ಬುಧವಾರ, ನವೆಂಬರ್ 13, 2019
24 °C
ಬೆಳಗಾವಿಯ ರೈತ ಮಹಿಳೆ ಜಯಶ್ರೀ ಭಾಗಿ, ವಾಸುದೇವ ಮೇಟಿ ನೇತೃತ್ವ

ಬೆಳಗಾವಿ | ಸಾಲಮನ್ನಾಗೆ ಒತ್ತಾಯಿಸಿ ರೈತರ ಪ್ರತಿಭಟನೆ

Published:
Updated:
Prajavani

ರಾಯಚೂರು: ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ವೈಟಿಪಿಎಸ್‌ಗಾಗಿ ಭೂಮಿ ಕಳೆದುಕೊಂಡ ರೈತ ಕುಟುಂಬದವರಿಗೆ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಎರಡು ತಾಸಿಗೂ ಅಧಿಕಕಾಲ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತರು, ದತ್ತು ಪಡೆದ ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ, ವಿದ್ಯುತ್‌ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು. ಕೃಷ್ಣಾ ನದಿಯ ಪ್ರವಾಹದಿಂದ ಹಾನಿಯಾದ ಭತ್ತ ಮತ್ತು ಇತರೆ ಬೆಳೆಗಳಿಗೆ ಎಕರೆಗೆ ₹ 50 ಸಾವಿರ ಹಾಗೂ ತೋಟಗಾರಿಕೆ ಬೆಳೆಗಳಿಗೆ ₹ 2 ಲಕ್ಷ, ಹಸು, ಎಮ್ಮೆ, ಎತ್ತು ಹಾನಿಯಾದವರಿಗೆ ₹80 ಸಾವಿರ, ಆಡು, ಕುರಿ ಹಾನಿಗೆ ₹ 25 ಸಾವಿರ ಹಾಗೂ ಸಂಪೂರ್ಣ ಮನೆ ಹಾನಿದವರಿಗೆ ₹ 15 ಲಕ್ಷ ಮತ್ತು ಶೇ 50 ಮನೆ ಹಾನಿಯದವರಿಗೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರು ಮಾಡಿದ ಬೆಳೆಸಾಲ, ಅಭಿವೃದ್ಧಿ ಸಾಲ, ಟ್ರ್ಯಾಕ್ಟರ್ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಎಲ್‌ ಆ್ಯಂಡ್ ಟಿ, ಧರ್ಮಸ್ಥಳ ಮಂಜುನಾಥ, ಮಹೇಂದ್ರ ಫೈನಾನ್ಸ್‌, ಕೆಬಿಎಸ್‌ ಬ್ಯಾಂಕ್‌ ಸೇರಿದಂತೆ ಇತರೆ ಸಂಸ್ಥೆಗಳಿಂದ ಸಾಲ ವಸೂಲಿ ಮಾಡಲು ಹಿಂಸೆ ನೀಡತ್ತಿದ್ದು, ನಷ್ಟದಲ್ಲಿರುವ ಮಹಿಳೆಯರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದರು.

ತಾಲ್ಲೂಕಿನ ಅರಶಿಣಿಗಿ, ಗುರ್ಜಾಪುರ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು. ವಡ್ಲೂರು, ಬಾಪೂರು, ಗುಂಜಳ್ಳಿ, ಇಡಪನೂರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಬೇಕು. ತುಂಗಭದ್ರಾ ಮತ್ತು ಕೃಷ್ಣಾ ನದಿಯ ನೀರು ಕೆಳಭಾಗದ ರೈತರಿಗೆ ತಲುಪುತ್ತಿಲ್ಲ. ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ಮೇಟಿ, ಬೆಳಗಾವಿ ಘಟಕದ ಅಧ್ಯಕ್ಷೆ ಜಯಶ್ರೀ, ಚನ್ನಪ್ಪ, ಶಿವಪ್ಪ, ಗಂಗಾಧರ ಮೇಟಿ, ಜಿಂದಪ್ಪ, ಬಾನುಬಿ, ರಾಮಣ್ಣ, ಆಂಜನೇಯ, ಶಂಕರ, ಶಬಾನಾ, ನರಸಪ್ಪ, ನರಸಿಂಹ ನಾಯಕ, ಅಬ್ದುಲ್, ಸುಲೋಚನಾ, ಸುಮಂಗಲಾ ಇದ್ದರು.

ಪ್ರತಿಕ್ರಿಯಿಸಿ (+)