ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭ: ಪ್ರಚಾರಕ್ಕಾಗಿ ಮೈಕ್‌ ಹಿಡಿದ ಶಿಕ್ಷಕರು

ಜಿಲ್ಲೆಯ 16 ಶಾಲೆಗಳಲ್ಲಿ ಪ್ರಾರಂಭ
Last Updated 2 ಮೇ 2019, 15:57 IST
ಅಕ್ಷರ ಗಾತ್ರ

ರಾಮನಗರ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆಯುವ ಸಲುವಾಗಿ ರಾಜ್ಯ ಸರ್ಕಾರವು ಈ ವರ್ಷದಿಂದ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿದೆ. ಸ್ವತಃ ಶಿಕ್ಷಕರೇ ಮನೆ ಮನೆಗಳಿಗೆ ತೆರಳಿ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂತಹ 16 ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಈ ವರ್ಷದಿಂದ ಕಾರ್ಯಾರಂಭ ಮಾಡಲಿವೆ. ಈ ಶಾಲೆಗಳಿಗೆ ಈಗಾಗಲೇ ದಾಖಲಾತಿ ಕಾರ್ಯ ಆರಂಭಗೊಂಡಿದೆ. ಖಾಸಗಿ ಶಾಲೆಗಳ ಪ್ರವೇಶಾತಿಯೂ ಆರಂಭಗೊಂಡಿದ್ದು ಪೋಷಕರು ಅಲ್ಲಿ ತಮ್ಮ ಮಕ್ಕಳ ದಾಖಲಾತಿಗೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲಾ ಶಿಕ್ಷಕರೂ ಕಾರ್ಯೋನ್ಮುಖರಾಗಿದ್ದು, ಪೋಷಕರ ಮನವೊಲಿಸುತ್ತಿದ್ದಾರೆ.

ಕರಪತ್ರ ಹಂಚಿಕೆ, ಆಟೊ ಪ್ರಚಾರ: ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ದೊರೆತಿರುವ ಶಾಲೆಗಳ ಶಿಕ್ಷಕರು ಸ್ವತಃ ತಾವೇ ಪೋಷಕರ ಬಳಿ ತೆರಳಿ ಹೊಸತಾಗಿ ಆರಂಭವಾಗುವ ಶಾಲೆ ಮತ್ತು ಅಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸವಲತ್ತುಗಳ ಕುರಿತು ಕರಪತ್ರಗಳನ್ನೂ ಹಂಚುತ್ತಿದ್ದಾರೆ. ಕಾನ್ವೆಂಟ್‌ ಮಾದರಿ ಶಿಕ್ಷಣ, ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ, ಬಿಸಿಯೂಟ, ವಿದ್ಯಾರ್ಥಿ ವೇತನ, ಶೂ, ಟೈ, ಬೆಲ್ಟ್‌ ಸಹಿತ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಈ ಕರಪತ್ರಗಳು ಹೊಂದಿವೆ.

ಇದಲ್ಲದೆ ಆಟೊ ಪ್ರಚಾರದ ಮೂಲಕವೂ ಜನರ ಗಮನ ಸೆಳೆಯಲಾಗುತ್ತಿದೆ. ಶಿಕ್ಷಕರೇ ಮೈಕ್‌ ಹಿಡಿದು ಇಂಗ್ಲಿಷ್‌ ಶಾಲೆ ಮತ್ತು ಮತ್ತು ಅಲ್ಲಿನ ಸೌಲಭ್ಯದ ಕುರಿತು ಸಾರಿ ಹೇಳತೊಡಗಿದ್ದಾರೆ.

ಉತ್ತಮ ಪ್ರತಿಕ್ರಿಯೆ: ‘ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಕಷ್ಟು ಮಂದಿ ಶಾಲೆಗೆ ಬಂದು ಇಲ್ಲವೇ ದೂರವಾಣಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ನಮ್ಮ ಶಾಲೆಯಲ್ಲೇ ನಾಲ್ಕೈದು ವಿದ್ಯಾರ್ಥಿಗಳ ನೋಂದಣಿಯೂ ಆಗಿದೆ’ ಎನ್ನುತ್ತಾರೆ ಐಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೇಶಪ್ಪ ನಾಯಕ್‌.

ಮೌಲ ಸೌಕರ್ಯ: ‘ಈಗ ಇರುವ ಆಯ್ದ ಶಾಲೆಗಳಲ್ಲೇ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭವಾಗಲಿವೆ. ಅದಕ್ಕೆ ಬೇಕಾದ ಶಿಕ್ಷಕರನ್ನೂ ನಿಯೋಜಿಸಲಾಗಿದೆ. ಮುಂದೆ ಇವುಗಳಿಗೆ ಸರ್ಕಾರವು ಹಂತಹಂತವಾಗಿ ಮೂಲ ಸೌಲಭ್ಯ ಕಲ್ಪಿಸಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.

‘ಶಾಲೆಗಳ ಆರಂಭದ ಕುರಿತು ವ್ಯಾಪಕ ಪ್ರಚಾರ ಮಾಡುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಇಂತಹ ಶಾಲೆಗಳ ಆರಂಭದಿಂದ ಖಾಸಗಿ ಶಾಲೆಗಳ ಪ್ರಭಾವ ತಗ್ಗಿ ಸರ್ಕಾರಿ ಶಾಲೆಗಳತ್ತ ಪೋಷಕರು ಮುಖ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕುವಾರು ಶಾಲೆಗಳ ವಿವರ
ಚನ್ನಪಟ್ಟಣ(4): ಜಿಯುಎಂಪಿಎಸ್‌ ಹಳೆ ಡೈರಾ, ಜಿಎಚ್‌ಪಿಎಸ್‌ ಮುನಿಯಪ್ಪನದೊಡ್ಡಿ, ಜಿಎಂಪಿಎಸ್‌ ಹೊಂಗನೂರು, ಜಿಎಚ್‌ಪಿಎಸ್‌ ವಿದ್ಯಾಸಂದ್ರ ಅರಳಾಳುಸಂದ್ರ.

ಕನಕಪುರ(6): ಜಿಎಚ್‌ಪಿಎಸ್‌ ಚಿಕ್ಕಕಬ್ಬಾಳು, ಜಿಎಚ್‌ಪಿಎಸ್ ಅಚ್ಚಲು, ಜಿಎನ್‌ಪಿಬಿಎಸ್‌ ಕನಕಪುರ, ಜಿಎಚ್‌ಪಿಎಸ್‌ ದೊಡ್ಡಾಲಹಳ್ಳಿ. ಜಿಎಚ್‌ಪಿಎಸ್‌ ದೊಡ್ಡಮರಳವಾಡಿ, ಜಿಎಚ್‌ಪಿಎಸ್‌ ಹಾರೋಹಳ್ಳಿ.

ಮಾಗಡಿ(2): ಜಿಜೆಸಿ ಕುದೂರು, ಜಿಎಂಪಿಎಸ್‌ ತಿಪ್ಪಸಂದ್ರ.

ರಾಮನಗರ(4): ಜಿಕೆಎಂಪಿಎಸ್‌ ರಾಮನಗರ, ಜಿಎಚ್‌ಪಿಎಸ್‌ ಐಜೂರು, ಜಿಎಚ್‌ಪಿಎಸ್ ಜಾಲಮಂಗಲ, ಜಿಎಚ್‌ಪಿಎಸ್‌ ಅವ್ವೇರಹಳ್ಳಿ.

**

ಈ ವರ್ಷ ಜಿಲ್ಲೆಯ 16 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ದಾಖಲಾತಿ ನಡೆದಿದ್ದು, ಜೂನ್‌ 1ರಿಂದ ತರಗತಿ ಆರಂಭವಾಗಲಿದೆ
-ಗಂಗಮಾರೇಗೌಡ,ಡಿಡಿಪಿಐ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT