ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ರೇಷ್ಮೆ ಬೆಳೆಗಾರರಿಂದ ಉಪವಾಸ, ಒಂದು ವಾರದ ಗಡುವು; ಪ್ರತಿಭಟನೆ ಹಿಂದಕ್ಕೆ

Last Updated 15 ಜುಲೈ 2020, 16:44 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹವು ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಮುಂಭಾಗ ಬುಧವಾರ ನಡೆಯಿತು.

ಮಾರುಕಟ್ಟೆಯ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಶಾಮಿಯಾನ ಹಾಕಿ ಕುಳಿತ ಸತ್ಯಾಗ್ರಹಿಗಳು ಸಂಕಷ್ಟದ ಈ ಸಮಯದಲ್ಲಿ ರಾಜ್ಯ ಸರ್ಕಾರವು ಬೆಳೆಗಾರರ ಹಿತರಕ್ಷಣೆಗೆ ಧಾವಿಸಬೇಕು. ಈ ಮೂಲಕ ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಮಾತನಾಡಿ "ಕೊರೊನಾ ಹಾವಳಿಯಿಂದಾಗಿ ರೇಷ್ಮೆ ಕೃಷಿ ಮತ್ತು ಅದರ ಉತ್ಪಾದನೆಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಲಾಕ್‌ಡೌನ್ ಗೆ ಮುನ್ನ ಪ್ರತಿ ಕೆ.ಜಿ. ಗೂಡಿಗೆ ₨500-600 ಬೆಲೆ ಸಿಗುತ್ತಿತ್ತು. ಆದರೆ ಇಂದುಗೂಡಿನ ಧಾರಣೆಯು ಹಿಂದೆಂದಿಗಿಂತ ಕನಿಷ್ಠ ದರಕ್ಕೆ ಕುಸಿಯುತ್ತಿದೆ. ರಾಜ್ಯ ಸರ್ಕಾರ ಹಾಗೂ ಸಚಿವರ ಗಮನಕ್ಕೆ ಈ ವಿಷಯವನ್ನು ತಂದಿದ್ದರೂ ಆಶ್ವಾಸನೆ ಹೊರತಾಗಿ ಯಾವ ಪ್ರಯೋಜನವೂ ಆಗಿಲ್ಲ. ಇದರಿಂದಾಗಿ ಸಾಕಷ್ಟು ರೈತರು ಹೊಲಗಳಲ್ಲಿನ ರೇಷ್ಮೆ ಕಡ್ಡಿಗಳನ್ನೇ ಕೀಳಿಸುತ್ತಿದ್ದಾರೆ. ಈ ಕೃಷಿ ಉಳಿಯಬೇಕಾದರೆ ಸರ್ಕಾರವು ಉಳಿದ ಕ್ಷೇತ್ರಗಳಿಗೆ ಘೋಷಿಸಿದಂತೆ ರೇಷ್ಮೆ ಉತ್ಪಾದನಾ ವಲಯಕ್ಕೂ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಚಾಕಿ ಸಾಕಣೆ ಕೇಂದ್ರದ ಮಾಲೀಕ ಕೀರಣಗೆರೆ ಜಗದೀಶ್‌ ಮಾತನಾಡಿ "ರೇಷ್ಮೆ ಬೆಳೆಗಾರರಿಗೆ ರಕ್ಷಣಾತ್ಮಕ ದರ ನೀಡುವುದಾಗಿ ಸಚಿವರು, ಅಧಿಕಾರಿಗಳೂ ಹೇಳುತ್ತಾರೆ. ಆದರೆ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನ ಇಲ್ಲ. ಕೆಲವರಿಗೆ ಪ್ರತಿ ಕೆ.ಜಿ. ಗೂಡಿಗೆ ₨5-10 ಮಾತ್ರ ಸಿಗುತ್ತದೆ. ಇದರ ಬದಲಾಗಿ ಗೂಡಿಗೆ ಈ ಹಿಂದೆ ಸಂಕಷ್ಟದ ಸಂದರ್ಭಗಳಲ್ಲಿ ನೀಡಿದಂತೆ ಪ್ರೋತ್ಸಾಹ ಧನ ನೀಡಬೇಕು. ಇದರಿಂದ ಸಂಕಷ್ಟದಲ್ಲಿ ಇರುವ ಪ್ರತಿ ರೈತನಿಗೂ ಅಲ್ಪ ನೆರವು ತಲುಪುತ್ತದೆ’ ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಣಸ್ವಾಮಿ ಹಾಗೂ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗೌತಮ್‌ ಗೌಡ ಮಾತನಾಡಿ "ರೇಷ್ಮೆ ವಲಯವು ಹಿಂದೆಂದೂ ಕಾಣದಂತಹ ಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ಈ ಹೊತ್ತಿನಲ್ಲಿ ಸರ್ಕಾರವು ಬೆಳೆಗಾರರಿಗೆ ಪ್ರತಿ ಕೆ.ಜಿ. ಗೂಡಿಗೆ ಕನಿಷ್ಠ 100 ಪ್ರೋತ್ಸಾಹ ಧನ ನೀಡಬೇಕು. ಸರ್ಕಾರವು ಈ ಹಿಂದೆ ರಚಿಸಿದ್ದ ಬಸವರಾಜು ಸಮಿತಿಯು ನೀಡಿರುವ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತಂದು ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಂದ್ರ, ಮಂಡ್ಯ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಶಿವಕುಮಾರ್‌, ಹಿತರಕ್ಷಣಾ ಸಮಿತಿಯ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಅಪ್ಪಾಜಣ್ಣ, ಆನಂದ್‌, ರಾಮಕೃಷ್ಣ, ಗೋಪಾಲ್‌ ಹಾಗೂ ಬೆಳೆಗಾರರು ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಪ್ರಮುಖ ಬೇಡಿಕೆಗಳು

ಲಾಕ್‌ಡೌನ್‌ ನಿಂದ ಆಗಿರುವ ನಷ್ಟಕ್ಕೆ ಪ್ರತ್ಯೇಕ ಪರಿಹಾರ ಕೊಡಬೇಕು

ರೇಷ್ಮೆಗೂಡಿಗೆ ರಕ್ಷಣಾತ್ಮಕ ದರಕ್ಕೆ ಬದಲಾಗಿ ಪ್ರೋತ್ಸಾಹ ಧನ ನೀಡಬೇಕು

ಹಿಪ್ಪುನೇರಳೆ ಕೃಷಿಗೆ ಉತ್ತೇಜನ ಸಿಗಬೇಕು

ಶಾಸಕರು, ಅಧಿಕಾರಿಗಳಿಂದ ಮನವೊಲಿಕೆ

ಶಾಸಕ ಎ.ಮಂಜುನಾಥ್‌ ಹಾಗೂ ಮಾರುಕಟ್ಟೆಯ ಅಧಿಕಾರಿಗಳು ಸತ್ಯಾಗ್ರಹ ನಿರತ ರೈತರೊಂದಿಗೆ ಮಾತುಕತೆ ನಡೆಸಿ ಉಪವಾಸ ಕೈಬಿಡುವಂತೆ ಮನವೊಲಿಸಿದರು.

"ಸರ್ಕಾರ ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ರಕ್ಷಣಾತ್ಮಕ ದರಕ್ಕೆ ಬದಲಾಗಿ ಪ್ರೋತ್ಸಾಹ ಧನ ನೀಡಲು ಸಮ್ಮತಿಸಿದೆ. ಎಂತಹ ಸಂದರ್ಭದಲ್ಲೂ ನಾವು ರೈತರ ಪರ ನಿಲ್ಲುತ್ತೇವೆ’ ಎಂದು ಮಂಜುನಾಥ್‌ ಭರವಸೆ ನೀಡಿದರು. ಸರ್ಕಾರದ ಪ್ರತಿನಿಧಿಗಳಾಗಿ ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌ ಹಾಗೂ ಬಿಡದಿ ಸ್ಮಾರ್ಟ್‌‌ಸಿಟಿ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವರದರಾಜು ಗೌಡ ಸಹ ಮಾತುಕತೆಯಲ್ಲಿ ಪಾಲ್ಗೊಂಡರು. ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಕುಮಾರ್‌, ಮಾರುಕಟ್ಟೆ ಉಪನಿರ್ದೇಶಕ ಮುನ್ಶಿಬಸಯ್ಯ ಇದ್ದರು.

ಸರ್ಕಾರ ಒಂದು ವಾರದ ಒಳಗೆ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಗಡುವು ನೀಡಿದ ರೈತರು ಸತ್ಯಾಗ್ರಹವನ್ನು ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT