ಗುರುವಾರ , ಆಗಸ್ಟ್ 18, 2022
24 °C
ಕೊರೊನಾ ಸೋಂಕಿನಿಂದ ಉದ್ಯೋಗ ವಂಚಿತರಾದ ಗ್ರಾಮೀಣರು

ರಾಯಚೂರು: ‘ಖಾತ್ರಿ’ ಸಾಧನೆಯಲ್ಲಿ ಹಿಂದುಳಿದ ಜಿಲ್ಲೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕಳೆದ ವರ್ಷ ಕೋವಿಡ್‌ ಮಹಾಮಾರಿಯ ಸಂಕಷ್ಟ ದಿನಗಳಲ್ಲೂ ಕೂಲಿಕಾರರ ಪಾಲಿಗೆ ಉದ್ಯೋಗದ ವರದಾನವಾಗಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯು ಈ ವರ್ಷ ಮಾತ್ರ ಕೈಹಿಡಿಯಲಿಲ್ಲ!

ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ರೋಗ ವ್ಯಾಪಿಸಿಕೊಂಡಿದ್ದರಿಂದ ಮಾನವ ದಿನಗಳ ಉದ್ಯೋಗ ಸೃಜನೆಯು ಗಣನೀಯ ಕಡಿಮೆಯಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳು ಸಮರ್ಪಕವಾಗಿ ಉದ್ಯೋಗ ದೊರೆಯದೆ ಕೂಲಿಕಾರ್ಮಿಕರು ಸಂಕಷ್ಟ ಅನುಭವಿಸುವಂತಾಯಿತು.

ಇನ್ನು ಮುಂದೆ ಬೇಡಿಕೆಯನ್ನಾಧರಿಸಿ ಉದ್ಯೋಗ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಈಚೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋವಿಡ್‌ ಮಾರ್ಗಸೂಚಿ ಕಡ್ಡಾಯ ಪಾಲನೆ ಮಾಡಿಕೊಂಡು ಮಾನವ ದಿನಗಳ ಸೃಜನೆಯನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಮಾರ್ಚ್‌ 31ಕ್ಕೆ ಅಂತ್ಯವಾದ 2020–21ನೇ ಹಣಕಾಸು ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಟ್ಟು 1.21 ಕೋಟಿ ಮಾನವ ದಿನಗಳನ್ನು ಸೃಜಿಸಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿತ್ತು. 2021–22 ಸಾಲಿನಲ್ಲಿ ಆರಂಭದಲ್ಲಿಯೇ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆಯು ಮೂರನೇ ಸ್ಥಾನಕ್ಕೆ ಕುಸಿದಿದೆ. ಅತಿಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದ ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳು ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನಗಳಲ್ಲಿವೆ.

ಜಿಲ್ಲೆಯಲ್ಲಿ ಏಪ್ರಿಲ್‌ ಮತ್ತು ಮೇ ಎರಡು ತಿಂಗಳಲ್ಲಿ 56 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಇದ್ದರೂ 24.36 ಲಕ್ಷ ಮಾನವ ದಿನಗಳ ಸೃಜನೆಯಾಗಿದೆ. ಅರ್ಧಕ್ಕಿಂತಲೂ ಕಡಿಮೆ ಶೇ 43.9 ರಷ್ಟು ಸಾಧನೆಯಾಗಿದೆ. ವಾರ್ಷಿಕ ಗುರಿ 1.10 ಕೋಟಿ ಮಾನವ ದಿನಗಳ ಸೃಜನೆ ಮಾಡಬೇಕಿದ್ದು, ಅದರಲ್ಲಿ ಶೇ 22 ರಷ್ಟು ಮಾತ್ರ ಸಾಧನೆ ಮಾಡಲಾಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಅತಿಕಡಿಮೆ ಶೇ 17 ರಷ್ಟು ಉದ್ಯೋಗ ಸೃಜನೆ ಆಗಿದ್ದರೆ, ಸಿರವಾರ ತಾಲ್ಲೂಕಿನಲ್ಲಿ ಶೇ 29 ರಷ್ಟು ಉದ್ಯೋಗ ಸೃಜಿಸುವ ಮೂಲಕ ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳಿಗಿಂತ ಮುನ್ನಡೆ ಕಾಯ್ದುಕೊಂಡಿದೆ.

ಕೋವಿಡ್‌ ಎರಡನೇ ಅಲೆ ವ್ಯಾಪಿಸಿ ಪಾಜಿಟಿವ್‌ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ಮಹಾನಗರಗಳಿಗೆ ಮತ್ತು ರಾಜ್ಯದ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿದ್ದ ಕಾರ್ಮಿಕರೆಲ್ಲರೂ ಗ್ರಾಮಗಳಿಗೆ ವಾಪಸಾಗಿದ್ದಾರೆ. ಸ್ಥಳೀಯವಾಗಿ ದುಡಿಯಲು ಉದ್ಯೋಗ ಖಾತರಿ ಯೋಜನೆಯು ಅವರಿಗೆಲ್ಲ ಕಳೆದವರ್ಷ ನೆರವಾಗಿತ್ತು. ಈಗ ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿದರೂ ಉದ್ಯೋಗ ಕೊಡುತ್ತಿಲ್ಲ ಎನ್ನುವ ದೂರುಗಳು ಜಿಲ್ಲೆಯಲ್ಲಿ ವ್ಯಾಪಕವಾಗಿವೆ.

ಗ್ರಾಮಗಳಲ್ಲಿಯೇ ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದರಿಂದ ಉದ್ಯೋಗ ವಹಿಸುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಂದೇಟು ಹಾಕುತ್ತಾ ಬಂದಿದ್ದಾರೆ. ರಾಜ್ಯ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಆಲೋಚಿಸಿ, ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಪ್ರತಿಗ್ರಾಮ ಪಂಚಾಯಿತಿಗೆ ₹50 ಸಾವಿರ ಅನುದಾನ ಬಿಡುಗಡೆ ಮಾಡಿದೆ. ಉದ್ಯೋಗ ಖಾತರಿಯಡಿ ಕೆಲಸ ಮಾಡುವವರು ಕಡ್ಡಾಯವಾಗಿ ಕೋವಿಡ್‌ ಪಾಲನೆ ಮಾಡಬೇಕು. ಕಾರ್ಮಿಕರಿಗೆ ಕೈ ಗವುಸು, ಮಾಸ್ಕ್‌ ಮತ್ತು ಸ್ಯಾನಿಟೈಜರ್‌ ಕೊಟ್ಟು ಕೆಲಸ ಮಾಡಿಸಬೇಕು ಎಂದು ಸರ್ಕಾರ ಸೂಚಿಸಿದೆ. ಜೂನ್‌ ಎರಡನೇ ವಾರದಿಂದ ಮಾನವ ದಿನಗಳ ಸೃಜನೆಯು ಮತ್ತೆ ಆರಂಭವಾಗಿದೆ.

ದೇವದುರ್ಗ, ಲಿಂಗಸುಗೂರು, ಮಸ್ಕಿ ಹಾಗೂ ರಾಯಚೂರು ತಾಲ್ಲೂಕುಗಳಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಬೇಕಿದೆ. ಜಿಲ್ಲೆಯಾದ್ಯಂತ ಇದುವರೆಗೂ ಒಟ್ಟು ₹60 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಸಾಮಗ್ರಿಗಳ ಖರೀದಿಗಾಗಿ ಬರೀ ₹19 ಲಕ್ಷ ವ್ಯಯಿಸಲಾಗಿದೆ.

ದೊಡ್ಡ ಗುರಿ: ಪ್ರಸಕ್ತ ವರ್ಷ ಉದ್ಯೋಗ ಖಾತರಿ ಯೋಜನೆಯಡಿ ನೂರಾರು ಕಾಮಗಾರಿಗಳ ಗುರಿ ಇಟ್ಟುಕೊಳ್ಳಲಾಗಿದೆ. 14 ಸಾವಿರ ಬದುನಿರ್ಮಾಣ, 4,809 ಕೃಷಿ ಹೊಂಡ, 251 ಶಾಲೆಗಳಿಗೆ ಆವರಣ ಗೋಡೆಗಳು, 314 ಶೌಚಾಲಯಗಳ ನಿರ್ಮಾಣ, 245 ಶಾಲಾ ಆಟ ಮೈದಾನಗಳು, 101 ಕಡೆಗಳಲ್ಲಿ ಮಳೆನೀರು ಕೊಯ್ಲು, 73 ಶಾಲಾ ಅಡುಗೆ ಕೋಣೆಗಳು, 39 ಕಡೆಗಳಲ್ಲಿ ಗೋದಾಮು, 118 ಅಂಗನವಾಡಿ ಕಟ್ಟಡಗಳು ಹಾಗೂ 161 ಕಡೆಗಳಲ್ಲಿ ಶಾಲಾ ಊಟದ ಕೋಣೆ ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆರಂಭದ ಎರಡು ತಿಂಗಳು ಯಾವುದೇ ಸಾಧನೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಉದ್ಯೋಗ ಸೃಜನೆ ವೇಗಗೊಳಿಸುವ ಸವಾಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಮುಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು