ಶುಕ್ರವಾರ, ಅಕ್ಟೋಬರ್ 7, 2022
24 °C

ರಾಮನಗರ: ಪ್ರೇಯಸಿಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತನ್ನನ್ನು ಪ್ರೀತಿಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನೇ ಚಾಕುವಿನಿಂದ ಇರಿದು, ಬಳಿಕ ತಾನೂ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕೋಟೆಯಲ್ಲಿ ಮಂಗಳವಾರ ನಡೆದಿದೆ.

ರಾಮನಗರದ ನಿವಾಸಿ ವೆಂಕಟೇಶ್ (25) ಚಾಕುವಿನಿಂದ ಇರಿದುಕೊಂಡ ಯುವಕ. ಈತ ಚನ್ನಪಟ್ಟಣ ನಗರದ ಸಂಗೀತ ಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ಕೆಲಸ ಮಾಡುತ್ತಿರುವ ಕೋಟೆಯ ವರದ ರಾಜಸ್ವಾಮಿ ದೇವಸ್ಥಾನ ರಸ್ತೆಯ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆದರೆ, ಇದಕ್ಕೆ ಯುವತಿಯ ಸಮ್ಮತಿ ಇರಲಿಲ್ಲ. ತನ್ನನ್ನು ಪ್ರೀತಿಸುವಂತೆ ಯುವತಿಗೆ ಈತ ಹಲವು ಬಾರಿ ಒತ್ತಾಯಿಸಿದ್ದ. ಹೀಗಾಗಿ ಯುವತಿ ಕೆಲಸ ಬಿಟ್ಟು, ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ. 

ಈ ಹಿನ್ನೆಲೆಯಲ್ಲಿ ಮಂಗಳವಾರ ಆಕೆಯ ಮನೆಗೆ ಹೋಗಿರುವ ಯುವಕ ತನ್ನನ್ನು ಪ್ರೀತಿಸುವಂತೆ ಮತ್ತೆ ಸತಾಯಿಸಿದ್ದಾನೆ. ಇದಕ್ಕೆ ಆಕೆ ಸುತಾರಂ ಒಪ್ಪಿಲ್ಲ. ಇದರಿಂದ ಕುಪಿತಗೊಂಡ ವೆಂಕಟೇಶ್, ಯುವತಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಆಕೆಯನ್ನು ನೋಡಿ ನಂತರ ತನ್ನ ಕುತ್ತಿಗೆಗೆ ತಾನೇ ಇರಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರಿಬ್ಬರನ್ನೂ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು