ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣ ಅವರಿಗಿಲ್ಲ ಮತ ಕೇಳುವ ನೈತಿಕತೆ: ಪರಿಷತ್ ಅಭ್ಯರ್ಥಿ ರಂಗನಾಥ್ ವಾಗ್ದಾಳಿ

Published 8 ಫೆಬ್ರುವರಿ 2024, 4:47 IST
Last Updated 8 ಫೆಬ್ರುವರಿ 2024, 4:47 IST
ಅಕ್ಷರ ಗಾತ್ರ

ರಾಮನಗರ: ‘ಶಿಕ್ಷಕರು ಕೊಟ್ಟ ಅಧಿಕಾರವನ್ನು ಒದ್ದು ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆ ನಡೆಯಲು ಕಾರಣವಾಗಿರುವ ಪುಟ್ಟಣ್ಣ ಅವರಿಗೆ ಮತ್ತೆ ಶಿಕ್ಷಕರ ಬಳಿ ಮತ ಕೇಳುವ ನೈತಿಕತೆ ಇಲ್ಲ. ತಮ್ಮನ್ನು ಬೆಳೆಸಿದವರ ಬೆನ್ನಿಗೆ ಚೂರು ಹಾಕುವುದು ಅವರಿಗೆ ಕರಗತವಾಗಿದೆ’ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ವಾಗ್ದಾಳಿ ನಡೆಸಿದರು.

‘ಜೆಡಿಎಸ್‌ನಿಂದ ಗೆದ್ದಿದ್ದ ಅವರು ಉಪ ಸಭಾಪತಿ ಹುದ್ದೆ ಸೇರಿದಂತೆ, ವಿವಿಧ ಅಧಿಕಾರಗಳನ್ನು ಅನುಭವಿಸಿದ್ದರು. ಆದರೆ, ಪಕ್ಷದ ನಾಯಕ ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ, ಬಿಜೆಪಿಗೆ ಪಕ್ಷಾಂತರ ಮಾಡಿದರು. ಆ ಪಕ್ಷದಿಂದಲೂ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ವಿಧಾನಸಭಾ ಚುನಾವಣೆಗೆ ರಾಜಾಜಿನಗರದಿಂದ ಸ್ಪರ್ಧಿಸಲು ಬಿಜೆಪಿಗೂ ಮೋಸ ಮಾಡಿ, ಕಾಂಗ್ರೆಸ್ ಸೇರಿ ಸೋತರು’ ಎಂದು ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಉಂಡು ಹೋದ ಕೊಂಡು ಹೋದ ಪುಟ್ಟಣ್ಣ ಅವರು, ಕಾಂಗ್ರೆಸ್‌ನಲ್ಲಿ ಯಾರ ಬೆನ್ನಿಗೆ ಚೂರಿ ಹಾಕುತ್ತಾರೋ ಗೊತ್ತಿಲ್ಲ. ಕುಮಾರಸ್ವಾಮಿ ಅವರ ಹೆಸರಿನಲ್ಲಿ ಅಧಿಕಾರ ಅನುಭವಿಸಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಕರಿಗೆ ನೀಡಿರುವ ಕೊಡುಗೆ ಏನು? ಅವರು ಸ್ವ ಹಿತಾಸಕ್ತಿ ನೋಡಿಕೊಂಡಿದ್ದಾರೆಯೇ ಹೊರತು, ಶಿಕ್ಷಕರ ಪರವಾಗಿ ಕೆಲಸ ಮಾಡಿಲ್ಲ’ ಎಂದು ಟೀಕಿಸಿದರು.

‘ಕೋವಿಡ್ ಸಂದರ್ಭದಲ್ಲಿ ಅನುದಾನ ರಹಿತ ಶಿಕ್ಷಕರ ಪರವಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ, ಶಿಕ್ಷಕರಿಗೆ ಸರ್ಕಾರದಿಂದ ಕೋವಿಡ್ ಭತ್ಯೆ ಸಿಕ್ಕಿತು. ಆದರೆ, ಪುಟ್ಟಣ್ಣ ಅವರು ತಮ್ಮ ಪರ ಹೋರಾಡಿದವರ ವಿರುದ್ಧವೇ ಪ್ರಕರಣ ದಾಖಲಿಸಿದ್ದರು’ ಎಂದರು.

ಜೆಡಿಎಸ್ ಮುಖಂಡ ಪ್ರಕಾಶ್ ಮಾತನಾಡಿ, ‘ಪುಟ್ಟಣ್ಣ ಅವರ ಸ್ವಾರ್ಥಕ್ಕಾಗಿ ಉಪ ಚುನಾವಣೆ ನಡೆಯುತ್ತಿದೆ. ತಮ್ಮನ್ನು ಸಾಕಿ, ಸಲಹಿದ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಸಾಮಾನ್ಯ ಶಿಕ್ಷಕರ ಪುಟ್ಟಣ್ಣ ಈಗ ಆಗರ್ಭ ಶ್ರೀಮಂತನಾಗಿದ್ದಾರೆ. ಚುನಾವಣೆಯಲ್ಲಿ ಅವರನ್ನು ಸೋಲಿಸಿ ಪಾಠ ಕಲಿಸಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಸ್ವಾಮಿ, ‘ಮೈತ್ರಿ ಅಭ್ಯರ್ಥಿಯಾಗಿರುವ ರಂಗನಾಥ್ ಅವರ ಗೆಲುವಿಗಾಗಿ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಶಿಕ್ಷಕರ ಜೊತೆ ಸಭೆ ಮಾಡಬೇಕು’ ಎಂದು ಸಲಹೆ ನೀಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ನರಸಿಂಹಮೂರ್ತಿ, ರೈಡ್ ನಾಗರಾಜ್, ಶಿವಲಿಂಗಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ರುದ್ರದೇವರು, ಪಿ. ಶಿವಾನಂದ, ಗೋಪಾಲ್, ನಾಗೇಶ್, ಪದ್ಮನಾಭ, ಅಶ್ವತ್ಥ, ಕಾಳಯ್ಯ ಇದ್ದರು.

‘ಆಂಧ್ರ ಶಿಕ್ಷಣ ಸಂಸ್ಥೆಗಳ ಪಿಆರ್‌ಒ ಪುಟ್ಟಣ್ಣ’

‘ಪುಟ್ಟಣ್ಣ ಅವರು ಆಂಧ್ರಪ್ರದೇಶ ಮೂಲದವರು ನಡೆಸುವ ಶಿಕ್ಷಣ ಸಂಸ್ಥೆಗಳ ಪಿಆರ್‌ಒ ಆಗಿದ್ದಾರೆ. ಅವರಿಗೆ ಸ್ಥಳೀಯರ ಶಿಕ್ಷಣ ಸಂಸ್ಥೆಗಳು ಬೇಕಿಲ್ಲ. ಪುಟ್ಟಣ್ಣ ಅವರು ಮತಕ್ಕಾಗಿ ₹15 ಸಾವಿರದಿಂದ ₹20 ಸಾವಿರ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಿಆರ್‌ಒ ಕೆಲಸ ಮಾಡುವವರು ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ಈ ಸಲ ಅವರ ಹಣ ಬಲ ಕೆಲಸ ಮಾಡುವುದಿಲ್ಲ. ಸೋಲಿನ ಭಯದಿಂದಾಗಿ ನನ್ನ ಹೆಸರಿನ ಮೂವರು ಅಭ್ಯರ್ಥಿಗಳನ್ನು ಅವರೇ ನಿಲ್ಲಿಸಿದ್ದಾರೆ. ಇಷ್ಟಕ್ಕೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವ ಇತಿಹಾಸವಿಲ್ಲ. ಇದೀಗ ಜೆಡಿಎಸ್–ಬಿಜೆಪಿ ಮೈತ್ರಿಯಾಗಿರುವುದು ನನ್ನ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ’ ಎಂದು ರಂಗನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT