ಸೋಮವಾರ, ಅಕ್ಟೋಬರ್ 19, 2020
24 °C
ಶ್ರೀಲಂಕಾ, ನೇಪಾಳ, ದುಬೈ, ಚೀನಾ ದೇಶಗಳ ವಿದ್ಯಾರ್ಥಿಗಳಿಗೆ ಯೋಗ ತರಬೇತಿ

ಸಿಂಧನೂರು: ಹಳ್ಳಿಯ ಹುಡುಗನ ಯೋಗ ಸಾಧನೆ

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಹಳ್ಳಿಯ ಬಡಕುಟುಂಬದ ಯುವಕನೊಬ್ಬ ಶ್ರೀಲಂಕಾ, ನೇಪಾಳ, ದುಬೈ, ಚೀನಾ ದೇಶಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಸಾಧಕನಾಗಿ ಬೆಳೆದ ಯಶೋಗಾಥೆ ಎಂಥವರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಸಿಂಧನೂರು ತಾಲ್ಲೂಕಿನ ಎಲೆಕೂಡ್ಲಿಗಿ ಕ್ಯಾಂಪಿನ ಹನುಮಂತ ನವಲಿ ಅವರ ಪುತ್ರ ಮಲ್ಲಣ್ಣ ಅವರೇ ಈ ಸಾಧಕ.

ಇಲ್ಲಿಯ ಶಾಲೆಗಳಿಗೆ ಶುಲ್ಕ ಕಟ್ಟಲಾಗದೆ ತುಮಕೂರಿನ ಸಿದ್ಧಗಂಗಾ ಶ್ರೀಮಠದಲ್ಲಿ ಪ್ರೌಢಶಾಲೆಗೆ ಪ್ರವೇಶ ಪಡೆಯಬೇಕೆನ್ನುವ ಆಸೆಯಿಂದ ತೆರಳಿದ ಬಾಲಕನಿಗೆ ಅಲ್ಲಿ ಅವಕಾಶ ಸಿಗದ ಕಾರಣಕ್ಕಾಗಿ ಆನಂದ ಅವರ ನೆರವಿನಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಬಿಸಿಎಂ ಹಾಸ್ಟೆಲ್‍ನಲ್ಲಿ ಪ್ರವೇಶ ಪಡೆದು ತನ್ನ ಪ್ರೌಢಶಾಲಾ ಅಭ್ಯಾಸ ಮುಂದುವರೆಸಿದ್ದೆ ಆತನ ಇಂದಿನ ಸಾಧನೆಗೆ ಕಾರಣವಾಗಿದೆ.

ಹಾಸ್ಟೆಲ್ ಪಕ್ಕದಲ್ಲಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಿಗೆ ಕಾಲಿಗೆ ಗ್ಯಾಂಗ್ರೀನ್ ಆಗಿ ಎರಡು ಬೆರಳುಗಳನ್ನು ತೆಗೆಯಲಾಗಿತ್ತು. ಅದಕ್ಕೆ ಕಾರಣ ವಿಪರೀತ ಸಕ್ಕರೆ ಕಾಯಿಲೆ ಎಂದು ಗೊತ್ತಾಗಿದ್ದು ಹಾಗೂ ತಮ್ಮ ಸಂಬಂಧಿಯೊಬ್ಬರು ಹೃದಯಾಘಾ ತದಿಂದ ಮೃತಪಟ್ಟ ಘಟನೆ ಆತನನ್ನು ಯೋಗ ಮಾಡಲು ಪ್ರೇರೆಪಿಸಿದವು.

‘ಯೋಗ ಮಾಡುವುದರಿಂದ ಶೇ 70 ರಷ್ಟು ಕಾಯಿಲೆಗಳು ದೂರವಾಗುತ್ತವೆಂದು ತಮ್ಮ ಗುರುಗಳೊಬ್ಬರು ಹೇಳಿದ ಕಾರಣಕ್ಕಾಗಿ ಬೆಳಗಿನ ಜಾವ 3 ಗಂಟೆಗೆ ಎದ್ದು ಯೋಗಾಭ್ಯಾಸ ಮಾಡಿ, ನಂತರ ತರಗತಿ ವಿಷಯಗಳನ್ನು ಅಭ್ಯಾಸ ಮಾಡುವು ದನ್ನು ರೂಢಿಸಿಕೊಂಡೆ. ಈ ಮಧ್ಯೆ ಯಲಹಂಕದ ಸ್ವಾಮಿ ವಿವೇಕಾನಂದ ಯೋಗ ಕೇಂದ್ರ ಟ್ರಸ್ಟ್‌ನ ಡಾ.ಯೋಗಿ ದೇವರಾಜ ಗುರೂಜಿ ಅವರ ಪರಿಚಯದಿಂದ ಯೋಗಾಭ್ಯಾಸದಲ್ಲಿ ಮುಂದುವರೆದೆ’ ಎಂದು ಯೋಗಾಶ್ರೀ ಮಲ್ಲಣ್ಣ ಹೇಳುತ್ತಾರೆ.

ಗಿನ್ನಿಸ್ ದಾಖಲೆ: ಬೆಂಗಳೂರಿನಲ್ಲಿರುವ ಯೋಗ ಯೂನಿರ್ವಸಿಟಿ ಆಫ್ ಅಮೆರಿಕದ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕಲಿತು, ವಿಶೇಷ ಯೋಗಾಭ್ಯಾಸ ಮಾಡಿ, ನಂತರ ತಮಿಳುನಾಡಿನ ಯೋಗ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿ, ಇತರರಿಗೆ ಯೋಗ ತರಬೇತಿ ನೀಡುವುದನ್ನು ಕಲಿತಿದ್ದಾರೆ.

4 ನಿಮಿಷಗಳ ಕಾಲ ನಿರಂತರ 1391 ವಿದ್ಯಾರ್ಥಿಗಳನ್ನು ‘ವೀರಭದ್ರ ಆಸನ’ ಮಾಡಿಸುವ ಮೂಲಕ ಗಿನ್ನಿಸ್ ದಾಖಲೆ ಪಡೆದಿರುವ ಹೆಗ್ಗಳಿಕೆಯೂ ಮಲ್ಲಣ್ಣ ಅವರಿಗಿದೆ. 

5 ನಿಮಿಷದಲ್ಲಿ 50 ಆಸನ, 12 ಸೂರ್ಯ ನಮಸ್ಕಾರ ಪ್ರದರ್ಶನ, 9 ಪ್ರಾಣಾಯಾಮ ಮತ್ತು 10 ಮುದ್ರೆಗಳನ್ನು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದಾರೆ. ಏಕ ಹಸ್ತದಿಂದ ಆಸನ ಮಾಡುವುದನ್ನು ಕಲಿತಿರುವ ಇವರಿಗೆ ಅವರ ಗುರುಗಳೇ ‘ಏಕಹಸ್ತ ಮಲ್ಲಾಸನ’ ಎಂದು ಇವರ ಹೆಸರನ್ನೇ ನಾಮಕರಣ ಮಾಡಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ತಮ್ಮ ಹುಟ್ಟೂರಿಗೆ ಬಂದಿರುವ ಅವರು ಸಿಂಧನೂರಿನ ಕೋವಿಡ್ ಆಸ್ಪತ್ರೆಯಲ್ಲಿ ನೂರಾರು ಜನರಿಗೆ ತಿಂಗಳುಗಟ್ಟಲೇ ಉಚಿತವಾಗಿ ಯೋಗ ತರಬೇತಿ ನೀಡಿದ್ದಾರೆ.  ಮಸ್ಕಿ, ರಾಯಚೂರು, ಕಲಬುರ್ಗಿ, ಕೊಪ್ಪಳ, ಗಂಗಾವತಿ, ಚಿಕ್ಕಬಳ್ಳಾಪುರ, ತುಮಕೂರು, ಹೀಗೆ ಹಲವಾರು ಕಡೆಗಳಲ್ಲಿ ಯೋಗ ತರಬೇತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು