ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಬಿಟ್ಟು ಒಂದು ವಾರ ಕಳೆದಿದೆ. ಆದರೆ ಸಸಿಗಳು ಸಿಗುತ್ತಿಲ್ಲವಾದ್ದರಿಂದ ರೈತರಿಗೆ ಭತ್ತ ನಾಟಿ ಮಾಡುವ ಭಾಗ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ.
ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ನೀರು ಬಿಡುತ್ತಿದ್ದ ಕಾರಣ ರೈತರು ಸಸಿ ಮಡಿಯನ್ನು ಹಾಕಲು ವಿಳಂಬ ಮಾಡಿದ್ದಾರೆ. ಆಗಸ್ಟ್ 15ರ ನಂತರ ನಾಟಿಗೆ ಬರುವಂತೆ ಸಸಿ ಹಾಕಿದ್ದಾರೆ. ಆದರೆ ಜುಲೈ ಕೊನೆಯಲ್ಲಿಯೇ ನೀರು ಬಿಟ್ಟಿರುವುದರಿಂದ ಭತ್ತ ನಾಟಿಗೆ ಸಸಿ ಇಲ್ಲದಂತಾಗಿದೆ.
ತಾಲ್ಲೂಕಿನಲ್ಲಿ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಶೇ 25 ರಷ್ಟು ಪ್ರದೇಶದಲ್ಲಿ ನಾಟಿ ಮಾಡುವಷ್ಟು ಮಾತ್ರ ಸಸಿ ಲಭ್ಯವಿದೆ. ಇನ್ನುಳಿದ ಸಸಿಯನ್ನು ಧಡೇಸುಗೂರು, ಸಿರುಗುಪ್ಪ ಮತ್ತಿತರ ಕಡೆಗಳಿಂದ ತರಬೇಕಾಗಿದೆ. ಪ್ರತಿಯೊಬ್ಬರು ಭತ್ತದ ಸಸಿಯನ್ನು ಕೇಳುತ್ತಿರುವ ಹಿನ್ನೆಲೆಯಲ್ಲಿ ಸಸಿ ಬೆಳೆಸಿದ ರೈತರು ಸಸಿಯ ದರವನ್ನು ಪ್ರತಿ ವರ್ಷಕ್ಕಿಂತ ಈ ವರ್ಷ ಇಮ್ಮಡಿಗೊಳಿಸಿದ್ದಾರೆ ಎನ್ನುತ್ತಾರೆ ರೈತ ಮಾಳಿಂಗರಾಯ ಗೊರೇಬಾಳ.
‘ಆಗಸ್ಟ್ 15ರ ನಂತರ ನೀರು ಬಿಟ್ಟಿದ್ದರೆ ಅಷ್ಟರೊಳಗೆ ರೈತರು ಹಾಕಿದ ಸಸಿಗಳು ನಾಟಿ ಮಾಡುವ ಹಂಗಾಮಿಗೆ ಬರುತ್ತಿದ್ದವು. ಜುಲೈ ತಿಂಗಳಲ್ಲಿಯೇ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಟ್ಟಿರುವುದರಿಂದ ಸಸಿಯ ತೊಂದರೆಯಾಗಿದೆ. ಆದಾಗ್ಯೂ ರೈತರು ಇತರ ನೀರಾವರಿ ತಾಲ್ಲೂಕುಗಳಿಂದ ಸಸಿಗಳನ್ನು ತರುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ಹೇಳಿದ್ದಾರೆ.
ತಾಲ್ಲೂಕಿನ ಎಡದಂಡೆ ನಾಲೆಗೆ ವ್ಯಾಪ್ತಿಗೊಳಪಡುವ 36ನೇ ವಿತರಣಾ ಕಾಲುವೆಯಿಂದ 55ನೇ ವಿತರಣಾ ಕಾಲುವೆಯವರೆಗೆ ರೈತರು ತಮ್ಮ ಹೊಲಗಳನ್ನು ಭತ್ತ ನಾಟಿಗೆ ಹದ ಮಾಡತೊಡಗಿದ್ದಾರೆ. ಆದರೆ ಸಸಿಯ ಕೊರತೆ ಇರುವುದರಿಂದ ಭತ್ತ ನಾಟಿಯ ಕಾರ್ಯ ಮಂದಗತಿಯಲ್ಲಿ ಸಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ತಾಲ್ಲೂಕು ಘಟಕದ ಸಂಚಾಲಕ ಚಂದ್ರಶೇಖರ ಕ್ಯಾತನಟ್ಟಿ ಹೇಳುತ್ತಾರೆ.
ಭತ್ತದ ಸಸಿಗೆ ಹೆಚ್ಚಿದ ಬೇಡಿಕೆ: ತಾಲ್ಲೂಕಿನಲ್ಲಿ ಭತ್ತ ಬೆಳೆಯುವ ಪ್ರದೇಶಕ್ಕೆ ಸಾಕಾಗುವಷ್ಟು ಸಸಿ ಇಲ್ಲದಿರುವುದರಿಂದ ಸಿರುಗುಪ್ಪ, ಗಂಗಾವತಿ, ಕಾರಟಗಿ ಮತ್ತಿತರ ತಾಲ್ಲೂಕುಗಳಿಂದ ಸಸಿಗಳನ್ನು ಕೊಂಡು ತರಲಾಗುತ್ತಿದೆ. ಕಳೆದ ವರ್ಷ ಒಂದು ಎಕರೆ ಜಮೀನಿಗೆ ಬೇಕಾಗುವ ಸಸಿಗೆ ಒಂದು ಸಾವಿರ ರೂಪಾಯಿ ದರ ಇತ್ತು. ಆದರೆ ಈ ಬಾರಿ ಅದು ದುಪ್ಪಟ್ಟಾಗಿದೆ. ನಾಟಿ ಮಾಡಲು ಪ್ರತಿ ಎಕರೆಗೆ ₹ 3 ಸಾವಿರ ಕೂಲಿಕಾರರಿಗೆ ಕೊಡಬೇಕಾಗಿದೆ. ಇದರಿಂದ ಕೃಷಿಯ ಖರ್ಚು ಹೆಚ್ಚಾಗುತ್ತಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ನಿರೀಕ್ಷೆಗಿಂತ ಪೂರ್ವದಲ್ಲಿ ಎಡದಂಡೆ ನಾಲೆಗೆ ನೀರು ಬಂದಿದೆ. ಸಸಿಗಳು ಇನ್ನು ನಾಟಿ ಮಾಡುವ ಹಂತಕ್ಕೆ ಬೆಳೆದಿಲ್ಲ. ಅನಿವಾರ್ಯವಾಗಿ ಬೇರೆ ತಾಲ್ಲೂಕುಗಳಿಂದ ಸಸಿಗಳನ್ನು ಖರೀದಿ ಮಾಡಿ ತರಬೇಕಾಗಿದೆ.-ರವಿಕುಮಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.