ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ | ಹೆರಿಗೆ ಮಾಡಿಸಿದ್ದಕ್ಕೆ ₹6 ಸಾವಿರ ಲಂಚ ಬೇಡಿಕೆ: ಇಬ್ಬರು ವೈದ್ಯರ ಅಮಾನತು

Last Updated 26 ನವೆಂಬರ್ 2022, 14:14 IST
ಅಕ್ಷರ ಗಾತ್ರ

ಬಿಡದಿ/ ರಾಮನಗರ: ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಯಾಗಿ ಅಲ್ಲಿನ ವೈದ್ಯರು ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣ ಸಂಬಂಧ ಇಬ್ಬರು ವೈದ್ಯರನ್ನು ಆರೋಗ್ಯ ಇಲಾಖೆಯು ಸೇವೆಯಿಂದ ಅಮಾನತು ಮಾಡಿದೆ.

ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯ ಸೇವೆಯಿಂದ ಅಮಾನತುಗೊಂಡವರು.

ಬಿಡದಿ ನಿವಾಸಿ ಮಂಜುನಾಥ್‌ ಎಂಬುವರ ಪತ್ನಿ ರೂಪಾ ಅವರಿಗೆ ನಾಲ್ಕು ದಿನದ ಹಿಂದೆ ಬಿಡದಿ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ಬಾಣಂತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ವೇಳೆಗೆ ವೈದ್ಯರು ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದಕ್ಕೆ ಒಪ್ಪದ ಮಂಜುನಾಥ್‌ ‘ನನ್ನ ಬಳಿ ₹ 2 ಸಾವಿರ ಮಾತ್ರವೇ ಇದೆ’ ಎನ್ನುತ್ತಾರೆ. ಆದರೆ ವೈದ್ಯರು ‘ ಮೂರು ಜನರಿಗೂ ತಲಾ ₹2 ಸಾವಿರ ಕೊಡಬೇಕು. ನೀವು ಬರೀ 2 ಸಾವಿರ ಕೊಟ್ಟರೆ ನಾವು ಎಲ್ಲರಿಗೂ ₹500 ಹಂಚಲು ಆಗಲ್ಲ. ನೀವು ಒಬ್ಬರು ಹೀಗೆ ಮಾಡಿದರೆ ವಾರ್ಡಿನಲ್ಲಿ ಇರುವ ಎಲ್ಲರಿಗೂ ಹಾಗೆಯೇ ಮಾಡುತ್ತಾರೆ. ನಾವು ಹಾಗೆಲ್ಲ ಬೇಧ ಮಾಡಲು ಆಗದು’ ಎನ್ನುತ್ತಾರೆ. ಈ ಎಲ್ಲವನ್ನೂ ಮಂಜುನಾಥ್‌ ತಮ್ಮ ಮೊಬೈಲ್ ಮೂಲಕ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಅಧಿಕಾರಿಗಳಿಂದ ತನಿಖೆ
ಲಂಚಬೇಡಿಕೆಯ ವಿಡಿಯೊ ಹರಿದಾಡಿದ ಬೆನ್ನಲ್ಲೇ ಡಿಎಚ್‌ಒ ಡಾ. ಕಾಂತರಾಜು ಹಾಗೂ ತನಿಖಾಧಿಕಾರಿ ಡಾ. ಮಂಜುನಾಥ್ ನೇತೃತ್ವದ ತಂಡವು ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

‘ಆಸ್ಪತ್ರೆ ವೈದ್ಯರು ಹಣಕ್ಕೆ ಬೇಡಿಕೆ ಇಟ್ಟಿರುವುದು ವಿಡಿಯೊದಲ್ಲಿ ಬಹಿರಂಗ ಆಗಿದೆ. ವಿಡಿಯೊದಲ್ಲಿ ಮಾತನಾಡಿರುವ ಇಬ್ಬರೂ ವೈದ್ಯರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ಉಳಿದಂತೆ ಇನ್ನೂ ಯಾರು ಯಾರಿಗೆ ಹಣ ಸಂದಾಯ ಆಗುತ್ತಿತ್ತು ಎಂಬುದರ ಕುರಿತು ಇಲಾಖೆ ಮಟ್ಟದಲ್ಲಿ ತನಿಖೆ ನಡೆಯಲಿದೆ’ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ. ಕಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

*

ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ವೈದ್ಯರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ಪ್ರಕರಣ ಕುರಿತು ಇಲಾಖೆ ಹಂತದಲ್ಲಿ ತನಿಖೆ ನಡೆಯಲಿದೆ.
– ಡಾ. ಕಾಂತರಾಜು ಡಿಎಚ್‌ಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT