ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್‌ ಕಾಲೋನಿಯ ಮಕ್ಕಳಿಗೆ ಉಚಿತ ಚಿತ್ರಕಲಾ ಪಾಠ ಹೇಳಿಕೊಡುವ ಗೃಹಿಣಿ

Last Updated 6 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶಕ್ತಿನಗರ: ಇಲ್ಲಿನ ಆರ್‌ಟಿಪಿಎಸ್‌ ಕಾಲೋನಿಯಲ್ಲಿರುವ ಸವಿತಾ ಮುರಳಿಕೃಷ್ಣನ್‌ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಶಾಲಾ ಮಕ್ಕಳಲ್ಲಿ ಚಿತ್ರಕಲಾಸಕ್ತಿ ಬೆಳೆಸುವುದರ ಜೊತೆಗೆ ಕಲಾಕೃತಿ ರಚಿಸುವ ಬಗ್ಗೆ ಮನೆಯಲ್ಲೇ ಪಾಠ ಮಾಡುತ್ತಿರುವುದು ವಿಶೇಷ.

2006 ರಲ್ಲಿ ಆರ್‌ಟಿಪಿಎಸ್‌ ಕಾಲೋನಿಗೆ ಬಂದ ನಂತರದಲ್ಲಿ ಪಾಠ ಮಾಡುವ ಪ್ರವೃತ್ತಿ ಆರಂಭಿಸಿದವರು, ಇದುವರೆಗೂ ಮುಂದುವರಿಸಿದ್ದಾರೆ. ಪತಿ ಮುರುಳಿಕೃಷ್ಣನ್‌ ಅವರು ಆರ್‌ಟಿಪಿಎಸ್‌ನಲ್ಲಿ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಇದ್ದಾರೆ. ಗೃಹಿಣಿಯಾಗಿರುವ ಸವಿತಾ ಅವರು, ಕಲೆಗಾಗಿ ದಿನದಲ್ಲೊಂದಿಷ್ಟು ಸಮಯ ಮೀಸಲಿಡುತ್ತಾ ಬಂದಿದ್ದಾರೆ. ಹಲವಾರು ಸುಂದರ ಕಲಾಕೃತಿಗಳನ್ನು ರಚಿಸಿದ್ದಲ್ಲದೆ, ಶಾಲಾಮಕ್ಕಳು ಕೂಡಾ ಕಲಾಕೃತಿ ರಚಿಸುವುದಕ್ಕೆ ಪ್ರೇರಕರಾಗಿದ್ದಾರೆ.

ಕೋಲಾರ ಜಿಲ್ಲೆಯವರಾಗಿದ್ದು, ಬಿ.ಎ. ಪದವಿ ಶಿಕ್ಷಣದೊಂದಿಗೆ ಚಿತ್ರಕಲೆಯನ್ನು ಹವ್ಯಾಸವಾಗಿ ಕಲಿತುಕೊಂಡಿದ್ದಾರೆ. ಅದನ್ನೇ ಅಭ್ಯಾಸ ಮಾಡುತ್ತಾ ಈಗ ಪಾಠ ಹೇಳಿಕೊಡುವಷ್ಟು ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ. ತಮ್ಮ ಚಿತ್ರಕಲಾ ಪ್ರತಿಭೆಯ ಮೂಲಕ ಪ್ರಕೃತಿಯ ಸೊಬಗು, ಪ್ರಚಲಿತ ವಿದ್ಯಮಾನಗಳು, ವನ್ಯಮೃಗಗಳ ಕಲಾಕೃತಿ ರಚಿಸಿದ್ದಾರೆ. ಮಕ್ಕಳಿಗೆ ಮನಮುಟ್ಟುವಂತೆ ವಿಷಯವನ್ನು ಬೋಧಿಸಿ ಮಕ್ಕಳ ಅಚ್ಚುಮೆಚ್ಚಿನ ಚಿತ್ರಕಲಾ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 13 ವರ್ಷಗಳಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚಿತ್ರಕಲೆ ಅಭ್ಯಾಸ ಮಾಡಿಸಿದ್ದಾರೆ.

’ಚಿತ್ರಕಲಾಕೃತಿ ರಚಿಸುವ ಮುನ್ನ, ಕಲೆಯ ಬಗ್ಗೆ ಅರಿತುಕೊಳ್ಳಲೇಬೇಕು. ಕಲೆ ಎಂದರೇನು? ಎಂಬುದರ ಬಗ್ಗೆ ಮಕ್ಕಳು ತಿಳಿದು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲಿ ಎಂಬುದು ನನ್ನ ಉದ್ದೇಶ’ ಎನ್ನುತ್ತಾರೆ ಕಲಾವಿದೆ ಸವಿತಾ ಮುರಳೀಕೃಷ್ಣನ್‌.
‘ಮಗುವೊಂದು ಚಿತ್ರ ರಚಿಸುವಾಗ ಮಗುವಿನಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು. ಮಕ್ಕಳನ್ನು ಆಗಾಗ ತೋಟ, ಉದ್ಯಾನ, ಕಾಡು, ನದಿ, ಗಿಡ, ಮರ, ಪ್ರಾಣಿ ಇತ್ಯಾದಿಗಳನ್ನು ಪ್ರತ್ಯಕ್ಷವಾಗಿ ತೋರುವ ಮೂಲಕ ಅವರ ನೆನಪಿನ ಉಗ್ರಾಣದಲ್ಲಿ ಸಾಧ್ಯವಾದಷ್ಟು ದೃಶ್ಯಭಾಷೆಯ ಸಂಗ್ರಹ ಹೆಚ್ಚಾಗುವಂತೆ ಮಾಡಬೇಕು’ ಎಂಬುದು ಅವರ ಸಲಹೆ.

‘ಪ್ರತಿಯೊಂದು ಮಗುವು ಒಬ್ಬ ಶ್ರೇಷ್ಠ ಕಲಾವಿದ.ಅವರಿಗೆ ಮೊದಲು ಬರುವುದೇ ಚಿತ್ರಕಲೆ. ಅನಂತರ ಬರಹ ಓದು. ಚಿತ್ರ ಗೀಚುವುದೇ ಅವರಿಗೆ ಆನಂದ. ನಮ್ಮ ಸಮಾಜದ ಎಲ್ಲ ವರ್ಗಗಳ ಮಕ್ಕಳು, ತಾವು ಇಷ್ಟ ಪಡುವ ಆಟಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವುದನ್ನು ಕಾಣಬಹುದು’ ಎನ್ನುತ್ತಾರೆ.

‘ಶಿಕ್ಷಣದಲ್ಲಿ ಅಕ್ಷರಗಳನ್ನು ಕಲಿಸುವುದಕ್ಕಿಂತ ಮುಂಚೆ ಮಕ್ಕಳಿಗೆ ಚಿತ್ರಗಳನ್ನು ಬರೆಯಲು ಕಲಿಸಬೇಕು. ಅಕ್ಷರಗಳನ್ನು ಚಿತ್ರಕಲೆಯ ವಿಭಾಗವಾಗಿ ತಿಳಿಯಬೇಕು. ಪ್ರತಿ ಮಗುವಿನಲ್ಲೂ ಕಲಾಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ನಾವು ಅರಿತು ಅವರಿಗೆ ಕಲಾಶಿಕ್ಷಣ ಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT