ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಕಾಂಗ್ರೆಸ್ ತಿರಸ್ಕರಿಸಿ, ಎಸ್‍ಯುಸಿಐಗೆ ಬೆಂಬಲಿಸಿ: ಶರಣು ಗಡ್ಡಿ

Published 18 ಏಪ್ರಿಲ್ 2024, 14:30 IST
Last Updated 18 ಏಪ್ರಿಲ್ 2024, 14:30 IST
ಅಕ್ಷರ ಗಾತ್ರ

ಸಿಂಧನೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿ ಜನಪರ ಪರ್ಯಾಯ ಎಡ ಮತ್ತು ಜನತಾಂತ್ರಿಕ ರಾಜಕೀಯ ಶಕ್ತಿ ಸೃಷ್ಟಿಸಲು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಿ ಮತ ಹಾಕಿ ಗೆಲ್ಲಿಸಬೇಕು ಎಂದು ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಮನವಿ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘65 ವರ್ಷಗಳ ಕಾಲ ದೇಶಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ 10 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ದುರಾಡಳಿತ, ಭ್ರಷ್ಟಾಚಾರ ನಡೆಸಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ರೈತ, ಕಾರ್ಮಿಕ, ಜನವಿರೋಧಿ ನೀತಿ ಅನುಸರಿಸಿ, ಜನರ ಬದುಕನ್ನು ಮೂರಾಬಟ್ಟೆ ಮಾಡಿವೆ. ಮೋದಿ ಸರ್ಕಾರವಂತೂ ಅದಾನಿ, ಅಂಬಾನಿಗಳ ಅಭಿವೃದ್ಧಿಗಾಗಿ ಏಜೆಂಟ್‍ರಂತೆ ಕೆಲಸ ಮಾಡಿದೆ. ಪೆಟ್ರೋಲ್, ಡಿಸೇಲ್, ಸಿಲಿಂಡರ್ ಗ್ಯಾಸ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ದೂರಿದರು.

‘ನಾ ಖಾವುಂಗ ನಾ ಖಾನೆ ದೂಂಗ ಎನ್ನುವ ಮೋದಿ ಮಾತು ಬರೀ ಸುಳ್ಳೆಂದು ಸಾಬೀತಾಗಿದೆ. ಬದಲಿಗೆ ಮೇ ತುಮೆ ಚಂದಾ ದೂಂಗಾ, ತುಮ್ ಮುಝೇ ದಂಧಾ ದೋ ಎನ್ನುವುದು ಬಹಿರಂಗೊಂಡಿದೆ. ಅಷ್ಟೇ ಅಲ್ಲದೆ ಐಟಿ, ಇಡಿ ಬಿಟ್ಟು ಹೆದರಿಸಿ ಚುನಾವಣಾ ಬಾಂಡ್ ಹೆಸರಿನಲ್ಲಿ ಅನೇಕ ಕಂಪನಿಗಳಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದೆ. ಭ್ರಷ್ಟಾಚಾರವನ್ನು ಕಾನೂನಾತ್ಮಕಗೊಳಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು. ದೇಶದ ಆರ್ಥಿಕತೆ ದಿವಾಳಿಯಾಗಿದೆ, ಹಸಿವಿನ ಸೂಚ್ಯಾಂಕದಲ್ಲಿ 102ನೇ ಸ್ಥಾನದಲ್ಲಿದೆ. ₹15 ಲಕ್ಷ ಹಾಕಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸಿಲ್ಲ, ವಿದೇಶದಿಂದ ಕಪ್ಪು ಹಣ ವಾಪಸ್ ತಂದಿಲ್ಲ, ರೈತರ ಆದಾಯ ದ್ವಿಗುಣ ಮಾಡಿಲ್ಲ’ ಎಂದು ಟೀಕಿಸಿದರು.

ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷವು ಈ ಲೋಕಸಭೆ ಚುನಾವಣೆಗೆ ದೇಶದ 151 ಕ್ಷೇತ್ರಗಳಲ್ಲಿ, ಕರ್ನಾಟಕ ರಾಜ್ಯದ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕಾರ ಮಾಡಿ ಎಸ್‍ಯುಸಿಐ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳುಹಿಸಿದರೆ ಜನರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಸಮಿತಿ ಸದಸ್ಯರಾದ ವೀರೇಶ ಎಸ್.ಎನ್ ಹಾಗೂ ಶರಣಪ್ಪ ಉದ್ಬಾಳ್ ಮಾತನಾಡಿ ‘ಕೊಪ್ಪಳ ಕ್ಷೇತ್ರದ ಕೃಷಿ ಕೂಲಿಕಾರರು ಮಹಾನಗರಗಳಿಗೆ ಗುಳೆ ಹೋಗುವುದನ್ನು ತಡೆದು ಇಲ್ಲಿಯೇ ಉದ್ಯೋಗ ಕಲ್ಪಿಸುವುದು, ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದು, ಇಎಸ್‍ಐ ಆಸ್ಪತ್ರೆ ಮಂಜೂರು ಮಾಡಿಸುವುದು, ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಮಾಡುವುದು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಎಸ್‍ಯುಸಿಐ ಅಭ್ಯರ್ಥಿ ಶರಣು ಗಡ್ಡಿ ಅವರನ್ನು ಗೆಲ್ಲಿಸಿದರೆ ಕೈಗೆತ್ತಿಗೊಳ್ಳಲು ಮುಂದಾಲೋಚನೆ ಮಾಡಿಕೊಳ್ಳಲಾಗಿದೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಮನೆಗೆ ಕಳುಹಿಸಿ ಪರ್ಯಾಯ ರಾಜಕೀಯಕ್ಕಾಗಿ ಎಸ್‍ಯುಸಿಐಗೆ ಬೆಂಬಲಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಸಮಿತಿ ಸದಸ್ಯರಾದ ತಿರುಮಲ್ರಾವ್, ತಿರುಪತಿ ಗೋನ್ವಾರ, ಶರಣು ಪಾಟೀಲ್, ಭೀಮರಾಯ ವಕೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT