ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ನಂಬರ್‌ 3ಕ್ಕೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ರಸ್ತೆತಡೆ

ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ
Last Updated 5 ಜುಲೈ 2018, 17:31 IST
ಅಕ್ಷರ ಗಾತ್ರ

ರಾಯಚೂರು: ವಾರ್ಡ್‌ ನಂಬರ್‌ 3 ರ ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಸದಸ್ಯರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಎದುರಿನ ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಮನವಿ ಸಲ್ಲಿಸಿ, ಬಡಾವಣೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅಗತ್ಯ ಸೌಕರ್ಯ ಒದಗಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಎಸ್‌ಬಿಎಚ್ ಕಾಲೊನಿ, ಅಂಬೇಡ್ಕರ ನಗರ, ಜ್ಯೋತಿ ಕಾಲೊನಿ, ರಾಧಾಕೃಷ್ಣ ಕಾಲೊನಿಗೆ ಸಂಪರ್ಕ ಕಲ್ಪಿಸಲು ಸರಿಯಾದ ರಸ್ತೆಗಳಿಲ್ಲ. ಸಮೀಪದಲ್ಲಿರುವ ಶಾಲೆಗಳಿಗೆ ಹೋಗಲು ಕೂಡ ತೊಂದರೆ ಅನುಭವಿಸುವಂತಾಗಿದೆ. ಇರುವ ರಸ್ತೆಗಳು ಕೂಡ ತಗ್ಗು ಗುಂಡಿಗಳಿಂದ ಆವೃತವಾಗಿವೆ ಎಂದು ದೂರಿದರು.

ನಗರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೌಕರ್ಯ ಒದಗಿಸಲು ಮನವಿ ಸಲ್ಲಿಸಿದರೂ, ಯಾವುದೇ ಕ್ರಮ ಜರುಗಿಸಿಲ್ಲ. ಯುಜಿಡಿ ಕಾಮಗಾರಿ ಕಾರಣದಿಂದ ಅನೇಕ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ. ವಿದ್ಯುತ್‌ ಸೌಲಭ್ಯಕ್ಕೂ ಸಮಸ್ಯೆ ಎದುರಿಸುವಂತಾಗಿದೆ. ಮೂರು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರು ಕೂಡ ಕಲುಷಿತವಾಗಿವೆ ಎಂದು ಆರೋಪಿಸಿದರು.

ಪದಾಧಿಕಾರಿಗಳಾದ ವಿಶ್ವನಾಥಪಟ್ಟಿ, ಮಹೇಶಕುಮಾರ, ಭೀಮಣ್ಣ, ವೆಂಕಟೇಶ ದಿನ್ನ, ಬಂದೇನವಾಜ, ಲೋಕೇಶ, ಕೃಷ್ಣಮೂರ್ತಿ, ಗಿರೀಶ್, ನಾಗರಾಜ, ರವಿ, ಧರ್ಮರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT