ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಬಿತ್ತನೆ ಬೀಜ ದರ ಏರಿಕೆ: ರೈತರ ಆಕ್ರೋಶ

Published 23 ಮೇ 2024, 5:23 IST
Last Updated 23 ಮೇ 2024, 5:23 IST
ಅಕ್ಷರ ಗಾತ್ರ

ಕವಿತಾಳ: ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮ ಕಳೆದ ವರ್ಷದ ಬರ ಪರಿಸ್ಥಿತಿಯನ್ನು ಮರೆತು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಬಿತ್ತನೆ ಬೀಜಗಳ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಮತ್ತು ಹೆಸರು ಬಿತ್ತನೆ ಬೀಜ ವಿತರಣೆ ಆರಂಭವಾದ ಮೊದಲ ದಿನ ಬುಧವಾರ ಉರಿ ಬಿಸಿಲು ಲೆಕ್ಕಿಸದೆ ರೈತರು ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡು ಬಂತು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ 20 ಹಳ್ಳಿಗಳು ಈ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿವೆ. ಈ ವರ್ಷ 3,600 ಹೆಕ್ಟೇರ್ ತೊಗರಿ, 15 ಹೆಕ್ಟೇರ್ ಹೆಸರು ಬಿತ್ತನೆಯ ಗುರಿ ಹೊಂದಲಾಗಿದೆ. 200 ಕ್ವಿಂಟಲ್ ತೊಗರಿ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಅದರಲ್ಲಿ ಸದ್ಯಕ್ಕೆ 35 ಕ್ವಿಂಟಲ್ ಹಾಗೂ ಹೆಸರು ಬೇಡಿಕೆಯಂತೆ 60 ಕೆ.ಜಿ. ಪೂರೈಸಲಾಗಿದೆ.

ಕಳೆದ ವರ್ಷ 5 ಕೆ.ಜಿ ಯ ಒಂದು ಪ್ಯಾಕೆಟ್ ತೊಗರಿ ಬೀಜಕ್ಕೆ ಸಾಮಾನ್ಯ ರೈತರಿಗೆ ₹525, ಎಸ್ಸಿ, ಎಸ್ಟಿ ರೈತರಿಗೆ ₹462.50 ಇದ್ದ ದರ ಈ ವರ್ಷ ₹765 ಮತ್ತು ₹703ಕ್ಕೆ ಜಿಗಿದಿದೆ. ₹600 ಇದ್ದ ಹೆಸರು ಬೀಜ ಈ ವರ್ಷ ₹805ಕ್ಕೆ ಏರಿಕೆ ಕಂಡಿದೆ.

‘ಮಳೆ ಕೊರತೆ, ಬೆಲೆ ಕುಸಿತದಿಂದ ಕಳೆದ ವರ್ಷ ತೀವ್ರ ನಷ್ಟ ಅನುಭವಿಸಿದ್ದೇವೆ. ಈ ವರ್ಷ ಈಗಾಗಲೇ ಎರಡು ಬಾರಿ ಸಾಧಾರಣ ಮಳೆಯಾಗಿದ್ದು ಮುಂಗಾರು ಮಳೆ ಬರುವ ಲಕ್ಷಣಗಳು ಕಂಡು ಬರುತ್ತಿವೆ. ಬಿತ್ತನೆಗೆ ತಯಾರಿ ನಡೆಸಿದ್ದೇವೆ. ಬೀಜ ಖರೀದಿಗೆ ಬಂದಾಗಲೇ ದರ ಏರಿಕೆ ಬಿಸಿ ತಟ್ಟಿದೆ. ಸರ್ಕಾರ ಉಚಿತ ಯೋಜನೆಗಳ ಜಾರಿ ಮಾಡುವ ನೆಪದಲ್ಲಿ ವಿದ್ಯುತ್ ದರ ಏರಿಕೆ ಮಾಡಿದಂತೆ ಬಿತ್ತನೆ ಬೀಜದ ದರವನ್ನೂ ಏರಿಕೆ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತೆ’ ಎಂದು ಹುಸೇನಪುರ ಗ್ರಾಮದ ರೈತ ಸಂಜೀವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಪೂರೈಕೆ ಆಗಲಿದ್ದು ಕೊರತೆಯಾಗದಂತೆ ಕ್ರಮ ವಹಿಸಲಾಗವುದು. ಈ ವರ್ಷ ತೊಗರಿ ಬಿತ್ತನೆ ಹೆಚ್ಚಳದ ನಿರೀಕ್ಷೆ ಇದೆ
ಮಾರುತಿ ನಾಯಕ ಪ್ರಭಾರ ಸಹಾಕಯ ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT