ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಬೆಳೆಗಳಿಗೂ ಬೇಕಿದೆ ಬೆಂಬಲ ಬೆಲೆಯ ಬಲ: ಡಾ. ಮಂಜುನಾಥ್ ಅಭಿಪ್ರಾಯ

Published 31 ಮಾರ್ಚ್ 2024, 8:20 IST
Last Updated 31 ಮಾರ್ಚ್ 2024, 8:20 IST
ಅಕ್ಷರ ಗಾತ್ರ

ರಾಮನಗರ: ‘ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯ ಅಗತ್ಯವಿದೆ. ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹಂಚಿಕೆಯಾಗುವ ಮೊತ್ತದಲ್ಲೇ ಬೆಂಬಲ ಬೆಲೆಗೂ ಹಣ ಮೀಸಲಿಡಬೇಕು. ಇದರಿಂದ ರೈತರ ಸಮಸ್ಯೆ ಸೇರಿದಂತೆ ಎಲ್ಲಾ ತೊಂದರೆಗಳು ಬಗೆಹರಿಯಲಿವೆ’ ಎಂದು ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ‘ರೈತರೇ ಈ ದೇಶದ ಉಸಿರು. ಅವರು ಚನ್ನಾಗಿದ್ದರೆ ದೇಶ ಚನ್ನಾಗಿರಲಿದೆ. ಅದಕ್ಕಾಗಿ, ಮತ್ತೊಂದು ಹಸಿರು ಕ್ರಾಂತಿಯ ಅಗತ್ಯವಿದೆ. ದೇಶವು ಕೃಷಿ ಪ್ರಧಾನ ರಾಷ್ಟ್ರವಾಗಿ ಉಳಿಯಬೇಕು’ ಎಂದರು.

‘80ರ ದಶಕದಲ್ಲಿ ದೇಶದ ಶೇ 80ರಷ್ಟು ಜನ ಗ್ರಾಮೀಣ ಭಾಗದಲ್ಲಿದ್ದು, ಪ್ರಮುಖವಾಗಿ ಕೃಷಿ ಕಸುಬು ನೆಚ್ಚಿಕೊಂಡಿದ್ದರು. ಕಾಲ ಬದಲಾದಂತೆ ನಗರವಾಸಿಗಳ ಪ್ರಮಾಣ ಈಗ ಶೇ 30––40ಕ್ಕೆ ಏರಿಕೆಯಾಗಿದೆ. ಕೃಷಿ ಮಾಡುವವರ ಸಂಖ್ಯೆ ಇಳಿಮುಖವಾಗಿದೆ. ಕೃಷಿಕ ಎಂದು ಹೇಳಿಕೊಳ್ಳಲು ಹಿಂಜರಿಕೆ ಇದೆ. ಕೇವಲ ₹8 ಸಾವಿರದಿಂದ ₹10 ಸಾವಿರಕ್ಕೆ ನಗರಕ್ಕೆ ಬಂದು ರೈತಾಪಿ ಜನ ದುಡಿಯುವ ಸ್ಥಿತಿ ಬಂದಿದೆ. ಈ ಸ್ಥಿತಿ ಬದಲಾಗಬೇಕಾದರೆ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ರೈತರ ಆದಾಯ ಹೆಚ್ಚಳವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರ ಸರ್ಕಾರ ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ ₹47 ಸಾವಿರ ಕೋಟಿ ಕೊಡುತ್ತಿದೆ. ಕೇಂದ್ರವು ವರ್ಷಕ್ಕೆ ರೈತರಿಗೆ ಕೊಡುತ್ತಿದ್ದ ₹6 ಸಾವಿರಕ್ಕೆ ರಾಜ್ಯ ಸರ್ಕಾರ ₹4 ಸಾವಿರ ಕೊಡುತ್ತಿತ್ತು. ಇದರಿಂದ ರೈತರಿಗೆ ವರ್ಷಕ್ಕೆ ₹10 ಸಾವಿರ ಸಿಗುತ್ತಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ಆ ಮೊತ್ತ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಸಂಕಷ್ಟದಲ್ಲಿದ್ದ ರೈತರ ₹28 ಸಾವಿರ ಕೋಟಿ ಸಾಲ ಮನ್ನಾ ಮಾಡಿದ‌ ಕೀರ್ತಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ’ ಎಂದರು.

ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಉಪಾಧ್ಯಕ್ಷ ರುದ್ರೇಶ್, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ಉಮೇಶ್, ಹುಲುವಾಡಿ ದೇವರಾಜ್, ದರ್ಶನ್ ರೆಡ್ಡಿ, ಕಾಳಯ್ಯ, ಶಿವಕುಮಾರ್, ಪುಣ್ಯವತಿ, ಜಯಕುಮಾರ್ ಹಾಗೂ ಇತರರು ಇದ್ದರು.

‘ಅಪ್ಪನೊಂದಿಗೆ ಕೃಷಿ ಕೆಲಸ ಮಾಡಿದ್ದೇನೆ’

‘ನಾನು ರೈತಾಪಿ ಕುಟುಂಬದಿಂದ ಬಂದವನು. ಏಳನೇ ತರಗತಿವರೆಗೆ ಊರಲ್ಲೇ ಓದಿದ ನಾನು, ಅಪ್ಪನ ಜೊತೆ ಕೃಷಿ ಕೆಲಸಗಳನ್ನು ಮಾಡುತ್ತಿದ್ದೆ. ಬಾಳೆ ಗಿಡ ನೆಡುವುದು, ಗದ್ದೆ ಕೆಲಸ ಮಾಡಿದ್ದೇನೆ. ಹಾಗಾಗಿ, ನನಗೆ ರೈತಾಪಿ ಜನರೆಂದರೆ ಬಹಳ ಇಷ್ಟ. ಜಯದೇವ ಆಸ್ಪತ್ರೆಯಲ್ಲಿ 18 ವರ್ಷ ನಿರ್ದೇಶಕನಾಗಿದ್ದಾಗ ಅತಿ ಹೆಚ್ಚು ರೈತರು ಮತ್ತು ಗ್ರಾಮೀಣ ಭಾಗದ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಹಣದ ಸಮಸ್ಯೆ, ದಾಖಲೆ ಸಮಸ್ಯೆ ಸೇರಿದಂತೆ ಏನೇ ತೊಂದರೆಗಳಿದ್ದರೂ ವಾಪಸ್ ಕಳಿಸದೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇನೆ. ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಆ್ಯಂಜಿಯೊಪ್ಲಾಸ್ಟ್ ಮತ್ತು ಸ್ಟಂಟ್ ಅಳವಡಿಕೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ’ ಎಂದು ಡಾ. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT