ ದುರಸ್ತಿ ಭಾಗ್ಯ ದೊರೆತಿಲ್ಲ.ಇದರಿಂದ ಕ್ಲಬ್ ನಿಷ್ಪ್ರಯೋಜಕವಾಗಿದೆ.

ನಿರ್ವಹಣೆ ಕೊರತೆ

ಮಾನ್ವಿ:ಪಟ್ಟಣದಲ್ಲಿ ಸಭೆ, ಸಮಾರಂಭಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ಸರ್ಕಾರದ ವಿವಿಧ ಅನುದಾನಗಳಲ್ಲಿ ಹಲವು ರಂಗಮಂದಿರ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ.

ಆದರೆ ಪ್ರಸ್ತುತ ಎಪಿಎಂಸಿ ರೈತ ಸಮುದಾಯ ಭವನ ಮತ್ತು ತಾಲ್ಲೂಕು ಪಂಚಾಯಿತಿ ಸಭಾಂಗಣ ಮಾತ್ರ ಬಳಕೆಯಲ್ಲಿವೆ. ದಶಕಗಳ ಹಿಂದೆ ನಿರ್ಮಾಣವಾದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ರೈತ ಭವನ, ಸುವರ್ಣ ಕರ್ನಾಟಕ ರಂಗಮಂದಿರ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಆರು ತಿಂಗಳ ಹಿಂದೆ ಉದ್ಘಾಟನೆಯಾದ ಟೌನ್ ಹಾಲ್‌ ಹೊರಗಡೆಯಿಂದ ನೋಡಲು ಅಂದವಾಗಿ ಕಾಣುತ್ತದೆ. ಆದರೆ, ಆಸನಗಳು, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಬಳಕೆಗೆ ಲಭ್ಯವಾಗಿಲ್ಲ. ತಾಲ್ಲೂಕು ಆಡಳಿತದಿಂದ ನಡೆಯುವ ವಿವಿಧ ಜಯಂತಿಗಳು ಹಾಗೂ ಸಮಾರಂಭಗಳನ್ನು ತಹಶೀಲ್ದಾರ್ ಕಚೇರಿ ಅವರಣದಲ್ಲಿ ಆಯೋಜಿಸಲಾಗುತ್ತಿದೆ.

ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳ ನಿರ್ವಹಣೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರುಪಯುಕ್ತವಾಗಿವೆ ಎಂದು ಸ್ಥಳೀಯರು ಅಂಬೋಣ.

ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಪ್ರಕಾಶ್‌ ಮಸ್ಕಿ, ಯಮನೇಶ್‌ ಗೌಡಗೇರಾ, ಕೃಷ್ಣಾ ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT