ಮಾಗಡಿ: 'ಅದೊಂದಿತ್ತು ಕಾಲ. ಮಾಗಡಿಯಲ್ಲಿ ಪೌರಾಣಿಕ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹವಿತ್ತು. ಇದು ಕಲಾವಿದರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿತ್ತು. ಈ ತಾಲ್ಲೂಕಿನಲ್ಲಿ ನಡೆಯುವಷ್ಟು ಪೌರಾಣಿಕ ನಾಟಕಗಳು ಎಲ್ಲಿಯೂ ನಡೆಯುತ್ತಿರಲಿಲ್ಲ. ಮಾಗಡಿ ಅದೆಷ್ಟೊ ರಂಗಭೂಮಿ ಕಲಾವಿದರನ್ನು ಬೆಳೆಸಿದೆ...’ ಜುಟ್ಟನಹಳ್ಳಿ ಗ್ರಾಮದ ರಂಗಭೂಮಿ ಕಲಾವಿದ ಎನ್.ಮಲ್ಲೇಶ್ ರಂಗಭೂಮಿಯೊಂದಿಗಿನ ತಮ್ಮ 50 ವರ್ಷಗಳ ನಂಟಿನ ಬಗ್ಗೆ ಹೇಳುವ ಮಾತುಗಳಿವು.
ಪೌರಾಣಿಕ ನಾಟಕ, ಅದರಲ್ಲೂ ಕೃಷ್ಣನ ಮಾತ್ರ ಎಂದರೆ ಇವರ ಮೈಯಲ್ಲಿ ಹುರುಪು ತುಂಬಿಕೊಳ್ಳುತ್ತದೆ. ಶ್ರೀಕೃಷ್ಣ ಸಂಧಾನ ನಾಟಕದ ಕೃಷ್ಣನ ಪಾತ್ರದಿಂದಲೇ ಜನಪ್ರಿಯತೆ ಗಳಿಸಿಕೊಂಡ ಮಲ್ಲೇಶ್ ಕೃಷ್ಣನ ವೇಷ ಧರಿಸಿದ್ದು ಒಂದಲ್ಲ, ಎರಡಲ್ಲ, ನೂರಾರು ಬಾರಿ.
ಚಿಕ್ಕಂದಿನಿಂದಲೇ ರಂಗಭೂಮಿಯ ನಂಟು ಬೆಳೆಸಿಕೊಂಡ ಮಲ್ಲೇಶ್‌ಗೆ ಏಳನೇ ತರಗತಿಯಲ್ಲಿ ಇರುವಾಗ ರಂಗಭೂಮಿಯ ಒಡನಾಟ ಶುರುವಾಯಿತು. ಅವರಿಗೆ ಮೊದಲು ಒಲಿದು ಬಂದ ಕೃಷ್ಣನ ಪಾತ್ರದ ಬಗ್ಗೆ ಅವರು ಆಸಕ್ತಿಕರ ಕಥೆಯೊಂದನ್ನು ಹೇಳುತ್ತಾರೆ. ಗ್ರಾಮದಲ್ಲಿ ಪಾಂಡು ವಿಜಯ ಪೌರಾಣಿಕ ನಾಟಕಕ್ಕೆ ತಯಾರಿ ನಡೆದಿತ್ತು. ಶಾಲೆ ಮುಗಿಸಿಕೊಂಡ ಮಲ್ಲೇಶ್, ಕಲಾವಿದರು ನಾಟಕ ಕಲಿಯುವ ಜಾಗದತ್ತ ದೌಡಾಯಿಸುತ್ತಿದ್ದರು. ರಾತ್ರಿಯಿಡಿ ಅವರೊಡನೆ ಇದ್ದು, ಅವರ ಹಾವ–ಭಾವ–ಬಂಗಿ, ಅಭಿನಯ, ಸಂಭಾಷಣೆಗಳನ್ನೆಲ್ಲಾ ಗಮನವಿಟ್ಟು ನೋಡುತ್ತಿದ್ದರು. ಅಭಿನಯದ ಬಗ್ಗೆ ಮಲ್ಲೇಶ್ ಅವರಿಗಿದ್ದ ಒಲವನ್ನು ಗುರುತಿಸಿದ ನಾಟಕದ ಮಾಸ್ಟರ್ ಮೊದಲ ಬಾರಿಗೆ ಪಾಂಡು ವಿಜಯ ಪೌರಾಣಿಕ ನಾಟಕದಲ್ಲಿ ದ್ರೌಪದಿಯ ಸೀರೆ ಎಳೆಯುವ ಸಮಯದಲ್ಲಿ ದ್ರೌಪದಿಗೆ ಸೀರೆ ಕೊಡುವ ಕೃಷ್ಣನ ಪಾತ್ರವನ್ನು ಮಲ್ಲೇಶ್ ಅವರಿಗೆ ಕೊಟ್ಟರು. ಇಲ್ಲಿಂದಲೇ ರಂಗಭೂಮಿಯಲ್ಲಿ ಮೊದಲ ಹೆಜ್ಜೆಯನ್ನೂರಿದ ಮಲ್ಲೇಶ್, ಮುಂದೆ ಅದೆಷ್ಟು ಬಾರಿ ಕೃಷ್ಣನ ವೇಷ ಧರಿಸಿದರೊ ಲೆಕ್ಕವೇ ಇಲ್ಲ.
ಮುಂದೆ 10ನೇ ತರಗತಿ ಪೂರೈಸಿದ ಮಲ್ಲೇಶ್, ರಂಗಭೂಮಿಯಲ್ಲಿಯೇ ಬದುಕು–ಭವಿಷ್ಯ ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪೌರಾಣಿಕ ನಾಟಕಗಳ ನಿರ್ದೇಶಕರಾಗಿದ್ದ ಪಿ. ವಜ್ರಪ್ಪನವರ ಗರಡಿಗೆ ಬಂದು ತಲುಪಿದ ಮಲ್ಲೇಶ್, ಅಲ್ಲಿಯೇ ಪೌರಾಣಿಕ ನಾಟಕಗಳ ಮಜಲುಗಳನ್ನು ಕಲಿತರು. ಮುಂದೆ ಜುಟ್ಟನಹಳ್ಳಿ ತಂಡವನ್ನು ಕಟ್ಟಿಕೊಂಡು ಹಲವು ಕುರುಕ್ಷೇತ್ರ ನಾಟಕಗಳನ್ನು ಆಡಿದರು. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸತತ 50 ರಿಂದ 60 ಬಾರಿ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ ಮಲ್ಲೇಶ್ ಕಲಾರಸಿಕರ ಮೆಚ್ಚುಗೆ ಪಡೆದಿದ್ದಾರೆ.
ಸಿನಿಮಾ ರಂಗದ ಹಿರಿಯ ಕಲಾವಿದ ಕರಿಬಸಯ್ಯ ಮಹೇಶ್ ಅವರ ನಟನೆಯನ್ನು ನೋಡಿ ಅವರ ಅಭಿನಯಕ್ಕೆ ಮನಸೋತು, ತಾವು ನಟಿಸುತ್ತಿದ್ದ ಬಬ್ರುವಾಹನ ನಾಟಕದಲ್ಲಿ ಮಲ್ಲೇಶ್ ಅವರಿಗೆ ಕೃಷ್ಣನ ಪಾತ್ರವನ್ನು ಕೊಟ್ಟರು. ಡಾ. ರಾಜಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಮ್ಮುಖದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡುವಾಗಿನ ರೋಮಾಂಚನವನ್ನು ಮಲ್ಲೇಶ್ ಹಂಚಿಕೊಂಡರು.
ಸಿನಿಮಾ ನಂಟು: ಅನಂತರದ ದಿನಗಳಲ್ಲಿ ಸಿನಿಮಾ ನಂಟು ಬೆಳೆದರೂ ರಂಗಭೂಮಿಯ ಮೇಲಿನ ಪ್ರೇಮದಿಂದ ಮಲ್ಲೇಶ್ ಅದನ್ನೂ ನಿರಾಕರಿಸಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವಾಗ ಚಿತ್ರರಂಗದ ಸಂಪರ್ಕ ಬೆಳೆಯಿತು. ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ನಡೆದ ಪೌರಾಣಿಕ ನಾಟಕಕ್ಕೆ ಕನ್ನಡ ಚಲನಚಿತ್ರದ ಖಳನಾಯಕ ವಜ್ರಮುನಿ ಹಾಗೂ ಹಾಸ್ಯ ಕಲಾವಿದ ಮುಸುರಿ ಕೃಷ್ಣಮೂರ್ತಿ ಅವರನ್ನು ಕರೆಸಿ ಪೌರಾಣಿಕ ನಾಟಕವನ್ನು ನಡೆಸಿದ ಕೀರ್ತಿ ಮಲ್ಲೇಶ್ ಅವರಿಗೆ ಸಲ್ಲುತ್ತದೆ. ಮುಂದೆ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶ ಬಂದರೂ ಅವರು ರಂಗಭೂಮಿಯೇ ಸಾಕು ಎಂದಿದ್ದರು.
ರಂಗಭೂಮಿಯೇ ನನ್ನುಸಿರು. 50 ವರ್ಷಗಳ ಕಾಲ ರಂಗಭೂಮಿಯಲ್ಲಿ ಶ್ರಮಿಸಿದ ತೃಪ್ತಿ ನನಗಿದೆ. ಆ ಅನುಭವಕ್ಕಿಂತ ದೊಡ್ಡ ಸಂಪಾದನೆ ಬೇರೆ ಇಲ್ಲ ಎನ್ನುತ್ತ ತಮ್ಮ ಸಾರ್ಥಕ ಕ್ಷಣಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾರೆ ಮಲ್ಲೇಶ್.
ರಂಗಭೂಮಿ ತೃಪ್ತಿ ತಂದಿದೆ
ಬಬ್ರುವಾಹನ ನಾಟಕದಲ್ಲಿ ನಾನು ಕೃಷ್ಣನ ಪಾತ್ರ ಮಾಡಿದಾಗ ನನ್ನ ಅಭಿನಯವನ್ನು ಡಾ. ರಾಜಕುಮಾರ್ ಬಹುವಾಗಿ ಮೆಚ್ಚಿಕೊಂಡರು. ಮಲ್ಲೇಶರನ್ನು ವೇದಿಕೆಗೆ ಕರೆಯರಿ ಎಂದು ಡಾ.ರಾಜಕುಮಾರ್ ನನ್ನನ್ನು ಕರೆಸಿ ವೇದಿಕೆ ಮೇಲೆ ಬೆನ್ನು ತಟ್ಟಿ, ಚೆನ್ನಾಗಿ ಅಭಿನಯಿಸುತ್ತೀರಿ ಎಂದು ಹೊಗಳಿದ ಕ್ಷಣ ಈಗಲೂ ಕಣ್ಮುಂದೆ ಕಟ್ಟಿದಂತಿದೆ. ಮೇರು ನಟ ನನ್ನನ್ನು ತಬ್ಬಿಕೊಂಡಿ ಅಭಿನಂದಿಸಿದ ಕ್ಷಣ ರಂಗಭೂಮಿಗೆ ಬಂದಿದ್ದಕ್ಕೂ ಸಾರ್ಥಕವಾಯಿತು ಎಂದು ಅನಿಸಿತ್ತು.
ಪೌರಾಣಿಕ ನಾಟವನ್ನು ಮಾಡುತ್ತಿದ್ದ ಕಬ್ಬನ್ ಪೇಟೆ ಶಿವಣ್ಣ ಅವರು ನನಗೆ ಚಿತ್ರರಂಗಕ್ಕೆ ಬರುವಂತೆ ಕರೆದರು. ಡಾ.ರಾಜ್ ಕುಮಾರ್ ಸೇರಿದಂತೆ ಅನೇಕರಿಗೆ ಮೇಕಪ್ ಮಾಡುತ್ತಿದ್ದ ಮತ್ತು ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದ ಶಿವಣ್ಣನವರು ಡಾ.ರಾಜ್ ಕುಮಾರ್ ಅವರ ಜತೆ ಅಭಿನಯಿಸುವ ಸುವರ್ಣಾವಕಾಶವನ್ನು ನನಗೆ ಕೊಟ್ಟರು. ಆದರೆ, ನನಗೆ ಚಿತ್ರರಂಗದಲ್ಲಿ ಆಸಕ್ತಿ ಇರಲಿಲ್ಲ. ಚಿತ್ರರಂಗದತ್ತ ಹೋಗಿದ್ದರೆ ಮತ್ತಷ್ಟು ಹೆಸರು ಗಳಿಸುತ್ತಿದ್ದೆ. ಅಂತಹ ಅವಕಾಶವನ್ನು ಕೈಬಿಡಬಾರದಿತ್ತು ಎಂದು ಈಗ ಅನಿಸುತ್ತದೆ.
ಆದರೆ, ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ ತೃಪ್ತಿ ಇದೆ. ರಾಮನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅನೇಕ ಕಡೆ ಪೌರಾಣಿಕ ನಾಟಕಗಳಲ್ಲಿ ಭಿನಯಿಸಿದ ಪಾತ್ರಕ್ಕೆ ಹಲವಾರು ಬಿರುದುಗಳು, ಪ್ರಶಸ್ತಿಗಳನ್ನು ಬಂದಿವೆ. ರಂಗಭೂಮಿಗೆ ನೀಡಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿದೆ. ಈಗ ನಾಟಕಗಳಲ್ಲಿ ಅಭಿನಯಿಸುತ್ತಿಲ್ಲ, ಯುವ ಕಲಾವಿದರಿಗೆ ಮಾರ್ಗದರ್ಶನ ಕೊಡುವ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿಯೂ ಒಂದು ಸೇವಾತೃಪ್ತಿ ಅಡಗಿದೆ.
–ಮಲ್ಲೇಶ್, ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.