ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವಾಹನ ಖರೀದಿಗೆ ಮನಸ್ಸಿದ್ದರೂ ಹಣವಿಲ್ಲ!

ಶೇ 65 ರಷ್ಟು ಕುಸಿತವಾದ ವಾಹನಗಳ ನೋಂದಣಿ
Last Updated 23 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ರಾಯಚೂರು: ನವರಾತ್ರಿ ದಸರಾ ಹಬ್ಬ ನಡೆಯುತ್ತಿದ್ದರೂ ಜನರಲ್ಲಿ ಮೊದಲು ಕಾಣುತ್ತಿದ್ದ ಸಂಭ್ರಮ, ಸಡಗರ ಇಲ್ಲವಾಗಿದೆ. ಹಬ್ಬದ ನಿಮಿತ್ತ ಖರೀದಿಯಾಗುತ್ತಿದ್ದನೂತನ ವಾಹನಗಳ ವಹಿವಾಟಿನಲ್ಲಿ ಈ ವರ್ಷ ಭಾರಿ ಇಳಿಕೆ ಆಗಿದೆ.

ಕೋವಿಡ್‌ ಮಹಾಮಾರಿ ಕಾರಣದಿಂದ ಹೊಸ ವಾಹನಗಳನ್ನು ಖರಿದಿಸುವ ಆರ್ಥಿಕ ಶಕ್ತಿ ಜನರಲ್ಲಿ ಕಡಿಮೆಯಾಗಿದೆ. ಬೈಕ್‌ ಶೋ ರೂಂ, ಕಾರುಗಳ ಶೋ ರೂಂ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ಕಚೇರಿಗಳಲ್ಲಿ ನೂತನ ವಾಹನಗಳ ನೋಂದಣಿಗಾಗಿ ಪ್ರತಿವರ್ಷವೂ ಪೈಪೋಟಿ ಏರ್ಪಟ್ಟಿರುತ್ತಿತ್ತು. ಈ ಸಲ ರಿಯಾಯ್ತಿ, ವಿನಾಯಿತಿಗಳನ್ನು ಘೋಷಿಸಿದ್ದರೂ ಹೊಸ ವಾಹನಗಳ ಖರೀದಿಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬರುತ್ತಿಲ್ಲ ಎಂದು ಶೋ ರೂಂ ಅಧಿಕಾರಿಗಳು ಹೇಳುತ್ತಿದ್ದಾರೆ.

‘ದಸರಾ ಹಬ್ಬದ ಸಂದರ್ಭದಲ್ಲಿ ಕಳೆದ ವರ್ಷ ಪ್ರತಿದಿನ 8 ರಿಂದ 10 ಬೈಕ್‌ ಬುಕಿಂಗ್‌ ಆಗುತ್ತಿದ್ದವು. ಈ ಸಲ ಒಂದು ವಾರದಲ್ಲಿ 2 ರಿಂದ 3 ಬೈಕ್‌ ಮಾತ್ರ ಮಾರಾಟವಾಗುತ್ತಿವೆ. ಮೊದಲು ಬಿಎಸ್‌–4 ವಾಹನಗಳಿದ್ದವು. ಈ ವರ್ಷ ಬಿಎಸ್‌–6 ವಾಹನಗಳು ಮಾರುಕಟ್ಟೆಯಲ್ಲಿದ್ದು, ₹8 ರಿಂದ ₹10 ಸಾವಿರ ದುಬಾರಿ ದರವಿದೆ. ಅತಿಯಾದ ಮಳೆ, ಕೋವಿಡ್‌ ಕಾರಣದಿಂದ ಜನರು ಬೈಕ್‌ ಶೋ ರೂಂ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ’ ಎಂದು ಹಿರೋ ಬೈಕ್‌ ಶೋ ರೂಂ ಮಾರುಕಟ್ಟೆ ಅಧಿಕಾರಿ ಸುರೇಶ ಕಮಲಾಪುರ ಹೇಳಿದರು.

ದಸರಾದಿಂದ ದೀಪಾವಳಿ ಹಬ್ಬದವರೆಗೂ ವಾಹನಗಳ ಖರೀದಿದಾರರಿಗೆ ಆಫರ್‌ ನೀಡಲಾಗಿದೆ. ಹಳೇ ವಾಹನಗಳ ವಿನಿಮಯ ಮಾಡಿಕೊಳ್ಳಲು ಅವಕಾಶವಿದ್ದು, ಕೆಲವರು ಉಚಿತ ವಾಹನ ವಿಮೆ ಮಾಡಿಕೊಡುತ್ತಿದ್ದಾರೆ. ಕಾರು ಖರೀದಿಸುವವರಿಗೆ ಹಬ್ಬದ ನಿಮಿತ್ತ ಡಿಸ್ಕೌಂಟ್‌ ನೀಡುತ್ತಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ಕಚೇರಿಯ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಸೆಪ್ಟೆಂಬರ್‌ನಲ್ಲಿ 1,733, ಅಕ್ಟೋಬರ್‌ನಲ್ಲಿ 1,694 ಹಾಗೂ ನವೆಂಬರ್‌ನಲ್ಲಿ 2,605 ಹೊಸ ಬೈಕ್‌ ನೋಂದಣಿ ಆಗಿದ್ದವು. ಈ ವರ್ಷ ಶೇ 65 ರಷ್ಟು ನೋಂದಣಿ ಪ್ರಮಾಣ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರಿಂದ ವಾಹನಗಳ ಖರೀದಿಯಲ್ಲಿ ಭರಾಟೆ ಕಾಣುತ್ತಿಲ್ಲ.

‘ಈ ವರ್ಷ ಹೊಸ ಬೈಕ್‌ ಖರೀದಿಸುವ ಯೋಜನೆ ಮಾಡಿಕೊಂಡಿದ್ದೆ. ಆದರೆ, ದರ ₹15 ಸಾವಿರದಷ್ಟು ಹೆಚ್ಚಳವಾಗಿದೆ. ₹80 ಸಾವಿರ ಕೊಟ್ಟು ಬೈಕ್‌ ಖರೀಸುವ ಯೋಜನೆ ಇದ್ದರೂ ಕೈಯಲ್ಲಿ ಹಣವಿಲ್ಲದ ಕಾರಣ, ಯೋಜನೆ ಮುಂದಕ್ಕೆ ಹಾಕಿದ್ದೇನೆ. ಪರಿಸ್ಥಿತಿ ಸುಧಾರಿಸಿದ ಮೇಲೆ ಖರೀದಿಸುತ್ತೇನೆ’ ಎಂದು ರಾಯಚೂರಿನ ಟೈಲರ್‌ ಆಂಜೀನೆಯ್ಯ ಅವರು ಹೇಳುವ ಮಾತಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT