ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಕನಕಪುರ: ವಜ್ರ, ವೈಡೂರ್‍ಯಗಳ ತಾಣ ಈ ಬೃಹತ್‌ ಬಂಡೆಗಳು !

ರಾಜರ ಕಾಲದಲ್ಲಿ ಇಡಲಾಗಿದೆ ಎಂಬುದು ನಂಬಿಕೆ * ದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ಆಗ್ರಹ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕನಕಪುರ: ವಿಶಾಲವಾಗಿ ಹರಡಿಕೊಂಡಿರುವ ಬೃಹತ್‌ಗಾತ್ರದ ಬಂಡೆ. ಅದರೊಳಗೆ ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಹೋಗುವ ಪುರಾತನ ಕಾಲದ ಸುರಂಗ ಮಾರ್ಗ. ವಜ್ರ ವೈಡೂರ‍್ಯಗಳಿದ್ದು ಅದನ್ನು ಸರ್ಪ ಕಾವಲು ಕಾಯುತ್ತಿದೆ ಎಂಬುದು ಜನರ ಪ್ರತೀತಿ.

ತಾಲ್ಲೂಕಿನ ಸಾತನೂರು ಹೋಬಳಿ ನಾಗರಸನಕೋಟೆ ಗ್ರಾಮಕ್ಕೆ ಸೇರಿದ ಸುಮಾರು 5 ಎಕರೆಯಷ್ಟು ವಿಶಾಲವಾದ ಬಂಡೆ ಮೇಲೆ ನೆಲೆಗೊಂಡಿರುವ ಬಂಡೆಗುಡಿ ಬಸಪ್ಪ ದೇವಾಲಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ನಾಗರಸನಕೋಟೆ ಮತ್ತು ಚಿಕ್ಕಾಲಹಳ್ಳಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ಇಲ್ಲಿಗೆ ಬಂದು ವಿಶೇಷ ಸಂದರ್ಭದಲ್ಲಿ ಪೂಜೆ ನೆರವೇರಿಸುತ್ತಾರೆ.

ಗ್ರಾಮದಲ್ಲಿ ಯಾವುದಾದರೂ ಸಮಸ್ಯೆ, ವಿಘ್ನ ಎದುರಾದಾಗ ಇಲ್ಲಿಗೆ ಬಂದು ಸಿಹಿ ಅನ್ನದ ತಳಿಗೆ ಮಾಡಿಸಿ ಎಲ್ಲರೂ ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸುವ ಮೂಲಕ ವಿಘ್ನ ನಿವಾರಿಸಿಕೊಳ್ಳುತ್ತಾರೆ. ಬಸವೇಶ್ವರ ದೇಗುಲಕ್ಕೆ ಮಡಿಯಲ್ಲೇ ಹೋಗಬೇಕು. ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ತೆಗೆದುಕೊಂಡು ಹೋದರೆ ಅಡ್ಡಲಾಗಿ ಸರ್ಪ ಬಂದು ವಸ್ತುವನ್ನು ವಾಪಸು ಹಾಕುವ ತನಕ ಬಿಡುವುದಿಲ್ಲ ಎನ್ನುವುದು ಜನರ ನಂಬಿಕೆ.

ವಿಶಾಲವಾದ ಆವರಣ, ಚಿಕ್ಕದಾದ ಸಮುದಾಯ ಭವನ, ನೀರಿನ ಕೊಳ ಎಲ್ಲ ರೀತಿಯ ಅನುಕೂಲ ಇರುವುದರಿಂದ ಇಲ್ಲಿ ವಿವಾಹ ಕಾರ್ಯಕ್ರಮಗಳು ಜರುಗುತ್ತವೆ. ಮೊದಲಿಗೆ ರಸ್ತೆ ಸಮಸ್ಯೆ ಇದ್ದರಿಂದ ಇಲ್ಲಿಗೆ ಬರಲು ಕಷ್ಟವಾಗುತ್ತಿತ್ತು. ಈಚೆಗೆ ಕಾಂಕ್ರೀಟ್‌ ರಸ್ತೆ ಆಗಿರುವುದರಿಂದ ತುಂಬ ಅನುಕೂಲವಾಗಿದೆ. ಒಂದು ಸಾವಿರ ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ಸಮುದಾಯ ಭವನ ನಿರ್ಮಾಣವಾದರೆ ಜನರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಸುತ್ತಲಿನ ಗ್ರಾಮಗಳಲ್ಲಿ ಹಬ್ಬ ಅಥವಾ ಜಾತ್ರೆಗೆ ಮೊದಲು ಬಂಡೆಗುಡಿ ಬಸಪ್ಪ ದೇವಾಲಯಕ್ಕೆ ಬಂದು ಪೂಜೆ ನೆರವೇರಿಸಿಕೊಂಡು ಹೋಗುವುದು ವಾಡಿಕೆ. ಗ್ರಾಮಕ್ಕೆ ವಿಘ್ನ ಎದುರಾದಗಲೂ ಗ್ರಾಮಸ್ಥರು ಪೂಜೆ ಮಾಡುತ್ತಾರೆ.

ಪುರಾತನ ಕಾಲದಲ್ಲಿ ಯೋಗಿಗಳು ಇಲ್ಲಿ ಧ್ಯಾನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಡೆಯೊಳಗೆ ಸುರಂಗ ಮಾರ್ಗವಿದ್ದು ಅದು ರೇವಣಸಿದ್ದೇಶ್ವರನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತದೆ. ಬಂಡೆಯೊಳಗೆ ದೊಡ್ಡ ಗುಹೆಗಳಿದ್ದು ಅದರಲ್ಲಿ ರಾಜರ ಕಾಲದಲ್ಲಿ ಇಡಲಾಗಿದ್ದ ವಜ್ರ ವೈಡೂರ‍್ಯಗಳಿವೆ ಎಂಬ ನಂಬಿಕೆ ಈಗಲೂ ಇದೆ.

ಬಂಡೆ ಮೇಲೆ ರಹಸ್ಯ ಸ್ಥಳದ ಗುರುತುಗಳಿವೆ. ಈ ಬಗ್ಗೆ ಸಂಶೋಧನೆ ನಡೆಸಬೇಕು ಎನ್ನುತ್ತಾರೆ ಚಿಕ್ಕಾಲಹಳ್ಳಿ ಲೋಕೇಶ್‌.

ಇಲ್ಲಿ ಸೋಮವಾರ ತಳಿಗೆ ಮತ್ತು ವಾರ್ಷಿಕವಾಗಿ ಪರವನ್ನು ಮಾಡುವುದರಿಂದ ತಳಿಗೆ ಮತ್ತು ಅಡುಗೆ ಮನೆ ನಿರ್ಮಾಣ ಮಾಡಬೇಕಿದೆ. ಮದುವೆ ಮತ್ತಿತರ ಕಾರ್ಯಕ್ರಮ ನಡೆಯುವುದರಿಂದ ದೊಡ್ಡಮಟ್ಟದಲ್ಲಿ ಸಮುದಾಯ ಭವನ ಅವಶ್ಯವಿದೆ ಎನ್ನುತ್ತಾರೆ ಪಟೇಲ್‌ ಪುಟ್ಟಸ್ವಾಮಿ ಹಾಗೂ ನಾಗರಸನಕೋಟೆ ಗ್ರಾಮದ ಮುಖಂಡರು.

ಈ ದೇವಾಲಯ ತುಂಬಾ ಪುರಾತನವಾಗಿದೆ. ಇಲ್ಲಿಗೆ ಹೋಗಲು ರಸ್ತೆ ಇಲ್ಲ. ಅಡ್ಡಲಾಗಿ ದೊಡ್ಡ ಹಳ್ಳವಿತ್ತು. ಜನರ ಒತ್ತಾಯದಂತೆ ಸಂಸದ ಡಿ.ಕೆ.ಸುರೇಶ್‌ ಅವರು ಎರಡು ವರ್ಷಗಳ ಹಿಂದೆ ದೇವಸ್ಥಾನದ ರಸ್ತೆ, ಸೇತುವೆ ಮತ್ತಿತರ ಅಭಿವೃದ್ಧಿಗೆ ₹3 ಕೋಟಿ ಮಂಜೂರು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎನ್ನುತ್ತಾರೆ ಸಾತನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಜೆ.ನಾಗರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT