ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲಾಸ್ಪತ್ರೆಯಲ್ಲಿ 300 ಹಾಸಿಗೆ ವ್ಯವಸ್ಥೆ‘

ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ; ಡಿಸಿಎಂ ಅಶ್ವತ್ಥನಾರಾಯಣ ಸ್ಪಷ್ಟನೆ
Last Updated 18 ಮೇ 2021, 15:09 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ನೂತನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗಾಗಿ ಮೊದಲ ಹಂತದಲ್ಲಿ 150 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದಲೇ ಇವುಗಳ ಬಳಕೆಯನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ‌ಅಶ್ವತ್ಥನಾರಾಯಣ ಹೇಳಿದರು.

ಹೊಸ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎರಡನೇ ಹಂತದಲ್ಲಿ ಮುಂದಿನ 15 ದಿನಗಳಲ್ಲಿ ಇನ್ನು 150 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲಿಗೆ ಒಟ್ಟು 300 ಹಾಸಿಗೆಗಳಾಗುತ್ತವೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಎಲ್ಲ ಕ್ರಮ ವಹಿಸಲಾಗಿದೆ. ಎರಡನೇ ಅಲೆ ಹಾಗೂ ಸಂಭನೀಯ ಮೂರನೇ ಅಲೆ ಬಂದರೂ ಸಮಸ್ಯೆಯಾಗದಂತೆ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಹಾಸಿಗೆಗಳನ್ನು ಹಾಕಲಾಗುತ್ತಿದೆ. ಜತೆಗೆ, ಕಂದಾಯ ಭವನದಲ್ಲಿ ಈಗ 35 ಆಮ್ಲಜನಕ ಹಾಸಿಗೆ ಇದ್ದು, ಅಲ್ಲಿ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಯಾವುದೇ ತುರ್ತು ಸಂದರ್ಭ ಎದುರಾದರೂ ಜಿಲ್ಲಾ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಹೋಮ್‌ ಐಸೋಲೇಷನ್‌ ಇಲ್ಲ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇನ್ನು ಮುಂದೆ ಕೋವಿಡ್‌ ಸೋಂಕಿತರನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡುವುದಿಲ್ಲ. ಸೋಂಕು ಕಂಡು ಬಂದೊಡನೆ ಅವರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಿ ಆರೈಕೆ ಮಾಡಲಾಗುವುದು. ಅಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಇರುತ್ತಾರೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಆಮ್ಲಜನಕದ ಕೊರತೆಯೂ ಇಲ್ಲ. ಈಗಾಗಲೇ 6.8 ಟನ್‌ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಮಂಜೂರಾಗಿದೆ. ಸದ್ಯಕ್ಕೆ 3.5 ಕೆ.ಎಲ್‌ನಷ್ಟು ಆಮ್ಲಜನಕ ಬಳಕೆಯಾಗುತ್ತಿದೆ. ಇದರ ಜತೆಗೆ, ಆಮ್ಲಜನಕ ಸಾಂದ್ರಕಗಳು, ಹೆಚ್ಚುವರಿ ಸಿಲಿಂಡರ್‌ಗಳೂ ನಮ್ಮಲ್ಲಿವೆ. ಹೀಗಾಗಿ ಎಲ್ಲೂ ಕೊರತೆ ಎಂಬುದಿಲ್ಲ ಎಂದರು.

ರಾಜ್ಯದಲ್ಲಿ ಒಟ್ಟು 60 ಸಾವಿರ ಆಮ್ಲಜನಕ ಬೆಡ್‌ಗಳಿದ್ದು, ಅದರಲ್ಲಿ ಅರ್ಧದಷ್ಟು ಹಾಸಿಗೆಗಳು ಬೆಂಗಳೂರು ನಗರದಲ್ಲೇ ಇವೆ. ಇನ್ನೂ ಎಲ್ಲ ತಾಲೂಕು, ಜಿಲ್ಲಾ ಆಸ್ಪತ್ರೆ ಸೇರಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯಲ್ಲೂ ಯಾವುದೇ ಸಮಸ್ಯೆ ಇಲ್ಲ. ಅದೇ ರೀತಿ ರೆಮಿಡಿಸಿವರ್‌ ಸೇರಿ ಯಾವ ಔಷಧದ ಕೊರತೆಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್, ಸಿಇಒ ಇಕ್ರಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌, ಉಪ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಡಿಎಚ್‌ಒ ಡಾ.ನಿರಂಜನ, ಆರ್‌ಸಿಎಚ್‌ ಅಧಿಕಾರಿ ಪದ್ಮಾ ಇದ್ದರು.


ಆರೋಗ್ಯ ಕೇಂದ್ರಗಳಿಗೆ ಭೇಟಿ
ಕಂದಾಯ ಭವನದ ರೆಫರಲ್‌ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿಎಂ, ಅಲ್ಲಿನ‌ ಚಿಕಿತ್ಸೆ ಬಗ್ಗೆ ಸಿಬ್ಬಂದಿ ಜತೆ ಮಾತನಾಡಿದರು. ಚಿಕಿತ್ಸಾ ವ್ಯವಸ್ಥೆ, ಔಷಧಿ ಇತ್ಯಾದಿ ಬಗ್ಗೆ ಮಾಹಿತಿ ಪಡೆದರು. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಲಭ್ಯತೆ ಬಗ್ಗೆಯೂ ಮಾಹಿತಿ ಪಡೆದರು.

ರಾಮನಗರದ ಮೆಹಬೂಬ್ ನಗರದ ನಗರ ಪ್ರಾಥಮಿಕ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ರಾಮನಗರ ತಾಲ್ಲೂಕಿನ ಕಣ್ವ ಪ್ರಾಥಮಿಕ ಆರೋಗ್ಯ ಹಾಗೂ ಸುಗ್ಗನಹಳ್ಳಿಯಲ್ಲಿ ಇರುವ ಆಯುಷ್ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಸುಗ್ಗನಹಳ್ಳಿಯಲ್ಲಿ ಕೋವಿಡ್ ಸೋಂಕಿತರಿದ್ದು, ಅವರು ಚಿಕಿತ್ಸೆ ಬಗ್ಗೆ ಸ್ಥಳೀಯ ವೈದ್ಯರಿಂದ‌ ಮಾಹಿತಿ ಪಡೆದರು. ರೋಗಿಗಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಜತೆಯೂ ಮಾತನಾಡಿದರು.

ಸುಗ್ಗನಹಳ್ಳಿ ಆರೈಕೆ ಕೇಂದ್ರದಲ್ಲಿ ಸೋಂಕಿತರ ಜತೆಗೂ ಮಾತನಾಡಿದ ಡಿಸಿಎಂ, ಅವರ ಊಟ- ಉಪಚಾರದ ಬಗ್ಗೆ ವಿಚಾರಿಸಿದರು. ಎಲ್ಲರೂ ಚೆನ್ನಾಗಿದೆ ಎಂದು‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT