ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕ್ರಾಂತಿ ನಂತರ ಸಂಪುಟ, ಪಕ್ಷ ಎರಡರಲ್ಲೂ ಬದಲಾವಣೆ ನಿರೀಕ್ಷೆ: ಸಿ.ಪಿ ಯೋಗೇಶ್ವರ್‌

Last Updated 15 ಜನವರಿ 2023, 13:28 IST
ಅಕ್ಷರ ಗಾತ್ರ

ರಾಮನಗರ: ಸಂಕ್ರಾಂತಿ ನಂತರ ರಾಜ್ಯ ಸಚಿವ ಸಂಪುಟ ಹಾಗೂ ಪಕ್ಷ ಎರಡರಲ್ಲೂ ಕೊಂಚ ಬದಲಾವಣೆಯ ನಿರೀಕ್ಷೆ ಇದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ಧಾರವೇ ಅಂತಿಮ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.

ರಾಮನಗರದಲ್ಲಿ ಭಾನುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ ಮುಖ್ಯಮಂತ್ರಿ ಅವರಿಗೂ ಸಂಪುಟ ವಿಸ್ತರಣೆಯ ಆಸೆ ಇದೆ. ಈಗಿನ ಸಂಪುಟ ಪರಿ‍ಪೂರ್ಣವಾಗಿಲ್ಲ ಎಂಬುದೂ ಅವರಿಗೆ ಗೊತ್ತಿದೆ. ಈ ವಿಚಾರದಲ್ಲಿ ಅಂತಿಮ ಪ್ರಯತ್ನ ನಡೆಯುತ್ತಿದೆ. ಮುಂದಿನದ್ದು ವರಿಷ್ಠರಿಗೆ ಬಿಟ್ಟ ತೀರ್ಮಾನ’ ಎಂದರು.

ಹಳೇ ಮೈಸೂರು ಭಾಗದಲ್ಲಿ ಇಷ್ಟು ವರ್ಷ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಕ್ಷಕ್ಕೆ ಹಿನ್ನಡೆ ಆಗಿತ್ತು. ಇದೆಲ್ಲ ಪಕ್ಷದ ವರಿಷ್ಠರ ಗಮನಕ್ಕೆ ಹೋಗಿದೆ. ಬೆಂಗಳೂರು ಸುತ್ತಮುತ್ತ ಯಾಕೆ ಬಿಜೆಪಿ ಬೆಳೆದಿಲ್ಲ ಎಂಬುದರ ಅರಿತು ಪಕ್ಷಕ್ಕೆ ಗೊತ್ತಾಗಿದೆ. ಹೊಂದಾಣಿಕೆ ರಾಜಕೀಯದ ಕುರಿತು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ಸದ್ಯ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದರು.

ರಾಮನಗರವನ್ನೂ ಸ್ಪರ್ಧಾತ್ಮಕವಾಗಿ ತೆಗೆದುಕೊಂಡಿದ್ದೇವೆ. ಜಿಲ್ಲೆಯಲ್ಲಿ ‌ಮೂರು ಸ್ಥಾನಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ.
ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಈ ಭಾಗದ ಮುಖಂಡರೆಲ್ಲ ಮನವಿ ಮಾಡಿದ್ದೇವೆ. ಇನ್ನೇನು ತೀರ್ಮಾನ ಮಾಡಲಾಗುತ್ತದೆ. ಸುಮಲತಾ ಅವರಿಗೂ ಮನವಿ ಮಾಡಿದ್ದೇವೆ ಎಂದರು.

ಅಧಿಕೃತವಾಗಿ ಮಾತನಾಡಿಲ್ಲ

ತಮ್ಮ ಆಡಿಯೊ ಬಹಿರಂಗ ವಿಚಾರವಾಗಿ ಪ್ರತಿಕ್ರಿಯಿಸಿದ ಯೋಗೇಶ್ವರ್ ‘ ನಾನು ಅಧಿಕೃತವಾಗಿ ಎಲ್ಲೂ ಮಾತನಾಡಿಲ್ಲ. ಖಾಸಗಿಯಾಗಿ ಮಾತನಾಡಿರುವ ವಿಚಾರ ಇರಬಹುದು. ವೈಯಕ್ತಿಕವಾಗಿ, ಸ್ವಾಭಾವಿಕವಾಗಿ ಮಾತನಾಡಿರೋದನ್ನು ಮಾಧ್ಯಮಗಳು ಬಿತ್ತರಿಸಿವೆ’ ಎಂದು ಸ್ಪಷ್ಟನೆ ನೀಡಿದರು.

ಕುಮಾರಸ್ವಾಮಿ ವಲಸೆ ಹಕ್ಕಿ

‘ ಎಚ್‌.ಡಿ. ಕುಮಾರಸ್ವಾಮಿ ಒಂದು ರೀತಿ ವಲಸೆ ಹಕ್ಕಿ ಇದ್ದ ಹಾಗೆ. ಅವರಿಗೆ ಪರ್ಮನೆಂಟ್ ಕ್ಷೇತ್ರ ಅಂತ ಯಾವುದು ಇಲ್ಲ. ಅವರು ಕಮಿಟ್ಮೆಂಟ್ ರಾಜಕಾರಣ ಮಾಡುವುದಿಲ್ಲ. ಅವರು ಚುನಾವಣೆ ವೇಳೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾರೆ. ಈ ಹಿಂದೆ ಸಾತನೂರು, ಕನಕಪುರ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾಳೆ ಬೇಕಿದ್ದರೆ ಮಂಡ್ಯದಲ್ಲೂ ಸ್ಪರ್ಧೆ ಮಾಡುತ್ತಾರೆ. ರಾಮನಗರದಲ್ಲಿ ಮಗನನ್ನು ಬೆಳೆಸಬೇಕು ಎಂದು ಚನ್ನಪಟ್ಟಣಕ್ಕೆ ಬಂದಿದ್ದಾರೆ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT