ಸೋಮವಾರ, ಜನವರಿ 20, 2020
18 °C
ಗ್ರಾಮ ಸೇವಾ ಸಂಘ ರಾಯಚೂರು ಘಟಕದಿಂದ ಪ್ರತಿಭಟನೆ

ಪವಿತ್ರ ಆರ್ಥಿಕ ಕ್ಷೇತ್ರ ಉಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಭೂರಹಿತ ಕೃಷಿಕಾರ್ಮಿಕರು, ಕುಶಲಕರ್ಮಿಗಳು, ಕೃಷಿಕರು, ನಗರಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು ಅವಲಂಬಿಸಿರುವ ಆರ್ಥಿಕ ಕ್ಷೇತ್ರವು ಪವಿತ್ರವಾಗಿದ್ದು, ಈ ಆರ್ಥಿಕತೆ ಉಳಿಸಿ ಪ್ರೋತ್ಸಾಹಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ಗ್ರಾಮ ಸೇವಾ ಸಂಘ ರಾಯಚೂರು ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಆಮದಾಗುವ ಸ್ವಯಂ ಚಾಲಿತ ಯಂತ್ರಗಳು ಹಾಗೂ ಕಚ್ಚಾಸಂಪನ್ಮೂಲಗಳನ್ನು ಶೇ 40 ರಷ್ಟು ಹಾಗೂ ಶೇ 60 ಕ್ಕಿಂತ ಹೆಚ್ಚು ಮಾನವಶ್ರಮವನ್ನು ಈ ಆರ್ಥಿಕ ಕ್ಷೇತ್ರವು ಬಳಕೆ ಮಾಡುತ್ತಿದೆ. ದುಡಿಮೆಯನ್ನು ಧರ್ಮವಾಗಿ ನಂಬಿಕೊಂಡಿರುವ ಪವಿತ್ರ ಕ್ಷೇತ್ರಗಳಾಗಿವೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಕ್ಷಸ ಆರ್ಥಿಕ ವ್ಯವಸ್ಥೆಯಲ್ಲಿ ಗುಣ ಮತ್ತು ಗಾತ್ರ ದೊಡ್ಡದಾಗಿದೆ. ಇದರಲ್ಲಿ ಪಾಳೇಗಾರಿಕೆ ವ್ಯವಸ್ಥೆ ಇದೆ. ದುಡಿಮೆ ಮತ್ತು ಧರ್ಮವನ್ನು ಒಡೆದು ಆಳುತ್ತಿದ್ದು, ದುಡಿಮೆಯನ್ನು ಕೀಳಾಗಿ ಕಾಣುವ ಪ್ರವೃತ್ತಿ ಇದರಲ್ಲಿದೆ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ಮಾನವ ಸ್ಪಂದನೆಯಿಲ್ಲದ ರಾಕ್ಷಸ ಆರ್ಥಿಕ ವ್ಯವಸ್ಥೆ ಸೋಲುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರ ಸೋಲಿನಿಂದ ಮನುಷ್ಯಕುಲ ನಾಶವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಕೆಡಕಿನ ಸೋಲು ಒಳ್ಳೆಯದಕ್ಕೆ ದಾರಿಯಾಗಬೇಕಾಗಿದೆ ಎಂದರು.

‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ವು ಡಿಸೆಂಬರ್‌ 6 ರಿಂದ ಯಶಸ್ವಿಯಾಗಿ ಮುಂದುವರಿದಿದೆ. ಸತ್ಯಾಗ್ರಹದ ಫಲವಾಗಿ ಕೇಂದ್ರ ಸರ್ಕಾರವು ಒಂದು ಸುತ್ತಿನ ಮಾತುಕತೆ ನಡೆಸಿದೆ. ಸಮಗ್ರ ಅಭಿವೃದ್ಧಿ ಮಾಡುವಂತೆ ಕೋರಲಾಗಿದೆ. ಪವಿತ್ರ ಆರ್ಥಿಕ ಕ್ಷೇತ್ರಗಳು ಬೇರೆ ಬೇರೆ ಸಚಿವಾಲಯಗಳಲ್ಲಿ ಚದುರಿಹೋಗಿವೆ. ಎಂಎಸ್‌ಎಂಇ ಸಚಿವರಿಗೆ ನೀಡಿದ್ದ ಬೇಡಿಕೆಗಳನ್ನು ಆಧರಿಸಿ ನೀತಿ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯನ್ನು ಹಾಳು ಮಾಡಬಾರದು. ಈ ನಿಟ್ಟಿನಲ್ಲಿ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸ್ವಯಂಸೇವಾ ಸಂಘಗಳೊಂದಿಗೆ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗುತ್ತಿದೆ. ಈ ಕ್ರಮವನ್ನು ವಿಸ್ತರಿಸಿ ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು.

ಹೋರಾಟಗಾರರಾದ ವಿದ್ಯಾ ಪಾಟೀಲ, ಕೆ.ಜಿ.ವೀರೇಶ, ಬಸವರಾಜ, ಶಿವರಾಮ ರೆಡ್ಡಿ, ನರಸಿಂಹಲು, ಗುರುರಾಜ, ಶೋಭಾ ಆರ್‌. ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು