ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ರೋಗಕ್ಕೆ 9 ಬಲಿ

ಜಿಲ್ಲೆಯ ಹಲವೆಡೆ ಸೋಂಕು: ಜಾನುವಾರುಗಳ ರಕ್ಷಣೆಯೇ ಗ್ರಾಮಸ್ಥರಿಗೆ ಚಿಂತೆ
Last Updated 25 ಜೂನ್ 2021, 4:12 IST
ಅಕ್ಷರ ಗಾತ್ರ

ಬಿಡದಿ: ಕೋವಿಡ್ ಎರಡನೆಯ ಆರ್ಭಟದಿಂದ ಸುಧಾರಿಸಿಕೊಳ್ಳುವ ಸಂದರ್ಭದಲ್ಲೇ ಜಾನುವಾರುಗಳಿಗೆ ಕಾಲುಬಾಯಿ ರೋಗ ಮಾರಣಾಂತಿಕವಾಗಿದೆ.

ಹೋಬಳಿಯಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿರುವ ಕಾಲುಬಾಯಿ ರೋಗಕ್ಕೆ ರಾಸುಗಳು ಬಲಿಯಾಗುತ್ತಿವೆ. ಗ್ರಾಮದ ಬಸವರಾಜು ಎಂಬವರಿಗೆ ಸೇರಿದ ನಾಲ್ಕು ಪಡೆ ರಾಸುಗಳು ಬುಧವಾರ ಕಟಕ್ ಮೃತಪಟ್ಟಿವೆ. ಅಲ್ಲದೆ ಅವರಿಗೇ ಸೇರಿದ ಇನ್ನೂ ಐದಾರು ರಾಸುಗಳು ಕಾಲುಬಾಯಿ ಜ್ವರದಿಂದ ನರಳುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಜಾನುವಾರುಗಳನ್ನು ಕಾಡುವ ಕಾಲುಬಾಯಿ ರೋಗ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲೂ ಏಕಾಏಕಿ 5 ರಾಸುಗಳು ರೋಗಕ್ಕೆ ಬುಧವಾರ ಬಲಿಯಾಗಿವೆ. ಈ ಘಟನೆ ತಾಲ್ಲೂಕಿನ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದು ಜಾನುವಾರುಗಳ ರಕ್ಷಣೆಗೆ ಹೇಗೆಂಬ ಚಿಂತೆ ಕಾಡುತ್ತಿದೆ.

ರಾಮನಗರ ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಬಹುಪಾಲು ರೈತರು ಉಪಕಸುಬಾಗಿ ಹಸು ಸಾಕಣೆ ಮಾಡುತ್ತಾರೆ. ಹಾಲು ಉತ್ಪನ್ನ ಸಂಗ್ರಹಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಮನೆ ಬಾಗಿಲ ಬಳಿ ದೊರಕುವುದರಿಂದ ರಾಸುಗಳನ್ನು ಮುತುವರ್ಜಿಯಿಂದ ಸಾಕಣೆ ಮಾಡುವುದುಂಟು. ಇಂತಹ ಸಂದರ್ಭದಲ್ಲಿ ಕಾಲುಬಾಯಿ ರೋಗದ ಲಕ್ಷಣಗಳು ಕಾಣಿಸಿಕೊಂಡು ರೈತರಲ್ಲಿ ಆತಂಕ ಸೃಷ್ಟಿಸುತ್ತಿದೆ.

ಎಚ್ಚರಿಕೆ ಅಗತ್ಯ: ಜಿಲ್ಲೆಯಲ್ಲಿ ಕೆಲವುಕಡೆ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚರಿಕೆ ವಹಿಸಲು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ‘ರಾಸುಗಳಿಗೆ ಕಾಲುಬಾಯಿ ಜ್ವರ ಹೆಚ್ಚಾಗಿ ಬಾಧಿಸದಂತೆ ನೀರು ಮತ್ತು ಆಹಾರ ಸೇವನೆಗೆ ನೀಡಬೇಕು. ಹೆಮೆಕಾಜಿಕ್ ಸಷ್ಟಿಸೀಮಿಯಾದಿಂದ ರೋಗ ಬರುತ್ತದೆ. ಕಾಲುಬಾಯಿ ರೋಗ ಲಕ್ಷಣಗಳು ಕಾಣಿಸಿಕೊಂಡ ಜಾನುವಾರುಗಳಲ್ಲಿ ಗಂಟಲು ಬೇನೆ ಉಂಟಾಗಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ನಂತರ ವೈರಲ್ ಮಯೋಕಾರ್ಡಟಿಸ್ ಎಂಬ ಎರಡನೇ ಬ್ಯಾಕ್ಟೀರಿಯಾದಿಂದ ಚಪ್ಪೆ ರೋಗ ಕಾಣಿಸಿಕೊಂಡು ಹಸುಗಳಿಗೆ ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ’ ಎಂದು ವೈದ್ಯರು ಹೇಳುತ್ತಾರೆ.

ಬಿಡದಿ ಹೋಬಳಿಯ ರಾಮನಹಳ್ಳಿ ಬೈರಮಂಗಲ ಸುತ್ತಮುತ್ತಲ ಗ್ರಾಮಗಳು ಹಾಗೂ ವಡ್ಡರದೊಡ್ಡಿ ಗ್ರಾಮಗಳಲ್ಲೂ ಕಾಲುಬಾಯಿ ರೋಗ ರಾಸುಗಳಿಗೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇಲ್ಲಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಾನಂದೂರು ಗ್ರಾಮದಲ್ಲಿ ಒಬ್ಬ ರೈತನಿಗೆ ಸೇರಿದ ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು ಒಂದೇ ದಿನ ಐದು ರಾಸುಗಳು ಅಸುನೀಗಿವೆ. ಕೋವಿಡರ ಕಾರಣದಿಂದ ರಾಸುಗಳಿಗೆ ವಿಮೆ ಮಾಡಲು ತಡವಾದ ಕಾರಣದಿಂದ ಆ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಕಾಲುಬಾಯಿ ರೋಗದಿಂದ ಸಾವನ್ನಪ್ಪುತ್ತಿರುವ ರಾಸುಗಳ ರೈತರಿಗೆ ಪರಿಹಾರ ಕಲ್ಪಿಸಬೇಕು. ಇದರ ಜೊತೆಗೆ, ರೋಗಕ್ಕೆ ಕ್ಷಿಪ್ರಗತಿಯಲ್ಲಿ ಎಲ್ಲ ಭಾಗದಲ್ಲೂ ಚಿಕಿತ್ಸೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT