ಬುಧವಾರ, ಮೇ 18, 2022
27 °C

ಮಾಗಡಿಯಲ್ಲಿ ರಾಜಕೀಯ ವೈಷಮ್ಯ: ಕೇಬಲ್‌ ತಂಡರಿಸಿ, ಕಲ್ಲು ತುಂಬಿದ ದುಷ್ಕರ್ಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ರೈತರ ಎರಡು ಕೊಳವೆಬಾವಿಗಳ ಕೇಬಲ್ ಕತ್ತರಿಸಿ, ಕಲ್ಲು ತುಂಬಿರುವ ಘಟನೆ ತಾಲ್ಲೂಕಿನ ದೊಡ್ಡಸೋಮನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಂ. ರಾಮಣ್ಣ ಮತ್ತು ರೈತ ರಾಮಕೃಷ್ಣಯ್ಯ ಅವರ ತೋಟದಲ್ಲಿರುವ ಕೊಳವೆಬಾವಿಗಳ ಕೇಬಲ್ ಕತ್ತರಿಸಿ, ಕಲ್ಲು ತುಂಬಿ ವಿಕೃತಿ ಮೆರೆದಿದ್ದಾರೆ. ಕಾಳಾರಿ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಜೆಡಿಎಸ್‌ ಪಾಲಾಗಿದೆ. ಈ ಹಿನ್ನೆಲೆಯಲ್ಲಿಯೇ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

‘ಗ್ರಾಮದಲ್ಲಿ ನಡೆದ ಆಂಜನೇಯಸ್ವಾಮಿ ಗೋಪುರ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೆವು. ವಿರೋಧಿಗಳು ಕೊಳವೆಬಾವಿಗಳ ಕೇಬಲ್ ಕತ್ತರಿಸಿ ರಾಜಕೀಯ ದ್ವೇಷ ಮೆರೆದಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿದೆ. ಕೇಬಲ್ ಕತ್ತರಿಸಿರುವುದರಿಂದ ಅಡಿಕೆ, ತೆಂಗು, ಜೋಳ, ಬಾಳೆತೋಟಗಳಿಗೆ ನೀರಿನ ಸಮಸ್ಯೆ ತಲೆದೋರಿದೆ’ ಎಂದು ಎಂ. ರಾಮಣ್ಣ ತಿಳಿಸಿದರು.

ಕ್ರಮಕ್ಕೆ ಆಗ್ರಹ: ‘ರೈತರ ಕೊಳವೆಬಾವಿಗಳ ಕೇಬಲ್ ಕತ್ತರಿಸಿ, ಕಲ್ಲು ತುಂಬಿರುವುದು ತಾಯಿಯ ಕತ್ತು ಕೊಯ್ದಂತೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಬಂಧಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ರೈತರ ಜಮೀನಿಗೆ ಸೋಮವಾರ ಭೇಟಿ ನೀಡಿ ಹೊಲದಲ್ಲಿಯೇ ರೈತರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಲ್ಲರ ವಿಶ್ವಾಸ ಪಡೆದು ಸರ್ವರ ಏಳಿಗೆಗೆ ದುಡಿಯಬೇಕು. 20 ವರ್ಷಗಳಿಂದ ಶಾಸಕರಾಗಿದ್ದವರು ಮಾಡದ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ. ಮಾಜಿ ಶಾಸಕರ ಪಟಾಲಂ ಈ ಕೃತ್ಯ ಎಸಗಿದ್ದರೆ ಅವರಿಗೆ ರೈತರ ಶಾಪ ತಟ್ಟಲಿದೆ ಎಂದರು.

ಕಾಳಾರಿ ಕಾವಲ್ ಗ್ರಾ.ಪಂ ಅಧಿಕಾರ ಜೆಡಿಎಸ್ ವಶವಾದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು. ಗ್ರಾ.ಪಂ, ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಾಜಿ ಶಾಸಕರಿಗೆ ಸೋಲುಂಟಾಗಿದೆ. ಸೋಲು ಅನುಭವಿಸಿದ ಮೇಲೆ ತೋಳ್ಬಲ ತೋರಿಸಿರುವುದು ತಪ್ಪು. ಕೂಡುಕುಟುಂಬ ಒಡೆದು ಮನೆಗೆ ಮೂರು ಬಾಗಿಲು ಹಿಡಿಸಿದ್ದವರನ್ನು ಮತದಾರರು ಮನೆಗೆ ಕಳಿಸಿದ್ದಾರೆ ಎಂದು ಟೀಕಿಸಿದರು.

‘ಕಾಳಾರಿ ಕಾವಲ್ ಗ್ರಾಮ ಪಂಚಾಯಿತಿ ಜೆಡಿಎಸ್ ವಶವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನನಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ. ರಾಮಣ್ಣ ತಿಳಿಸಿದರು.

‘ನನ್ನ ತೋಟದಲ್ಲಿದ್ದ ಕೊಳವೆಬಾವಿಯ ಕೇಬಲ್ ಕತ್ತರಿಸಿ, ಕಲ್ಲು ತುಂಬಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಶಾಸಕರು ನಮಗೆ ರಕ್ಷಣೆ ಕೊಡಿಸಬೇಕು’ ಎಂದು ಕೋರಿದರು.

ಕಾಳಾರಿ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮಾತನಾಡಿ, ಮಾಜಿ ಶಾಸಕರು ಗ್ರಾ.ಪಂ ಚುನಾವಣೆಯಲ್ಲಿನ ಸೋಲನ್ನು ಆರೋಗ್ಯಕರವಾಗಿ ಸ್ವೀಕರಿಸಿಲ್ಲ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶಿವಮ್ಮ ರಾಮಣ್ಣ, ಗ್ರಾ.ಪಂ ಸದಸ್ಯ ಶಿವರಾಮಯ್ಯ, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಮುಖಂಡರಾದ ಕೆ. ಕೃಷ್ಣಮೂರ್ತಿ, ಕೆಂಪಾಪುರದ ನಟರಾಜ್, ಚಿಕ್ಕಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು