ಶುಕ್ರವಾರ, ಆಗಸ್ಟ್ 12, 2022
22 °C
ರೋಜ್‌ಗಾರ್ ಮಿತ್ರರಿಗೆ ಜಿಪಂ ಸಿಇಒ ಸೂಚನೆ

ಮಾನವ ದಿನಗಳ ಸೃಜನೆಗೆ ಒತ್ತುನೀಡಿ: ಶೇಖ್ ತನ್ವೀರ್ ಆಶೀಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ತಾಂಡಾಗಳಲ್ಲಿ ಮಾನವ ದಿನಗಳನ್ನು ಹೆಚ್ಚಾಗಿ ಸೃಷ್ಟಿಸಿ, ಅಲ್ಲಿನವರಿಗೆ ಉದ್ಯೋಗ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಶೀಫ್ ಅವರು ರೋಜ್‌ಗಾರ್‌ ಮಿತ್ರರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತಾಂಡಾ ರೋಜಗಾರ್ ಮಿತ್ರರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ತಾಂಡಾಗಳಲ್ಲಿ ನರೇಗಾದಡಿ ಹೆಚ್ಚುಹೆಚ್ಚು ಮಾನವ ದಿನಗಳನ್ನು ಸೃಜಿಸಿ ಅವರಿಗೆ ಉದ್ಯೋಗ ಒದಗಿಸಬೇಕು, ಜಾಬ್‌ಕಾರ್ಡ್ ಇಲ್ಲದವರಿಗೆ ಅದನ್ನು ಒದಗಿಸಿ, ಕೂಲಿಕೆಲಸ ನೀಡುವಲ್ಲಿ ರೋಜಗಾರ್ ಮಿತ್ರರು ಹೆಚ್ಚಿನ ಶ್ರಮವಹಿಸಬೇಕು. ತಾಂಡಾ ನಿವಾಸಿಗಳಲ್ಲಿ ಉದ್ಯೋಗ ನೀಡಿ ಅವರ ಏಳಿಗೆಗೆ ಕಾರಣವಾಗಬೇಕಿರುವುದು ರೋಜಗಾರ್ ಮಿತ್ರರರ ಆದ್ಯ ಕರ್ತವ್ಯವಾಗಿದೆ ಎಂದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೃಷಿ ಹೊಂಡಗಳು, ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಉತ್ತೇಜನ, ಜಾನುವಾರು ಶೆಡ್, ರೈತರ ಜಮೀನಿನಲ್ಲಿ ಬದು, ಬಚ್ಚಲು ಗುಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಅದರಂತೆ ನರೇಗಾದಡಿ ತಾಂಡಾ ವಾಸಿಗಳ ಪ್ರತಿ ಮನೆಗೂ ಬಚ್ಚಲು ಗುಂಡಿ ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಿ, ತಾಂಡಾಗಳನ್ನು ಕೊಳಚೆ ಮುಕ್ತವನ್ನಾಗಿಸಬೇಕು ಎಂದು ಹೇಳಿದರು.

ನರೇಗಾ ಯೋಜನೆಯಡಿ ನೀಡಲಾಗುವ ಸವಲತ್ತುಗಳ ಬಗ್ಗೆ ರೋಜಗಾರ್ ಮಿತ್ರರು ತಾಂಡಾ ವಾಸಿಗಳಿಗೆ ತಿಳಿಸಿಕೊಡುವ ಮೂಲಕ ಅವರು ಉದ್ಯೋಗ ಅರಸಿ ವಿವಿಧೆಡೆ ಗುಳೆ ಹೋಗುವುದನ್ನು ತಡೆಗಟ್ಟಬೇಕು, ಕೂಲಿ ಕೆಲಸ ಅಗತ್ಯ ಇರುವವರಿಗೆ ಜಾಬ್‌ಕಾರ್ಡ್‌ಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕು, ಹಲವು ರೀತಿಯ ಸಮಸ್ಯೆಗಳಲ್ಲಿ ಗುಳೆ ಹೋದ ಕಾರ್ಮಿಕರು ಸಿಲುಕುತ್ತಾರೆ, ಈ ನಿಟ್ಟಿನಲ್ಲಿ ಕೆಲಸದ ಬೇಡಿಕೆ ಇದ್ದವರು ಫಾರಂ 6 ಭರ್ತಿ ಮಾಡಿ ಸಲ್ಲಿಸಿದ 15 ದಿನದೊಳಗಾಗಿ ಅವರಿಗೆ ಕೂಲಿ ಒದಗಿಸುವುದು ರೋಜಗಾರ್ ಮಿತ್ರರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಅಗತ್ಯ ಇರುವವರಿಗೆ ಕೂಲಿ ಒದಗಿಸುವ ಕೆಲಸದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರಿಗೆ, ರೋಜಗಾರ್ ಮಿತ್ರರು ನೆರವಾಗಬೇಕು, ರೋಜಗಾರರು ಮಿತ್ರರು ತರಬೇತಿಯ ಸದುಪಯೋಗ ಪಡೆದುಕೊಂಡು ತಾಂಡಾಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಡೋಳಪ್ಪ ಮಾತನಾಡಿ, ತಾಂಡಾ ರೋಜಗಾರ್ ಮಿತ್ರರಿಗೆ ಪ್ರತಿ ತಿಂಗಳು ನರೇಗಾ ಯೋಜನೆಯಡಿ ₹3 ಸಾವಿರ ಹಾಗೂ ತಾಂಡಾ ಅಭಿವೃದ್ಧಿ ನಿಗಮದಿಂದ ₹3 ಸಾವಿರ ಸೇರಿ ಒಟ್ಟು ₹6 ಸಾವಿರ ಮಾಸಿಕ ಗೌರವಧನ ನೀಡಲಾಗುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ಇದ್ದರು. ಜಿಲ್ಲೆಯ ರೋಜ್‌ಗಾರ್ ಮಿತ್ರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.