ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಆನ್‌ಲೈನ್‌ ಸಾಲದ ಹೆಸರಲ್ಲಿ ರೈತನಿಗೆ ವಂಚನೆ

ಪ್ರಕ್ರಿಯೆ ಶುಲ್ಕದ ಹೆಸರಿನಲ್ಲಿ ₹84 ಸಾವಿರ ವರ್ಗಾಯಿಸಿಕೊಂಡು ಮೋಸ
Published 2 ಮೇ 2024, 14:09 IST
Last Updated 2 ಮೇ 2024, 14:09 IST
ಅಕ್ಷರ ಗಾತ್ರ

ರಾಮನಗರ: ಆನ್‌ಲೈನ್‌ನಲ್ಲಿ ಸಾಲ ನೀಡುವುದಾಗಿ ರೈತರೊಬ್ಬರಿಗೆ ಕರೆ ಮಾಡಿದ ಅಪರಿಚಿತ, ಪ್ರಕ್ರಿಯೆ ಶುಲ್ಕದ ಹೆಸರಲ್ಲಿ ₹ 84 ಸಾವಿರ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.

ಚನ್ನಪಟ್ಟಣದ ಅರುಣ್‌ ವಂಚನೆಗೊಳಗಾದವರು. ಇಂಡಿಯಾ ಬುಲ್ಸ್ ಧನಿ ಲೋನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಕಂಪನಿಯಿಂದ ₹ 5 ಲಕ್ಷದವರೆಗೆ ಸಾಲ ನೀಡಲಾಗುವುದು, ಅಗತ್ಯವಿದ್ದರೆ ಪಡೆಯಬಹುದು ಎಂದು ಹೇಳಿದ್ದಾರೆ. ಹಣದ ಅವಶ್ಯಕತೆ ಇದ್ದಿದ್ದರಿಂದ ಅರುಣ್ ₹ 5 ಲಕ್ಷ ಸಾಲ ಪಡೆಯಲು ಮುಂದಾಗಿದ್ದಾರೆ.

ಸಾಲ ಬಿಡುಗಡೆಗಾಗಿ ಅರುಣ್ ಅವರಿಂದ ಆಧಾರ್ ಕಾರ್ಡ್, ‍ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಭಾವಚಿತ್ರಗಳನ್ನು ಅಪರಿಚಿತ ಪಡೆದಿದ್ದಾನೆ. ನಂತರ ಪ್ರಕ್ರಿಯೆ ಶುಲ್ಕವಾಗಿ ಮೊದಲಿಗೆ ₹ 3,200‌, ಟಿಡಿಎಸ್ ಶುಲ್ಕದ ಹೆಸರಲ್ಲಿ ₹ 7,850, ಆರ್‌ಟಿಜಿಎಸ್ ಶುಲ್ಕ ₹ 16,100 ಸೇರಿದಂತೆ ವಿವಿಧ ಶುಲ್ಕಗಳ ಹೆಸರಿನಲ್ಲಿ ₹ 84,264 ವಸೂಲಿ ಮಾಡಿದ್ದಾನೆ.

ಆತ ಹೇಳಿದಂತೆ ಅರುಣ್ ಅವರು ಹಣ ವರ್ಗಾವಣೆ ಆ್ಯಪ್‌ ಮೂಲಕ ಹಣ ಪಾವತಿಸಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಸಾಲವನ್ನೂ ಕೊಡದೆ, ಇವರಿಂದ ಪಡೆದ ಹಣವನ್ನು ಸಹ ಹಿಂದಿರುಗಿಸದೆ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಬದಿ ಸವಾರ ಸಾವು

ತಾಲ್ಲೂಕಿನ ಮಾಯಗಾನಹಳ್ಳಿ ಬಳಿಯ ಬೆಂಗಳೂರು–ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಹಿಂಬದಿ ಸವಾರ ಮೃತಪಟ್ಟಿದ್ದು, ಸವಾರ ಗಾಯಗೊಂಡಿದ್ದಾನೆ. ರಾಮನಗರದ ಯಾರಬ್‌ನಗರದ ನವೀದ್ ಖಾನ್ (22) ಮೃತಪಟ್ಟಿದ್ದು, ತೌಸಿಫ್ ಪಾಷಾ ಅವರಿಗೆ ಕಾಲು ಮತ್ತು ಕೈಗೆ ಗಾಯಗಳಾಗಿವೆ.

ಕುಂಬಳಗೋಡಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರೂ ಬೆಳಿಗ್ಗೆ 9.30ರ ಸುಮಾರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಮಾಯಗಾನಹಳ್ಳಿಯ ಚಾಮುಂಡೇಶ್ವರಿ ನರ್ಸರಿ ಬಳಿ ಸರ್ವೀಸ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಚಾಲಕ, ಬೈಕ್‌ಗೆ ಗುದ್ದಿ ನಿಲ್ಲಿಸದೆ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ನವೀದ್ ಅವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ತೌಸಿಫ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಕೊಂಡು ಕಾರು ಮತ್ತು ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ಕಂಟೇನರ್ ಡಿಕ್ಕಿ: ಸಾವು

ನೈಸ್ ರಸ್ತೆ ಬಳಿ ದ್ವಿಚಕ್ರ ವಾಹನಕ್ಕೆ ಕಂಟೇನರ್ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟರ್ ಸವಾರ ಮೋಹನ್ ಎನ್. (57) ಬುಧವಾರ ಮೃತಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾತಗುಣಿ ನಿವಾಸಿಯಾದ ಮೋಹನ್ ಅವರು ಕಾರ್ಯನಿಮಿತ್ತ ಕಾಮಾಕ್ಷಿಪಾಳ್ಯಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ಹೇಳಿ ಬೆಳಿಗ್ಗೆ ಹೊರಟ್ಟಿದ್ದರು.

ಸ್ಕೂಟರ್‌ನಲ್ಲಿ ಮುಂದೆ ಹೋಗುತ್ತಿದ್ದ ಮೋಹನ್ ಅವರಿಗೆ ಹಿಂದಿನಿಂದ ವೇಗವಾಗಿ ಬಂದ ಕಂಟೈನರ್ ಡಿಕ್ಕಿ ಹೊಡಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರು. ಮೋಹನ್ ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರಿದ್ದಾರೆ. ಘಟನೆ ಕುರಿತು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT