ಸೋಮವಾರ, ಅಕ್ಟೋಬರ್ 26, 2020
20 °C
ಅವೈಜ್ಞಾನಿಕ, ಕಳಪೆ ಕಾಮಗಾರಿಯಿಂದ ಘಟನೆ: ರೈತರ ಆರೋಪ

ರಾಯಚೂರು: ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ಮಳೆ ನೀರಿನ ರಭಸಕ್ಕೆ ಸಗಮಕುಂಟ ಮತ್ತು ಯರಗುಂಟ ಗ್ರಾಮಗಳಲ್ಲಿ ಕೊನೆ ಭಾಗದ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಒಡೆದು ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಕೊನೆ ಭಾಗದಲ್ಲಿ ₹29 ಕೋಟಿ ವೆಚ್ಚದಲ್ಲಿ 18.6 ಕಿಲೋ ಮೀಟರ್‌ವರೆಗೆ ವಿಸ್ತರಣಾ ಕಾಲುವೆ ಕಾಮಗಾರಿ ಕೈಗೊಳ್ಳಲಾಗಿತ್ತು.

ಮಳೆ ಕಾರಣ ಹೆಚ್ಚಿನ ನೀರು ಹರಿದು ಬಂದ ಪರಿಣಾಮ ಕಾಲುವೆ ಒಡೆದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಮೆಣಿಸಿನಕಾಯಿ, ಹತ್ತಿ, ತೊಗರಿ ಮತ್ತು ಭತ್ತ ಕೊಚ್ಚಿ ಹೋಗಿದೆ.

‘ಈಚೆಗೆ ಕಾಲುವೆ ಕಾಮಗಾರಿ ನಡೆದಿತ್ತು. ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದ ಕಾರಣ ಕಾಲುವೆ ಒಡೆದು ಹೋಗಿದೆ. ₹20 ಲಕ್ಷ ಮೌಲ್ಯದ ಬೆಳೆ ನಷ್ಟ ಆಗಿದೆ’ ಎಂದು ರೈತರಾದ ಶ್ರೀಕಾಂತ, ರಂಗಾರೆಡ್ಡಿ ಅವರು ತಿಳಿಸಿದರು.

ಭೂಸ್ವಾಧೀನ ಪರಿಹಾರ ನೀಡುವವರೆಗೂ ಸಗಮಕುಂಟ ಗ್ರಾಮದ ರೈತರ ಜಮೀನುಗಳಲ್ಲಿ ಎನ್‌ಆರ್‌ಬಿಸಿ ಕಾಮಗಾರಿ ಮಾಡದಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈಗ ಅರ್ಧ ಕಾಮಗಾರಿ ಮುಗಿಸಿದ ಪರಿಣಾಮ, ಕಾಲುವೆ ಒಡೆದು ಜಮೀನುಗಳಲ್ಲಿ ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ.

ಅತ್ತ ಭೂಸ್ವಾಧೀನ ಪರಿಹಾರ ಇಲ್ಲ. ಇತ್ತ ಬೆಳೆ ಹಾನಿ ಪರಿಹಾರವೂ ಇಲ್ಲದಂತಾಗಿದೆ. ಕೋವಿಡ್ ನಡುವೆಯೂ ಇಂಥ ಸಮಸ್ಯೆಗಳ ಮಧ್ಯೆ ಬದುಕಬೇಕಾಗಿದೆ. ಈ ಭಾಗದ ಜನಪ್ರತಿನಿಧಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಗಮನಹರಿಸುತ್ತಿಲ್ಲ ಎಂದು ಸಗಮಕುಂಟ ರೈತ ಸುರೇಶ ಬಡಿಗೇರ ಅಳಲು ತೋಡಿಕೊಂಡರು.

ದೇವಸೂಗೂರು ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್‌ ಶಿವಕುಮಾರ ಅವರು ಸ್ಥಳಕ್ಕೆ ಭೇಟಿ ನೀಡಿ ಒಡೆದ ಕಾಲುವೆಯನ್ನು ಪರಿಶೀಲಿಸಿದರು.

ಮಳೆ ನೀರಿನ ರಭಸಕ್ಕೆ ಕಾಲುವೆ ಒಡೆದು ನೀರು ಪೋಲಾಗಿದೆ. ಒಡೆದ ಕಾಲುವೆಯನ್ನು ದುರಸ್ತಿಗೊಳಿಸುವಂತೆ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಬೆಳೆ ನಷ್ಟದ ಕುರಿತು ಇನ್ನೆರಡು ದಿನಗಳಲ್ಲಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು