ಶನಿವಾರ, ಜನವರಿ 22, 2022
16 °C
ಕೋಡಿ ಬಿದ್ದ ಕೆರೆಗಳು: ಸೇತುವೆ, ರಸ್ತೆಗಳಿಗೆ ಹಾನಿ

ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆ: ಮೊಳೆಕೆಯೊಡೆದ ರಾಗಿ, ರೈತ ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರಿದಿದ್ದು, ರಾಗಿ ಹೊಲಗಳು ಕೆಸರಿನ ಗದ್ದೆಗಳಾಗಿ ಮಾರ್ಪಾಡಾಗುತ್ತಿವೆ.

ಕೆಲವು ಕಡೆ ರಾಗಿ ತೆನೆ ಕಟಾವು ಮಾಡಿ ರಾಶಿ ಹಾಕಿದ್ದು, ನಿರಂತರ ಮಳೆಯಿಂದ ತೆನೆ ಕೊಳೆತು ರೈತರು ನಷ್ಟ ಅನುಭವಿಸುವಂತೆ ಆಗಿದೆ. ಇನ್ನೂ ಸಾಕಷ್ಟು ಕಡೆ ಕೊಯ್ಲು ನಡೆಯಬೇಕಿದ್ದು, ಮಳೆಯ ಕಾರಣಕ್ಕೆ ರೈತರು ಈ ಕಾರ್ಯ ಮುಂದೂಡಿದ್ದಾರೆ. 

ಮಾಗಡಿ ತಾಲ್ಲೂಕಿನ ಬೆಟ್ಟದಾಸಿಪಾಳ್ಯದ ರೈತ ಮುನಿರಾಜು 2 ಎಕರೆ 30 ಗುಂಟೆ ಜಮೀನಿನಲ್ಲಿ ರಾಗಿ ಬೆಳೆದಿದ್ದು 15 ದಿನಗಳ ಹಿಂದೆಯೇ ಕಟಾವು ಮಾಡಿದ್ದರು. ಆದರೆ ಮಳೆ ಕಾರಣಕ್ಕೆ ಒಕ್ಕಣೆ ಸಾಧ್ಯವಾಗಿಲ್ಲ. ಇದರಿಂದ ರಾಗಿ ತೆನೆ ಮೊಳಕೆ ಒಡೆದಿದ್ದು, ₹80 ಸಾವಿರ ನಷ್ಟ ಆಗಿರುವುದಾಗಿ ಮುನಿರಾಜು ತಿಳಿಸಿದರು.

ನಿರಂತರ ಮಳೆಯಿಂದಾಗಿ ಚನ್ನಪಟ್ಟಣ ತಾಲ್ಲೂಕಿನ ಹತ್ತಾರು ಕೆರೆಗಳು ಕೋಡಿ ತುಂಬಿ ಹರಿದಿದ್ದು, ಸೇತುವೆಗಳ ಮೇಲೆ ನೀರು ಹರಿಯತೊಡಗಿದೆ. ಕೆಲವು ಕಡೆಗಳಲ್ಲಿ ಕಚ್ಚಾ ರಸ್ತೆಗಳ ಮೇಲ್ಮೈ ಕೊಚ್ಚಿ ಹೋಗಿದ್ದು ಜನರ ಸಂಚಾರಕ್ಕೆ ತೊಂದರೆ ಆಗಿದೆ. ಮಾಗಡಿ ತಾಲ್ಲೂಕಿನ  ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಕಾವತಿ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದ ರಾಮನಗರ ತಾಲ್ಲೂಕಿನ ಗದಗಯ್ಯನದೊಡ್ಡಿ ಬಳಿ ಸೇತುವೆ ಕೊಚ್ಚಿ ಹೋಗಿದ್ದು, ಓಡಾಟಕ್ಕೆ ತೊಂದರೆ ಆಗಿದೆ.

ಮಾಗಡಿ ತಾಲ್ಲೂಕು ಒಂದರಲ್ಲಿಯೇ ಮಳೆಯಿಂದ ಕಳೆದೊಂದು ವಾರದ ಅವಧಿಯಲ್ಲಿ ಆರಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಜಿಲ್ಲೆಯ ಇತರೆಡೆಯೂ ಮನೆಗಳಿಗೆ ಹಾನಿಯಾಗಿದೆ.


ರಾಗಿ ತೆನೆ ಮೊಳಕೆ ಒಡೆದಿರುವ ದೃಶ್ಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು