ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ‘ಜಿಲ್ಲಾ ಪಂಚಾಯಿತಿ ವಿಸರ್ಜಿಸಿ’

Last Updated 13 ಆಗಸ್ಟ್ 2020, 16:03 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಪಂಚಾಯಿತಿಯಲ್ಲಿ ನಿಗದಿತ ಅವಧಿಯಲ್ಲಿ ಸಾಮಾನ್ಯ‌ ಸಭೆಗಳನ್ನು ನಡೆಸಲು ವಿಫಲವಾಗಿದ್ದು, ಅಭಿವೃದ್ಧಿಗೆ ತೊಡಕಾಗಿದೆ. ಸುಧಾರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ. ಕೂಡಲೇ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಕಾಯ್ದೆಯ ನಿಯಮನುಸಾರ 2 ತಿಂಗಳಿಗೆ 1 ಸಾಮಾನ್ಯಸಭೆ ನಡೆಸಬೇಕು. ಅಧ್ಯಕ್ಷರು ಸಭೆ ಕರೆಯದಿದ್ದಲ್ಲಿ ಉಪಾಧ್ಯಕ್ಷರು ಅಥವಾ ಒಟ್ಟು ಸದಸ್ಯರ 3/1 ರಷ್ಟು ಸದಸ್ಯರು ಸಾಮಾನ್ಯ ಸಭೆ ನಡೆಸಬಹುದು. ಕಾಯ್ದೆಯಂತೆ ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಲು ಅಧ್ಯಕ್ಷರು, ಉಪಾಧ್ಯಕ್ಷರು ವಿಫಲರಾಗಿದ್ದಾರೆ. ಪಂಚಾಯಿ ಅಭಿವೃದ್ದಿಯಲ್ಲಿ ಇನ್ನೂ ಸುಧಾರಣೆಯಾಗಿಲ್ಲ. ಸದಸ್ಯರೂ ಕೂಡ ತಮ್ಮ ಜವಾಬ್ದಾರಿ ಮರೆತು ದಿನದೂಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಪಂಚಾಯಿತಿಯ 5 ಸ್ಥಾಯಿ ಸಮಿತಿಗಳ ಸಭೆಯೂ ನಿಗದಿತವಾಗಿ ನಡೆದಿಲ್ಲ. ಸಾಮಾನ್ಯ ಸಭೆಗೂ ಮುನ್ನವೇ ಸ್ಥಾಯಿ ಸಮಿತಿ ಸಭೆ ನಡೆಯಬೇಕು ಎಂಬ ನಿಯಮವಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಮರ್ಪಕ ಕೆಲಸ ನಿರ್ವಹಿಸದ ಕಾರಣ ಸಂಘಟನೆಯಿಂದ ದೂರು ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ನಳಿನ್ ಅತುಲ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಮೂರು ವರ್ಷದ ಅವಧಿಯಲ್ಲಿ ಕೇವಲ 7 ಸಾಮಾನ್ಯಸಭೆ ನಡೆಸಲಾಗಿದ್ದು, ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಸೂಚನೆ ನೀಡಿ ನೋಟಿಸ್ ನೀಡಲಾಗಿತ್ತು ಎಂದರು.

ಜಿಲ್ಲಾ ಪಂಚಾಯಿತಿ ವಿಸರ್ಜನೆಗೆ ಪಂಚಾಯತ್ ರಾಜ್ ಇಲಾಖೆಗೆ ದೂರು ನೀಡಿದ ಬಳಿಕ ನಂತರದ ಬೆಳವಣಿಗೆಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ಆಯುಕ್ತರು ಕಲಬುರ್ಗಿಯಲ್ಲಿಯೇ ಕಚೇರಿಯಲ್ಲಿ ಕುಳಿತು ಜಿಲ್ಲೆಯ ಮಾಹಿತಿ ಪಡೆದು ವರದಿ ತಯಾರಿಸಿ, ಜಿಲ್ಲಾ ಪಂಚಾಯಿತಿ ವಿಸರ್ಜನೆಗೆ ಮುಂದಾಗದೆ ಕೈಗೊಳ್ಳಲು ತಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಕೈ ಚೆಲ್ಲಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರು ಅನುದಾನದ ಕೊರತೆ ನೆಪದಲ್ಲಿ ಕಾಲ ಕಳೆಯುತ್ತಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕರ್ತವ್ಯ ಮರೆತು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಅವರ ಹುದ್ದೆಗೆ ಅನರ್ಹರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಕೆಡಿಪಿ ಸಭೆ ಮಾಡುವುದು ವ್ಯರ್ಥ. ಕೂಡಲೇ ವಿಸರ್ಜನೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರಗತಿಪರ ಸಂಘಟನೆಯ ಮುಖಂಡ ಅಶೋಕ‌ಕುಮಾರ ಜೈನ್, ಮಹಮದ್ ರಫೀ, ಶಿವಕುಮಾರ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT