ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಪಶು ಆಸ್ಪತ್ರೆಗಳಲ್ಲಿ 51 ಹುದ್ದೆ ಖಾಲಿ

ಗುರುಗುಂಟಾ, ಮುದಗಲ್‌, ಆನ್ವರಿ ಆಸ್ಪತ್ರೆಗಳಲ್ಲಿ ಒಬ್ಬರೂ ವೈದ್ಯರಿಲ್ಲ
Published 17 ಜೂನ್ 2023, 0:01 IST
Last Updated 17 ಜೂನ್ 2023, 0:01 IST
ಅಕ್ಷರ ಗಾತ್ರ

ಬಿ.ಎ. ನಂದಿಕೋಲಮಠ

ಲಿಂಗಸುಗೂರು: ತಾಲ್ಲೂಕು ಪಶು ಆಸ್ಪತ್ರೆ ಸೇರಿ ತಾಲ್ಲೂಕಿನಾದ್ಯಂತ ಇರುವ 19 ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯಾಧಿಕಾರಿ, ವೈದ್ಯಕೀಯ ಪರೀಕ್ಷಕ ಸೇರಿ 51 ಹುದ್ದೆ ಖಾಲಿ ಇದ್ದು, ತಾಲ್ಲೂಕಿನ ಜಾನುವಾರುಗಳಿಗೆ ಸೂಕ್ತ ಸೇವೆ ದೊರಕುತ್ತಿಲ್ಲ.

ತಾಲ್ಲೂಕಿನ 19 ಪಶು ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ 83 ಹುದ್ದೆಗಳಿಗೆ ಮಂಜೂರಾತಿ ದೊರಕಿದ್ದು, ಕೇವಲ 32 ಸಿಬ್ಬಂದಿ ಮಾತ್ರ ನಿಯೋಜನೆ ಮಾಡಲಾಗಿದೆ. 19 ವೈದ್ಯರ ಪೈಕಿ ಕೇವಲ 6 ವೈದ್ಯರು 19 ಆಸ್ಪತ್ರೆಗಳನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ಜಾನುವಾರು ಅಧಿಕಾರಿ 3 ಹುದ್ದೆ ಪೈಕಿ ಒಬ್ಬರನ್ನು ನಿಯೋಜನೆ ಮಾಡಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರ 3 ಹುದ್ದೆಗಳು ಖಾಲಿ ಇವೆ. ಪಶು ವೈದ್ಯಕೀಯ ಪರೀಕ್ಷಕರ 13 ಹುದ್ದೆಗಳ ಪೈಕಿ 8 ಸಿಬ್ಬಂದಿ ನಿಯೋಜನೆ ಮಾಡಿದೆ. ಕಿರಿಯ ಪಶು ವೈದ್ಯಕೀಯ ಪರೀಕ್ಷಕರ 5 ಹುದ್ದೆಗಳಲ್ಲಿ 2 ಹುದ್ದೆ ಖಾಲಿ ಇವೆ. ಚಾಲಕನ ಹುದ್ದೆ ಭರ್ತಿ ಮಾಡಿಲ್ಲ. 36 ಡಿ ದರ್ಜೆ ನೌಕರರ ಪೈಕಿ 8 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಎಮ್ಮೆ, ಆಕಳು, ಎತ್ತು ಸೇರಿ ಒಟ್ಟು 63 ಸಾವಿರ ಜಾನುವಾರುಗಳಿವೆ. 3.28 ಲಕ್ಷ ಕುರಿ, ಮೇಕೆಗಳಿದ್ದು, ನಾಯಿ, ಹಂದಿ, ಕೋಳಿ ಸೇರಿ ಒಟ್ಟು 4.30 ಲಕ್ಷ ಸಾಕು ಪ್ರಾಣಿಗಳಿವೆ. ಇವುಗಳ ಆರೋಗ್ಯ ರಕ್ಷಣೆಗೆ ಪಶು ಆಸ್ಪತ್ರೆಗಳಲ್ಲಿ ಸೂಕ್ತ ಸಿಬ್ಬಂದಿಗಳಿಲ್ಲ. ಹಾಗಾಗಿ ಜಾನುವಾರುಗಳ ಚಿಕಿತ್ಸೆಗಾಗಿ ರೈತರು, ಜಾನುವಾರು ಮಾಲೀಕರು ವೈದ್ಯರು ಇರುವ ಆಸ್ಪತ್ರೆ ಹುಡುಕಿಕೊಂಡು ತೆರಳುತ್ತಿದ್ದಾರೆ.

ಹೋಬಳಿ ಕೇಂದ್ರಗಳಲ್ಲಿರುವ ಗುರುಗುಂಟಾ, ಮುದಗಲ್ಲ, ಆನ್ವರಿ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿ ಯಾವೊಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ. ತಾತ್ಕಾಲಿಕವಾಗಿ ತಾಲ್ಲೂಕು ಆಡಳಿತ ಡಿ ದರ್ಜೆ ಅಥವಾ ಪಶು ವೈದ್ಯ ಪರೀಕ್ಷಕರ ನಿಯೋಜನೆ ಮಾಡಲಾಗಿದೆ.  ಒಬ್ಬೊಬ್ಬ ವೈದ್ಯರಿಗೆ 3 ರಿಂದ 6 ಆಸ್ಪತ್ರೆಗಳ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಕೆಲವೆಡೆ ಡಿ ದರ್ಜೆ ಸಿಬ್ಬಂದಿ ಇಲ್ಲದೇ ಕಚೇರಿ ಬಾಗಿಲು ತೆಗೆಯುವವರು ಇಲ್ಲದಂತಾಗಿದೆ.

ಮೈತ್ರಿ ಯೋಜನೆಯಡಿ  ಖಾಸಗಿ ಹೊರಗುತ್ತಿಗೆ ಸಂಸ್ಥೆಯಿಂದ 13 ಜನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ತಾಲ್ಲೂಕು ಕೇಂದ್ರಕ್ಕೆ ಎರಡು ಪ್ರತ್ಯೇಕ ಪಶು ಸಂಚಾರಿ ಆಸ್ಪತ್ರೆಗಾಗಿ ವಾಹನಗಳನ್ನು ನೀಡಿದ್ದು, ವರ್ಷ ಗತಿಸಿದರು ಸಿಬ್ಬಂದಿ ನಿಯೋಜನೆ ಇಲ್ಲದೆ ಜಿಲ್ಲಾ ಕೇಂದ್ರದಲ್ಲಿ ಧೂಳು ತಿನ್ನುತ್ತಿವೆ. ಸಿಬ್ಬಂದಿ ಕೊರತೆ ಕುರಿತು ವರದಿ ಸಲ್ಲಿಸುತ್ತ ಬಂದಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದನ್ನು ಆಸ್ಪತ್ರೆ ಮೂಲಗಳು ದೃಢಪಡಿಸುತ್ತವೆ.

‘ತಾಲ್ಲೂಕಿನಾದ್ಯಂತ ಜಾನುವಾರು, ಕುರಿ, ಮೇಕೆ, ನಾಯಿ, ಹಂದಿ ಇತರೆ ಸಾಕು ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಸಿಬ್ಬಂದಿ ನಿಯೋಜನೆ ಮಾಡದಿರುವುದು ರೈತರು ಮತ್ತು ಜಾನುವಾರು ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ, ಸಿಬ್ಬಂದಿಯು ಇಲ್ಲದೆ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ನಿಗದಿತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜಾನುವಾರುಗಳ ಸಾವಿನ ಸಂಖ್ಯೆ ಹೆಚ್ಚಳವಾಗಿದೆ’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದ್ದಾರೆ.

‘ತಾಲ್ಲೂಕಿನಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಸರ್ಕಾರ ಮಂಜೂರಾತಿ ಹುದ್ದೆ ಆಧರಿಸಿ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಇರುವ ವೈದ್ಯರು, ಪಶು ವೈದ್ಯಕೀಯ ಪರೀಕ್ಷಕರು, ಡಿ ದರ್ಜೆ ನೌಕರರನ್ನು ಬಳಸಿಕೊಂಡು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿದ್ದೇವೆ. ಸಿಬ್ಬಂದಿ ಕೊರತೆ ಹೊರತುಪಡಿಸಿ ಎಲ್ಲ ಸೌಲಭ್ಯ ಸರಿಯಾಗಿವೆ. ಸಿಬ್ಬಂದಿ ಕೊರತೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತ ಬಂದಿದ್ದೇವೆ’ ಎಂದು ಸಹಾಯಕ ನಿರ್ದೇಶಕ ಡಾ.ರಾಚಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT