ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ಕುಟುಂಬಕ್ಕೆ ದೃಷ್ಟಿಹೀನತೆ ಅನಾರೋಗ್ಯ

ಚಿಕಿತ್ಸೆ ಪಡೆಯುವುದಕ್ಕೆ ಪರದಾಡುತ್ತಿರುವ ತಾಯಿ, ಮಕ್ಕಳು
Last Updated 13 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹೆಡಗಿನಾಳ ಗ್ರಾಮದ ಬಸಮ್ಮ, ಮೂರನೇ ಹೆರಿಗೆ ಆಗುವ ಹೊತ್ತಿಗೆ ಇದ್ದಕ್ಕಿದ್ದಂತೆ ದೃಷ್ಟಿಹೀನರಾದರು. ಹಿರಿಯ ‍ಪುತ್ರಿ ಜ್ಯೋತಿ 18 ವರ್ಷಕ್ಕೆ ಕಾಲಿಡುತ್ತಿದ್ದಂತೆ ಕಣ್ಣು ಕಾಣದಾಗಿವೆ. ಇನ್ನೊಬ್ಬ ಪುತ್ರನಿಗೂ ಅಂಧತ್ವ ಆವರಿಸಿಕೊಳ್ಳುತ್ತಿದ್ದು, ಶೇ 60 ರಷ್ಟು ಮಾತ್ರ ನೋಡುವ ಶಕ್ತಿ ಉಳಿದುಕೊಂಡಿದೆ. ಕುಟುಂಬದ ಯಜಮಾನ ಸುರೇಶನಿಗೆ ಎಡಗೈ ಸ್ವಾಧೀನ ಕಳೆದುಕೊಂಡಿದೆ.

ಕಣ್ಣಿನ ಅನಾರೋಗ್ಯವು ಇಡೀ ಕುಟುಂಬವನ್ನು ನುಂಗಿ ಹಾಕುತ್ತಿದ್ದು, ಸೂಕ್ತ ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಬಂದೊಗಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಸಹಾಯವಾಣಿ, ಬೆಳಗಾವಿ ವಿಮುಕ್ತಿ ಪೋತ್ನಾಳ್ ಸ್ಪಂದನ ಹಾಗೂ ಕೈಲಾಶ್ ಸತ್ಯಾರ್ಥಿ ಮಕ್ಕಳ ಫೌಂಡೇಷನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಈ ಬಡ ಕುಟುಂಬವು ಪಾಲ್ಗೊಂಡು ಅಳಲು ತೋಡಿಕೊಂಡಿತು.

‘ಆಸ್ಪತ್ರೆಗೆ ತೋರಿಸಲು ದುಡ್ಡಿಲ್ಲದ ಪರಿಸ್ಥಿತಿ ಇದೆ. ಮಾಸಾಶನದಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಅಂತ್ಯೋದಯ ಕಾರ್ಡ್ ಮಾಡಿಸಿಕೊಡಿ. ಒಂದು ಸೂರು ಒದಗಿಸಿ ಕೊಡಬೇಕು. ಮಕ್ಕಳಿಗೆ ಕಣ್ಣಿನ ದೃಷ್ಟಿ ಕಾಣುವುದಕ್ಕೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿಬೇಕು’ ಎಂದು ಕೈಮುಗಿದು ಬೇಡಿಕೊಂಡರು.

ಶಾಲೆಗೆ ಹೋಗುತ್ತಿದ್ದ ಜ್ಯೋತಿ, ಕಣ್ಣು ಕಳೆದುಕೊಂಡ ಬಳಿಕ ಬದುಕಿಗೆ ಕತ್ತಲಾವರಿಸಿದೆ. ಅಕ್ಕ, ಅಮ್ಮನ ಕೈಹಿಡಿದು ನಡೆಸುತ್ತಿರುವ ಕೊನೆಯ ಮಗನಿಗೂ ದೃಷ್ಟಿಹೀನತೆ ಬರಬಹುದು. ಅದಕ್ಕಾಗಿ ಈಗಲೇ ಚಿಕಿತ್ಸೆ ಕೊಡಸಬೇಕು ಎಂದು ಬಸಮ್ಮ ಹಾಗೂ ಸುರೇಶ ಅವರು ಅಧಿಕಾರಿಗಳಿಗೆ ಅಂಗಲಾಚುತ್ತಿರುವುದು ಮನಕಲಕುವಂತಿತ್ತು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ಜಯಶ್ರೀ ಅವರು ಮಾತನಾಡಿ, ‘ಇದು ಅನುಂವಶಿಯತೆ ಕಾಯಿಲೆ. ಮಕ್ಕಳ ಕುರುಡುತನಕ್ಕೆ ಕಾರಣ ತಿಳಿಯಲು ರಿಮ್ಸ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುವುದು. ಪಾಲಕರ ಅನುಮತಿ ಮೇರೆಗೆ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಈ ಬಗ್ಗೆ ಶೀಘ್ರವೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಬಸ್‌ ಸೌಕರ್ಯ:ಸಿರವಾರ ತಾಲ್ಲೂಕಿನ ನವಲಕಲ್ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮರಾಠ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ. ಪ್ರತಿನಿತ್ಯ ವಿದ್ಯಾರ್ಥಿಗಳು 6 ಕಿಲೋ ಮೀಟ್ ದೂರದ ಸಿರವಾರಕ್ಕೆ ಹೋಗಬೇಕಿದೆ. ಆಟೋಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಶಾಲೆಗೆ ತೆರಳಲು ದಿನವು ಕಾಲ್ನಡಿಗೆಯಲ್ಲಿ ತೊಂದರೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿನಿ ಪಲ್ಲವಿ ಅವರು ಸಮಸ್ಯೆ ಹೇಳಿಕೊಂಡರು.

ಅಮ್ಮಿನಗಡದ ಸಮಾಜಿಕ ಕಾರ್ಯಕರ್ತೆ ಅಂಬಿಕಾ ಮಾತನಾಡಿ,ಕಿವುಡು ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿ, ಕಿಟ್ ವಿತರಿಸಬೇಕು. ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಬಾಲಕಿಯರಿಗೆ ರಕ್ಷಣೆ ನೀಡುವ ಅಗತ್ಯವಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಬೈಲೂರು ಶಂಕರ ರಾಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಎಂ.ಸಿ.ನಾಡಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಂಗಳಾ ಹೆಗಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ವಿ.ಸುಶೀಲಾ, ಮಂಜುನಾಥರೆಡ್ಡಿ, ಅಂಬಣ್ಣ ಅರೋಲಿಕರ, ಸೈಯದ್ ಹಫೀಜುಲ್ಲಾ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಮಾಜ ಸೇವಾ ಸಂಸ್ಥೆಗಳು. ಮಕ್ಕಳು ಮತ್ತು ಅವರ ಪಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT