ಬುಧವಾರ, ಜೂಲೈ 8, 2020
28 °C
ರಾಯಚೂರು ನಗರಸಭೆಗೆ ದಿಢೀರ್‌ ಹೆಚ್ಚಿದ ಕೆಲಸ

ರಾಯಚೂರಿನಲ್ಲಿ ಮೊದಲ ಮಳೆಗೆ ಕಿತ್ತುಹೋದ ರಸ್ತೆಗಳು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮುಂಗಾರು ಆರಂಭ ಪೂರ್ವ ಈಚೆಗೆ ಸುರಿದ ಅಕಾಲಿಕ ಮಳೆಗೆ ರಾಯಚೂರು ನಗರದೊಳಗಿನ ರಸ್ತೆಗಳು ಮತ್ತು ಚರಂಡಿಗಳ ಚಿತ್ರಣವೆ ಬದಲಾಗಿದೆ.

ನಗರ ವ್ಯಾಪ್ತಿಯ ರಾಜ್ಯಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮಣ್ಣು, ಮರಳು ಹರಡಿಕೊಂಡಿದೆ. ಬಡಾವಣೆಗಳಿಗೆ ಸಂಪರ್ಕಿಸುವ ಮುಖ್ಯರಸ್ತೆಗಳಲ್ಲಿ ತಗ್ಗುಗಳು ಮತ್ತಷ್ಟು ವಿಸ್ತಾರವಾಗಿ ನೀರು ಸಂಗ್ರಹವಾಗಿದೆ. ಉಪರಸ್ತೆಗಳು ಹಾಗೂ ಕಾಲುದಾರಿಗಳಲ್ಲಿ ಚರಂಡಿಯೊಳಗಿನ ಕೊಳಚೆ ಹರಡಿದ್ದು, ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.

ಮಳೆಗಾಲ ಪೂರ್ವ ಅರ್ಧಮರ್ಧವಾಗಿದ್ದ ಚರಂಡಿ ಸ್ವಚ್ಛಗೊಳಿಸುವ ಕೆಲಸವನ್ನು ಮೊನ್ನೆ ಸುರಿದ ಮಳೆಯು ಪೂರ್ಣಗೊಳಿಸಿದೆ. ರಭಸವಾಗಿ ಸುರಿದ ಮಳೆಯಿಂದ ಚರಂಡಿಗಳೆಲ್ಲ ಖಾಲಿಯಾಗಿವೆ. ಅಕಾಲಿಕ ಮಳೆಯು ನಗರಸಭೆಗೆ ದಿಢೀರ್‌ ಕೆಲಸದ ಭಾರ ಹೆಚ್ಚಿಸಿದೆ. ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯ ವಿಲೇವಾರಿ ಇನ್ನು ಆರಂಭಿಸಿಲ್ಲ, ವಿಳಂಬವಾದರೆ ಮತ್ತೆ ಅದು ಚರಂಡಿಗೆ ಸೇರಲಿದೆ.

ನಗರದ ವಿವಿಧೆಡೆ ಸಂಪರ್ಕ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವುದಕ್ಕೆ ಹಾಕಿದ್ದ ಮರಳುಮಿಶ್ರಿತ ಮುರಂ ಕಿತ್ತುಹೋಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಬಟ್ಟೆಬಜಾರ್‌ ರಸ್ತೆಯುದ್ದಕ್ಕೂ ನೀರು ಸಂಗ್ರಹವಾಗಿದೆ. ರಸ್ತೆಗಳಲ್ಲಿ ಹರಡಿಕೊಂಡ ಮರಳಿನಿಂದಾಗಿ ಬೈಕ್‌ ಜಾರಿಬೀಳುವ ಘಟನೆಗಳು ನಡೆಯುತ್ತಿವೆ.

ನಗರದ ಬಹಳಷ್ಟು ರಸ್ತೆಗಳ ಎಡಬಲಕ್ಕೆ ಚರಂಡಿಗಳನ್ನು ನಿರ್ಮಾಣ ಮಾಡಿಲ್ಲ. ಇದರಿಂದ ಮಳೆನೀರು ಹರಿದು ಹೋಗಲು ದಾರಿಯಿಲ್ಲದೆ, ಪ್ರತಿವರ್ಷ ರಸ್ತೆ ಕಿತ್ತುಹೋಗಿ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಶಾಪುರ ಮಾರ್ಗದ ಎಫ್‌ಸಿಐ ಗೋದಾಮು ಎದುರು ರಸ್ತೆ ಕಿತ್ತುಹೋಗಿದ್ದು, ಇನ್ನೊಮ್ಮೆ ಮಳೆ ಸುರಿದರೆ ಸಂಪರ್ಕ ಕಡಿತವಾಗಲಿದೆ. ಗುಡ್ಡದಿಂದ ಹರಿದುಬರುವ ಮಳೆನೀರಿಗೆ ಮಾರ್ಗವೆ ಇಲ್ಲ.

ನಿರಂತರ ನೀರು ಹಾಗೂ ಒಳಚರಂಡಿ ನಿರ್ಮಾಣದ ಯೋಜನೆಗಳ ಜಾರಿಗಾಗಿ ನೂರಾರು ಕೋಟಿ ರೂಪಾಯಿ ಮಣ್ಣುಪಾಲಾಗಿಯೆ ಉಳಿದಿದೆ. ಕನಿಷ್ಠ ಯೋಜನೆಗಳ ಜಾರಿಗೆ ಅಗೆದುಹಾಕಿರುವ ರಸ್ತೆಗಳನ್ನು ಕೂಡಾ ಸಮರ್ಪಕವಾಗಿ ದುರಸ್ತಿ ಮಾಡುತ್ತಿಲ್ಲ. ವರ್ಷಗಳು ಉರುಳಿದರೂ ಸಮಸ್ಯೆಗಳು ಶಾಶ್ವತವಾಗಿ ಉಳಿದುಕೊಂಡಿವೆ. ಮಳೆ ಆರಂಭವಾದರೆ ಜ್ಯೋತಿ ಕಾಲನಿ, ಐಬಿ ಕಾಲೋನಿಯೊಳಗಿನ ಮಾರ್ಗಗಳು ಗದ್ದೆಗಳಾಗುತ್ತವೆ.

ಅತಿಕ್ರಮಣ ಹೆಚ್ಚಳ: ನಗರದಲ್ಲಿ ಅತಿಕ್ರಮಣ ಕಟ್ಟಡಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದರಿಂದ ಮಳೆನೀರು ಹರಿದು ಹೋಗುವುದಕ್ಕೆ ದಾರಿ ಆಗುತ್ತಿಲ್ಲ. ಇದರಿಂದಾಗಿ ಮಡ್ಡಿಪೇಟೆ, ಸಿಯಾತಾಲಾಬ್‌, ಎಲ್‌ಬಿಎಸ್‌ ನಗರ ಹಾಗೂ ಗಂಗಾನಿವಾಸದ ಮನೆಗಳಿಗೆ ಈಚೆಗೆ ಮಳೆನೀರು ನುಗ್ಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.