ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಉಪ ಚುನಾವಣಾ ಕಣದಲ್ಲಿ ‘ಗಣೇಶ’ ರಾಜಕಾರಣ!

ಮತದಾರರ ಓಲೈಕೆಗೆ ಸಾವಿರಾರು ಉಚಿತ ಮೂರ್ತಿ ವಿತರಣೆ; ನೋಂದಣಿ ಆರಂಭ
Published : 1 ಸೆಪ್ಟೆಂಬರ್ 2024, 4:33 IST
Last Updated : 1 ಸೆಪ್ಟೆಂಬರ್ 2024, 4:33 IST
ಫಾಲೋ ಮಾಡಿ
Comments

ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆ ಕಣದಲ್ಲಿ ಗಣೇಶನ ರಾಜಕಾರಣ ಆರಂಭವಾಗಿದೆ!

ಉಪ ಚುನಾವಣೆಗೂ ಮುನ್ನವೇ ಹತ್ತು, ಹಲವು ಗಿಮಿಕ್‌ಗಳಿಗೆ ಸಾಕ್ಷಿಯಾಗುತ್ತಿರುವ ಚನ್ನಪಟ್ಟಣದ ಮತದಾರರ ಓಲೈಕೆಗೆ ಮೂರು ಪ್ರಮುಖ ಪಕ್ಷಗಳ ನಾಯಕರು ಮತದಾರರ ಹಲವು ಮಾರ್ಗ ಕಂಡುಕೊಂಡಿದ್ದಾರೆ. 

ಒಂದೆಡೆ ಕಾಂಗ್ರೆಸ್ ಪಕ್ಷ ಜನಸ್ಪಂದನ, ಉದ್ಯೋಗ ಮೇಳದ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿದ್ದರೆ, ಮೈತ್ರಿ ಟಿಕೆಟ್ ಆಕಾಂಕ್ಷಿಗಳಾದ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್‌ನ ಎಚ್.ಸಿ. ಜಯಮುತ್ತು ಗೌರಿ ಗಣೇಶ ಹಬ್ಬಕ್ಕೆ ಸಾವಿರಾರು ಗಣೇಶ ಮೂರ್ತಿ ಹಂಚಲು ಮುಂದಾಗಿದ್ದಾರೆ.

ಪಕ್ಷದ ಟಿಕೆಟ್‌ ಸಿಕ್ಕರೂ ಸರಿಯೇ, ಸಿಗದಿದ್ದರೂ ಸರಿಯೇ ಚುನಾವಣೆಗೆ ಸ್ಪರ್ಧಿಸಿಯೇ ತೀರುತ್ತೇನೆ ಎಂದು ತೊಡೆ ತಟ್ಟಿರುವ ಯೋಗೇಶ್ವರ್  ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಳ್ಳಲು ಬೇಕಾದ ಎಲ್ಲಾ ಮಾರ್ಗ ಅನುಸರಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದಂದು ಸಾವಿರ ಗಣೇಶ ಮೂರ್ತಿ ಹಂಚಲು ಮುಂದಾಗಿದ್ದಾರೆ.

ಎರಡು ಬಾರಿ ಗೆದ್ದಿರುವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರವನ್ನು ಜೆಡಿಎಸ್‌ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯತ್ತಾರೆ ಎಂಬ ಸುದ್ದಿ ಇದೆ. ನಿಖಿಲ್ ಕಣಕ್ಕಿಳಿಯದಿದ್ದರೆ ತಮಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಜಯಮುತ್ತು ಇದ್ದಾರೆ.

ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿರುವ ಜಯಮುತ್ತು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ವರ್ಷ 1001 ಗಣೇಶ ಮೂರ್ತಿಗಳನ್ನು ಹಂಚಲು ನೋಂದಣಿ ಆರಂಭಿಸಿದ್ದಾರೆ.

ಜಯಮುತ್ತು ಉಚಿತವಾಗಿ ಗಣೇಶ ಮೂರ್ತಿ ಹಂಚಿಕೆಗೆ ಪ್ರಕಟಣೆ ಹೊರಡಿಸಿದ್ದೆ ತಡ ಯೋಗೇಶ್ವರ್ ಸಹ ಸಾವಿರ ಗಣೇಶ ಮೂರ್ತಿ ಹಂಚಿಕೆಗೆ ಪ್ರಕಟಣೆ ಹೊರಡಿಸಿ, ನೋಂದಣಿ ಆರಂಭಿಸಿದ್ದಾರೆ.

ಯೋಗೇಶ್ವರ್ ಅವರು 2022ರಲ್ಲಿ ಒಮ್ಮೆ 500ಕ್ಕೂ ಹೆಚ್ಚು ಗಣೇಶ ಮೂರ್ತಿ ಹಂಚಿದ್ದರು. ಆದರೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋಲುಂಡ ಬಳಿಕ ಗಣೇಶ ಉತ್ಸವ ಬಂದ ಕಾರಣ ಆ ವರ್ಷ ಮೂರ್ತಿ ಹಂಚಿರಲಿಲ್ಲ.  

ಈ ಇಬ್ಬರೂ ಸೇರಿ ತಾಲ್ಲೂಕಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಘ, ಸಂಸ್ಥೆಗಳು ಪ್ರತಿಷ್ಠಾಪಿಸಲು ಒಟ್ಟು 2001 ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದಾರೆ. ತಾಲ್ಲೂಕಿನ ಪ್ರಮುಖ ಪಟ್ಟಣ  ಹಾಗೂ ಸಣ್ಣ ಪುಟ್ಟ ಗ್ರಾಮ ಸೇರಿಸಿದರೂ ಒಟ್ಟು 300 ಗಣೇಶ ಮೂರ್ತಿಗಳು ಸಾಕಾಗುತ್ತಿದ್ದವು.

ಎಚ್.ಸಿ. ಜಯಮುತ್ತು ಗಣೇಶಮೂರ್ತಿ ಹಂಚಿಕೆಗೆ ಹೊರಡಿಸಿರುವ ಪ್ರಕಟಣೆ
ಎಚ್.ಸಿ. ಜಯಮುತ್ತು ಗಣೇಶಮೂರ್ತಿ ಹಂಚಿಕೆಗೆ ಹೊರಡಿಸಿರುವ ಪ್ರಕಟಣೆ

ಈ ಬಾರಿ 2001 ಗಣೇಶ ಮೂರ್ತಿ ಉಚಿತವಾಗಿ ಸಿಗುತ್ತಿರುವ ಕಾರಣ ತಾಲ್ಲೂಕಿನ ಗಲ್ಲಿ,ಗಲ್ಲಿಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ಯುವಕರು ಮುಂದಾಗುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT