ಕುದೂರು: ‘ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ಲೋಕೇಶ್, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳ ಮೂಲಕ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಬಾಲರಾಜು ದೂರಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಡಿಒ ಲೋಕೇಶ್ ಗ್ರಾ.ಪಂ. ಹಾಗೂ ಇಲಾಖೆಯ ಹೆಸರಿನಲ್ಲಿ ರಸೀದಿಗಳನ್ನು ಸಿದ್ಧಪಡಿಸಿ, ಗ್ರಾಮದ 7ನೇ ವಾರ್ಡಿನ ದಿನೇಶ್ ಎಂಬುವರಿಂದ ₹ 1 ಲಕ್ಷ ವಸೂಲಿ ಮಾಡಿ, ನಂತರ ಆ ರಸೀದಿಗಳನ್ನು ಕಂಪ್ಯೂಟರ್‌ನಲ್ಲಿ ಡಿಲಿಟ್ ಮಾಡಿ, ಅದನ್ನು ಗ್ರಾಮ ಪಂಚಾಯಿತಿ ಖಾತೆಗೆ ಜಮಾವಣೆ ಮಾಡದೆ ವಂಚಿಸಿದ್ದಾರೆ. ಈ ಸಂಬಂಧ ಕುದೂರು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಸೇರಿ, ಆತನ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದೇವೆ’ ಎಂದು ತಿಳಿಸಿದರು.
ಮುಖಂಡ ಹೊನ್ನರಾಜು ಮಾತನಾಡಿ, ‘ಭ್ರಷ್ಟ ಅಧಿಕಾರಿಯೊಬ್ಬ ಗ್ರಾಮ ಪಂಚಾಯಿತಿಯ 24 ಸದಸ್ಯರ ಗಮನಕ್ಕೆ ಬಾರದಂತೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈತನ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ಪಿಡಿಒ ಲೋಕೇಶ್ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಅನುಮಾನ ಇದೆ. ಇಲಾಖೆಯ ಹಿರಿಯ ಅಧಿಕಾರಿಗಳು ಈ ಕುರಿತು ಸೂಕ್ತ ತನಿಖೆ ಮಾಡಬೇಕು’ ಎಂದು ಮುಖಂಡ ಕೃಷ್ಣಮೂರ್ತಿ ಆಗ್ರಹಿಸಿದರೆ; ‘ಪಂಚಾಯಿತಿ ಸದಸ್ಯರಿಗೆ ಅನುಮಾನ ಬಾರದ ರೀತಿ ಚಾಣಾಕ್ಷತನದಿಂದ ಅಕ್ರಮ ಎಸಗಿದ್ದಾನೆ’ ಎಂದು ಗ್ರಾ.ಪಂ ಸದಸ್ಯ ಕೆ.ಟಿ.ವೆಂಕಟೇಶ್ ದೂರಿದರು.
‘ಸದಸ್ಯ ಬಾಲರಾಜು ಅವ್ಯವಹಾರಗಳಾಗದಂತೆ ನಿಗಾ ವಹಿಸುತ್ತಾರೆ ಎಂದು ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ್ದೆವು. ಅವರು ಅವ್ಯವಹಾರ ತಡೆಯುವಲ್ಲಿ ವಿಫಲರಾಗಿದ್ದಾರೆ. ವರ್ಗಾವಣೆ ಆಗಿದ್ದ ಪಿಡಿಒನನ್ನು ಮತ್ತೆ ಕುದೂರು ಗ್ರಾ.ಪಂ.ಗೆ ಕರೆ ತಂದು ತಪ್ಪು ಮಾಡಿದ್ದು ಮಾಜಿ ಶಾಸಕ ಮಂಜುನಾಥ್’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.