ಬುಧವಾರ, ಸೆಪ್ಟೆಂಬರ್ 22, 2021
27 °C
ರಾಸಾಯನಿಕ ಬಳಕೆ: ಜನರ ಜೀವಕ್ಕೆ ಸಂಚಕಾರ

ಕೃತಕವಾಗಿ ಹಣ್ಣು ಮಾಗಿಸಲು ರಾಸಾಯನಿಕ; ಮಾವಿನ ಹಣ್ಣಿನಲ್ಲಿದೆ ವಿಷಕಾರಿ ಕಾರ್ಬೈಡ್‌!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನೀವು ರುಚಿಯೆಂದು ತಿನ್ನುವ ಮಾವು ಎಷ್ಟು ಪರಿಶುದ್ಧ? ಅದರಲ್ಲೂ ಯಥೇಚ್ಛ ಪ್ರಮಾಣದ ರಾಸಾಯನಿಕ ಬೆರೆತಿದ್ದು, ಕ್ಯಾನ್ಸರ್‌ ಕೂಡ ತರಬಲ್ಲದು ಎಂಬುದು ಗೊತ್ತೇ?

ಹೌದು. ಮಾವನ್ನು ಹಣ್ಣಾಗಿ ಮಾಗಿಸುವ ಸಲುವಾಗಿ ಕ್ಯಾಲ್ಸಿಯಂ ಕಾರ್ಬೈಡ್‌ ಮೊದಲಾದವುಗಳ ಬಳಕೆ ಯಥೇಚ್ಛವಾಗಿ ನಡೆದಿದ್ದು, ಇದರಿಂದ ರಾಸಾಯನಿಕ ವಿಷವು ನೇರವಾಗಿ ಗ್ರಾಹಕರ ಉದರ ಸೇರುತ್ತಿದೆ. ಸರ್ಕಾರ ಈ ರಾಸಾಯನಿಕಗಳ ಬಳಕೆ ಮೇಲೆ ನಿಷೇಧ ಹೇರಿದ್ದರೂ ಮಾರುಕಟ್ಟೆಯಲ್ಲಿ ಈ ತಂತ್ರ ನಡೆದೇ ಇದೆ.

ಬೆಲೆ ಕಾರಣ: ಮಾವು ಋತುವಿನ ಆರಂಭದಲ್ಲಿ ಹಣ್ಣಿನ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ಕೆಲವು ವರ್ತಕರು ಲಾಭ ಗಳಿಕೆಯ ಸಲುವಾಗಿ ಕಾಯಿಯನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡುತ್ತಾರೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹಣ್ಣಿನ ಬೆಲೆ ₨150–200ರವರೆಗೂ ಇರುತ್ತದೆ. ಮಾವು ಋತುವಿನ ಅಂತ್ಯಕ್ಕೆ ಇದು ₨80–100ಕ್ಕೆ ಇಳಿಯುತ್ತದೆ. ಹೀಗಾಗಿ ಮೊದಲೇ ಲಾಭದ ಆಸೆಗೆ ಕಾಯಿಯ ಹಂತದಲ್ಲಿಯೇ ಮಾವನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡಲಾಗುತ್ತಿದೆ. ಹೀಗೆ ಮಾಡಲು ಕಾರ್ಬೈಡ್‌ ಅನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ಕಾಯನ್ನು ಕೃತಕವಾಗಿ ಮಾಗಿಸಿ ಅದಕ್ಕೆ ಬಣ್ಣ ನೀಡುತ್ತದೆ. ಇದರೊಟ್ಟಿಗೆ ಹಣ್ಣಿನಲ್ಲಿ ವಿಷಕಾರಿ ಅಂಶವೂ ಸೇರ್ಪಡೆ ಆಗುತ್ತದೆ ಎಂದು ವಿವರಿಸುತ್ತಾರೆ ಮಾರುಕಟ್ಟೆ ತಜ್ಞರು.

ತೊಂದರೆ ಏನು?: ಕಾರ್ಬೈಡ್‌ಯುಕ್ತ ಹಣ್ಣನ್ನು ನೇರವಾಗಿ ಸೇವನೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ಸಮಸ್ಯೆಗಳಾದ ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲೀನ ಸಮಸ್ಯೆಗಳಿಗೂ ಈ ರಾಸಾಯನಿಕ ಕಾರಣವಾಗಬಹುದು. ಅದರಲ್ಲೂ ಕ್ಯಾನ್ಸರ್‌ನಂತಹ ಮಹಾಮಾರಿ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು.

ಈ ರಾಸಾಯನಿಕವನ್ನು ಮಕ್ಕಳು, ದೊಡ್ಡವರು ನೇರವಾಗಿ ಸೇವಿಸಿದಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಮಕ್ಕಳಿಗೆ ಇದರ ಗಾಳಿ ಸೋಕದಂತೆ ಎಚ್ಚರ ವಹಿಸಬೇಕು ಎನ್ನುವುದು ಅವರ ವಿವರಣೆ.

ಕ್ರಮ ಕೈಗೊಳ್ಳಿ: ಕಾರ್ಬೈಡ್‌ ಮಾರಾಟಕ್ಕೆ ಸರ್ಕಾರ ನಿಷೇಧ ಹೇರಿದೆ. ಆದಾಗ್ಯೂ ರಾಮನಗರದ ಕೆಲವು ಗೊಬ್ಬರ ಮತ್ತು ರಾಸಾಯನಿಕ ಮಾರಾಟ ಅಂಗಡಿಗಳಲ್ಲಿ ಈಗಲೂ ಇದರ ಮಾರಾಟ ನಡೆದಿದೆ. ಹಣ ತೆತ್ತು ಈ ಬಿಳಿ ವಿಷವನ್ನು ಕೊಂಡೊಯ್ಡು ಹಣ್ಣು ಮಾಗಿಸಲಾಗುತ್ತಿದೆ.

‘ ಸಾಮಾನ್ಯ ರೈತರು ಕಾರ್ಬೈಡ್‌ ಬಳಸುವುದು ಕಡಿಮೆ. ವರ್ತಕರಲ್ಲಿ ಈ ಪ್ರವೃತ್ತಿ ಹೆಚ್ಚಿದೆ. ವಿಷಯುಕ್ತ ರಾಸಾಯನಿಕವು ರೈತರು ಹಾಗೂ ವರ್ತಕರಿಗೆ ಸುಲಭವಾಗಿ ಸಿಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಗೊಬ್ಬರದ ಅಂಗಡಿಗಳಲ್ಲಿ ಇದು ಮಾರಾಟ ಆಗದಂತೆ ಕ್ರಮ ಜರುಗಿಸಬೇಕು. ಮಾರುವವರಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು’ ಎನ್ನುತ್ತಾರೆ ರಾಮನಗರದ ಮಾವು ಬೆಳೆಗಾರ ಶಂಕರ್.

ಏನಿದು ಕಾರ್ಬೈಡ್‌

ಕ್ಯಾಲ್ಸಿಯಂ ಕಾರ್ಬೈಡ್‌ (CaC2) ಮಾರುಕಟ್ಟೆಯ ವರ್ತಕರು, ರೈತರಿಗೆ ಕಾರ್ಬೈಡ್‌ ಎಂದೇ ಪರಿಚಿತ. ಹಣ್ಣಿನ ವ್ಯಾಪಾರಿಗಳಿಗೆ ಇದರ ಪರಿಚಯ ಇದ್ದೇ ಇರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಮಾವು, ಬಾಳೆ, ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಇದನ್ನು ಬಳಸಲಾಗುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳು ಇದರ ಬಳಕೆಗೆ ನಿಷೇಧ ಹೇರಿವೆ. ಆದರೆ ಮಾರುಕಟ್ಟೆಯಲ್ಲಿ ಇಂದಿಗೂ ಮುಕ್ತವಾಗಿ, ಚಿಲ್ಲರೆ ರೂಪದಲ್ಲಿ ಇದರ ಮಾರಾಟ ನಡೆದಿದೆ.

ಈ ಕಾರ್ಬೈಡ್‌ ಆರ್ಸೆನಿಕ್‌ ಮತ್ತು ಫಾಸ್ಪರಸ್‌ನಂತಹ ರಾಸಾಯನಿಕಗಳನ್ನು ಒಳಗೊಂಡಿದ್ದು, ಇವು ಮಾನವ ದೇಹದ ಅಂಗಾಂಗಳಿಗೆ ಸಂಚಕಾರ ತರಬಲ್ಲವು. ಮುಖ್ಯವಾಗಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ತಂದೊಡ್ಡಬಲ್ಲವು ಎಂಬುದನ್ನು ಈಚಿನ ವೈಜ್ಞಾನಿಕ ಸಂಶೋಧನೆಗಳು ನಿರೂಪಿಸಿವೆ.

ಪರ್ಯಾಯ ಏನು?

ಹಣ್ಣನ್ನು ಮಾಗಿಸಲು ನೈಸರ್ಗಿಕವಾದ ಹಲವು ವಿಧಾನಗಳಿದ್ದು, ಅದನ್ನು ಅನುಸರಿಸಬೇಕು. ಯಥಿಲೀನ್‌ ಮೊದಲಾದ ಹಾನಿಕಾರಕವಲ್ಲದ ದ್ರಾವಣಗಳನ್ನು ಬಳಸಿ ಹಣ್ಣನ್ನು ಮಾಗಿಸಬಹುದು. ಇದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಯಾವುದೇ ಹಣ್ಣಿನಲ್ಲಿ ಅದನ್ನು ಬಳಸುವ ಮುನ್ನ ನೀರಿನಲ್ಲಿ ಒಂದೆರಡು ನಿಮಿಷ ನೆನೆಯಿಸಿ, ಚೆನ್ನಾಗಿ ತೊಳೆದ ಬಳಿಕವಷ್ಟೇ ತಿನ್ನಬೇಕು ಎನ್ನುವುದು ವೈದ್ಯರು ಹಾಗೂ ತೋಟಗಾರಿಕೆ ವಿಜ್ಞಾನಿಗಳ ಸಲಹೆ.

ರಾಸಾಯನಿಕ ಮುಕ್ತ ಮಾವು ಮಾರಾಟ

ತೋಟಗಾರಿಕೆ ಇಲಾಖೆ ಮತ್ತು ಮಾವು ಅಭಿವೃದ್ಧಿ ಮಂಡಳಿಯು ಮಾವು ಮೇಳಗಳ ಮೂಲಕ ರಾಸಾಯನಿಕ ಮುಕ್ತ ಮಾವು ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ.

ಮಾವು ಮೇಳಗಳಲ್ಲಿ ಕಾರ್ಬೈಡ್‌ ಬಳಸಿ ಮಾಗಿಸಿದ ಹಣ್ಣುಗಳ ಮಾರಾಟ ನಿಷೇಧಿಸಲಾಗಿದೆ. ನೈಸರ್ಗಿಕವಾಗಿ ಮಾಗಿಸಿದ ಇಲ್ಲವೇ ಯಥಿಲಿನ್‌ ಮೊದಲಾದ ಅಂಗೀಕೃತ ರಾಸಾಯನಿಕ ಬಳಸಿದ ಹಣ್ಣುಗಳನ್ನು ಮಾರಾಟ ಮಾಡಬಹುದಾಗಿದೆ. ಇದೇ 10ರಿಂದ ಜಾನಪದ ಲೋಕದ ಆವರಣದಲ್ಲಿ ಮಾವು ಮೇಳ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

* ‌ಲಾಭ ಗಳಿಕೆಗೆ ಕೆಲವು ವರ್ತಕರು ಮಾತ್ರ ಹಣ್ಣು ಮಾಗಿಸಲು ಕಾರ್ಬೈಡ್ ಬಳಸುತ್ತಿದ್ದಾರೆ. ಅಂತಹ ಪ್ರಕರಣ ಕಂಡುಬಂದಲ್ಲಿ ದಂಡ ವಿಧಿಸಿ ಎಚ್ಚರಿಸಲಾಗುವುದು
–ಗುಣವಂತ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು