ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ಐದು ಮನೆಗಳಲ್ಲಿ 14 ತೊಲಾ ಬಂಗಾರ, ₹2.50 ಲಕ್ಷ ನಗದು ಕಳವು

Published 3 ಜೂನ್ 2024, 15:25 IST
Last Updated 3 ಜೂನ್ 2024, 15:25 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ವಿರುಪಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಐದು ಮನೆಗಳ ಬೀಗ ಮುರಿದು ಒಟ್ಟು 14 ತೊಲಾ ಬಂಗಾರ ಹಾಗೂ ₹2.50 ಲಕ್ಷ ನಗದು ಕಳವು ಮಾಡಲಾಗಿದೆ.

ಭಾನುವಾರ ರಾತ್ರಿ ವಿರುಪಾಪುರ ಗ್ರಾಮದಲ್ಲಿ ಗಾಳಿ-ಮಳೆ ಸುರಿಯುತ್ತಿದ್ದ ಸಮಯದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಐದು ಮನೆಗಳ ಬೀಗ ಮುರಿದು ಒಳಗೆ ನುಗ್ಗಿ ತಿಜೋರಿ ಬೀಗ ಮುರಿದು ಅದರಲ್ಲಿದ್ದ ಬಂಗಾರ, ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಗ್ರಾಮದ ಹನುಮಂತ ಸಣ್ಣಪ್ಪ ಮನೆಯಲ್ಲಿ 4 ತೊಲಾ ಚಿನ್ನ, ಮಲ್ಲಣ್ಣ ತಿಪ್ಪಣ್ಣ ಮನೆಯಲ್ಲಿ 4 ತೊಲಾ ಚಿನ್ನ, ಮೌನೇಶ ಈರಪ್ಪ ಮನೆಯಲ್ಲಿ ₹1 ಲಕ್ಷ ನಗದು, ಶಂಕರಗೌಡ ಪಂಪಣ್ಣ ಮನೆಯಲ್ಲಿ 6 ತೊಲಾ ಚಿನ್ನ ಹಾಗೂ ₹1.50 ಲಕ್ಷ ನಗದು ಕಳ್ಳತನವಾಗಿದೆ.

ಶಂಕರಗೌಡ ಬಸಣ್ಣರ ಮನೆಯ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಬಸನಗೌಡ ಹಳೆಹೊಲದ ಅವರ ಹೋಂಡಾ ಶೈನ್ ಬೈಕ್‍ನ ವೈರ್ ಕಿತ್ತಿ ತೆಗೆದುಕೊಂಡು ಹೋಗಿ ಗ್ರಾಮದ ಹೊರವಲಯದಲ್ಲಿ ಬಿಟ್ಟು ಹೋಗಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ಕಾರ್ಯ ಮುಂದುವರಿದಿದೆ.

ತಪಾಸಣೆ: ಭಾನುವಾರ ರಾತ್ರಿ ವಿರುಪಾಪುರ ಗ್ರಾಮದ ಐದು ಮನೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆರಳಚ್ಚುಗಾರರು ಹಾಗೂ ಶ್ವಾನದಳದ ತಂಡ ಸ್ಥಳಕ್ಕೆ ಭೇಟಿ ನೀಡಿ ಐದು ಮನೆಗಳಲ್ಲಿ ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪರಿಶೀಲನೆ ನಡೆಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಸುನೀಲ್ ವಿ.ಮೂಲಿಮನಿ, ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಹ್ಮದ್ ಇಸಾಕ್, ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್ ಎಂ.ಹನುಮಂತಪ್ಪ ಹಾಜರಿದ್ದರು.

ಜನಜಾಗೃತಿ: ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಅವರು ಜನಜಾಗೃತಿ ಸಭೆ ನಡೆಸಿ ‘ವ್ಯಾಪಾರ ಹಾಗೂ ಇತರೆ ನೆಪದಲ್ಲಿ ಗ್ರಾಮಕ್ಕೆ ಯಾರಾದರೂ ಹೊಸಬರು ಬಂದರೆ ಅವರ ಹೆಸರು, ಊರು, ಮೊಬೈಲ್ ಸಂಖ್ಯೆ ಪಡೆದುಕೊಳ್ಳಬೇಕು. ಸಂಶಯಾಸ್ಪದವಾಗಿ ಸುತ್ತಾಡಿದ್ದು ಕಂಡುಬಂದರೆ ಹಾಗೂ ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಪರಾಧ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ. ವಿರುಪಾಪುರ ಗ್ರಾಮದ ಐದು ಮನೆಗಳಲ್ಲಿ ನಡೆದ ಕಳ್ಳತನದ ಕುರಿತು ತನಿಖೆ ನಡೆಸಿ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗುವುದು. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಜಾಗೃತರಾಗಿ ಇರಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT