ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾದರೆ ನೀರಿನದ್ದೇ ಚಿಂತೆ!

ಹೊಸಳ್ಳಿ ಇ.ಜೆ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿಗೆ ಹಾಹಾಕಾರ
Last Updated 3 ಮೇ 2021, 12:41 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕು ಕೇಂದ್ರದಿಂದ 4 ಕಿಲೋ ಮೀಟರ್‌ ಅಂತರದಲ್ಲಿರುವ ಹೊಸಳ್ಳಿ ಇ.ಜೆ ಗ್ರಾಮದಲ್ಲಿ ಕೈ, ಕಾಲು, ಮುಖ ತೊಳೆಯಲು ಹಿಂಜರಿಯುವ ಸ್ಥಿತಿಯಲ್ಲಿರುವ ನೀರನ್ನೇ ಗ್ರಾಮಸ್ಥರು ಕುಡಿಯುತ್ತಿದ್ದಾರೆ. ಶುದ್ಧ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡುತ್ತಿದ್ದಾರೆ.

ಹೊಸಳ್ಳಿ ಇ.ಜೆ ಗ್ರಾಮದಲ್ಲಿ 600 ಮನೆಗಳಿವೆ. ಎರಡು ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಕಳೆದ 25 ವರ್ಷಗಳ ಹಿಂದೆ ಕೆರೆ ನಿರ್ಮಾಣವಾದರೂ ಮನೆಗಳಿಗೆ ನೀರು ಮಾತ್ರ ತಲುಪಿಲ್ಲ. ತೆರೆದ ಕೆರೆಯಲ್ಲಿ ನೀರು ತುಂಬಿದ್ದು ಕಲುಷಿತ ಹಳ್ಳದ ನೀರಿನಂತೆ ಕಾಣುತ್ತಿರುವ ಕೆರೆಯ ನೀರು ಈ ಗ್ರಾಮಸ್ಥರಿಗೆ ಕುಡಿಯಲು ಇರುವ ಏಕೈಕ ಜಲಮೂಲವಾಗಿದೆ. ‘ಕೆರೆಯ ಒಳಮಗ್ಗುಲಲ್ಲಿ ಹುಲ್ಲು ಬೆಳೆದಿದೆ. ನೀರು ಕಂದು ಬಣ್ಣಕ್ಕೆ ತಿರುಗಿದೆ.

‘ಈ ನೀರಿನಲ್ಲಿ ಸ್ನಾನ ಮಾಡಿದರೆ ಮೈ ತಿಂಡಿ ಬರುತ್ತಿದೆ. ಇಂಥ ನೀರನ್ನು ಹೇಗೆ ಕುಡಿಯಬೇಕು. ಪಂಚಾಯಿತಿಯವರು ನಮ್ಮನ್ನು ಮನುಷ್ಯರಂತೆ ತಿಳಿದಿಲ್ಲ’ ಎಂದು ಹುಸೇನಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ಹೊಸಳ್ಳಿ ಕ್ಯಾಂಪಿನಿಂದ ಕಾಲುವೆ ನಮ್ಮೂರಿಗೆ ಬರುತ್ತಿದೆ. ಅಲ್ಲಿ ಬಚ್ಚಲು ನೀರು, ಶೌಚಾಲಯದ ನೀರನ್ನು ಕಾಲುವೆಗೆ ಹರಿಬಿಡುತ್ತಾರೆ. ಅದೇ ನೀರನ್ನೇ ಕೆರೆಗೆ ತುಂಬಿದ್ದಾರೆ. ಇಂಥ ನೀರನ್ನು ಹೇಗೆ ಬಳಸಬೇಕು’ ಎಂದು ಮುತ್ತಮ್ಮ ಪ್ರಶ್ನಿಸುತ್ತಾರೆ.

ಖಾಸಗಿಯವರು ಕೆರೆಗಳಲ್ಲಿ ನೀರು ಉತ್ತಮವಾಗಿತ್ತು. ಈಗ ಅವರು ಅದನ್ನು ಬಂದ್ ಮಾಡಿದ್ದಾರೆ. ನೀರಿಗಾಗಿ ಯಾರನ್ನು ಬೇಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂಬುದು ಜನರ ಅಳಲು.

ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಮನೋಹರ್ ಅವರನ್ನು ಸಂಪರ್ಕಿಸಿದಾಗ ‘ಕೆರೆ ಚಿಕ್ಕದಾಗಿ ಇರುವುದರಿಂದ ಮನೆ-ಮನೆಗೆ ನಳದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನಳದ ಮೂಲಕ ಸರಬರಾಜು ಮಾಡಿದರೆ ಕೆರೆಯ ನೀರು ಬೇಗ ಬರಿದಾಗುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ನೀರಿನ ತಾಪತ್ರಯ ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಹನುಮಾನ್‍ನಗರ ಕ್ಯಾಂಪಿನಲ್ಲಿ ಜಮೀನು ಖರೀದಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ನಿರ್ಮಾಣ ಕೆಲಸ ಆರಂಭಿಸಲಾಗಿದೆ. ಮುಂದಿನ ವರ್ಷದಿಂದ ನಳಗಳ ಮೂಲಕ ನೀರು ಸಿಗಬಹುದಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾಹನ ಇದ್ದವರು ಸಿಂಧನೂರಿನಿಂದ ಶುದ್ಧ ನೀರನ್ನು ತೆಗೆದುಕೊಂಡು ಬರುತ್ತಾರೆ. ಅಸಹಾಯಕರು, ವೃದ್ದರು, ವಾಹನ ಇಲ್ಲದವರು ಕೆರೆಯ ಕಲುಷಿತ ನೀರನ್ನೇ ಕುಡಿಯುತ್ತಾರೆ.

ಪ್ರತಿ ಗ್ರಾಮ್ಕಕೂ ರಸ್ತೆ ಸೇರಿದಂತೆ ಶಾಲಾ ಕಟ್ಟಡ, ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿರುವುದಾಗಿ ಶಾಸಕ ವೆಂಕಟರಾವ್ ನಾಡಗೌಡರು ಹಲವಾರು ಬಾರಿ ಹೇಳಿದ್ದಾರೆ. ಹೊಸಳ್ಳಿ ಇ.ಜೆ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಸಮಸ್ಯೆ ಕುರಿತು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT